ಹುಬ್ಬಳ್ಳಿ(ಡಿ.24): ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ ಎಂದು ಮತ್ತೆ ಹೇಳಿಕೊಂಡಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ, ಈ ಸಂಬಂಧ ಶೀಘ್ರದಲ್ಲೇ ಭಕ್ತರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಳೆದ ಕೆಲದಿನಗಳಿಂದ ಶಾಂತವಾಗಿದ್ದ ಇಲ್ಲಿನ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರುವ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಧುತ್ತೆಂದು ಕೇಳಿ ಬಂದಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ. ಈ ಸಂಬಂಧ ಈಗಾಗಲೇ ತಮಗೆ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಬರೆದುಕೊಟ್ಟಿದ್ದುಂಟು. ಆದರೆ, ಕೆಲವರು ಬೇಕಂತಲೇ ನನಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಭಕ್ತರ ಸಭೆ ನಡೆಸುತ್ತೇನೆ. ವಿವಾದ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದಿನ ಕೆಟ್ಟ ಪರಿಸ್ಥಿತಿಗೆ ನಾವೇ ಕಾರಣ, ಕೊರೋನಾ ಹರಡದಂತೆ ತಡೆಯೋಣ: ದಿಂಗಾಲೇಶ್ವರ ಶ್ರೀ

ಇಷ್ಟೊತ್ತಾಗಲೇ ಉತ್ತರಾಧಿಕಾರಿ ನೇಮಕದ ವಿವಾದ ಬಗೆಹರಿಯುತ್ತಿತ್ತು. ಆದರೆ, ಕೊರೋನಾದಿಂದಾಗಿ ಅದು ವಿಳಂಬವಾಗಿದೆ. ಇದೀಗ ಕೊರೋನಾ ಕಡಿಮೆಯಾಗಿದೆ. ಹೀಗಾಗಿ ಮತ್ತೆ ಇದಕ್ಕಾಗಿ ಪ್ರಯತ್ನಿಸಲಾಗುವುದು. ಶೀಘ್ರದಲ್ಲಿ ಭಕ್ತರ ಸಭೆ ನಡೆಸಿ ಬಗೆಹರಿಸುತ್ತೇವೆ ಎಂದು ನುಡಿದರು.

ಮಠದ ಶ್ರೀಗಳು ಸೌಮ್ಯ ಸ್ವಭಾವದವರು. ಅವರ ಈ ಸೌಮ್ಯತೆಯನ್ನೇ ದುರುಪಯೋಗಪಡಿಸಿಕೊಂಡು ಕೆಲವರು ಅಲ್ಲಿ ಅಕ್ರಮ ನಡೆಸಿದ್ದಾರೆ. ಕೆಲವೊಂದಿಷ್ಟು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಮ್ಮ ಆಕ್ಷೇಪವಿದೆ ಎಂದರು.