ಲಕ್ಷ್ಮೇಶ್ವರ(ಏ.02): ಮನುಕುಲಕ್ಕೆ ಕಂಟಕವಾಗಿರುವ ಕೊರೋನಾ ಮಹಾಮಾರಿಯಿಂದ ನಮ್ಮ ಕುಟುಂಬ, ರಾಜ್ಯ, ರಾಷ್ಟ್ರದ ರಕ್ಷಣೆಗಾಗಿ ಇರುವ ಏಕೈಕ ಮಾರ್ಗ ಎಲ್ಲರೂ ಮನೆಯಲ್ಲಿಯೇ ಇರುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸರ್ಕಾರದ ನಿಯಮ, ಸೂಚನೆಗಳನ್ನು ಶಿಸ್ತು, ಸಂಯಮ, ಜವಾಬ್ದಾರಿಯುತವಾಗಿ ಪಾಲಿಸುವ ಮೂಲಕ ಈ ವೈರಾಣು ಹೊಡೆದೂಡಿಸುವ ತಾರಕಶಕ್ತಿಯಾಗಿ ನಿಲ್ಲೋಣ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿ, ಭಾರತೀಯ ಸಂಸ್ಕೃತಿ, ಆಚರಣೆ, ಪದ್ಧತಿ, ಸಂಪ್ರದಾಯಗಳ ಮೂಲಕ ನಮ್ಮ ಹಿರಿಯರು ನಮಗೆ ಆರೋಗ್ಯದ ಗುಟ್ಟನ್ನು ತಿಳಿಸಿಕೊಟ್ಟಿದ್ದರು. ನಿತ್ಯದ ಸ್ನಾನ, ಊಟ, ಉಡುಗೆ, ಆಚಾರ-ವಿಚಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇಂದಿನ ತಂತ್ರಜ್ಞಾನ, ಪಾಶ್ಚಾತ್ತೀಕರಣ, ಒತ್ತಡದ ಬದುಕಿನಲ್ಲಿ ಎಲ್ಲವೂ ಮರೆಯಾಗಿದ್ದು, ನಮ್ಮ ಇಂದಿನ ಕೆಟ್ಟ ಪರಿಸ್ಥಿತಿಗೆ ನಾವೇ ಕಾರಣರಾಗುತ್ತಿದ್ದೇವೆ. ಈಗಾಗಲೇ ಅದು ನಮ್ಮ ದೇಶವಷ್ಟೇ ಅಲ್ಲದೇ ನಮ್ಮ ಸುತ್ತಮುತ್ತಲೂ ಆವರಿಸಿಕೊಂಡಿದ್ದು ಅತ್ಯಂತ ಭಯಾನಕ ಪರಿಸ್ಥಿತಿಯಲ್ಲಿ ಇದ್ದೇವೆ.

ಕೊರೋನಾದಿಂದ ಪ್ರಾಣಿ, ಪಕ್ಷಿಗಳಿಗೆ ಪೂರಕ ವಾತಾವರಣ: ಮನೆ ಬಾಗಿ​ಲಿಗೆ ನವಿ​ಲು​ಗ​ಳ ಎಂಟ್ರಿ!

ಈ ರೋಗ ಬಂದಿರುವ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ತಂದೆ-ತಾಯಿ, ಹೆಂಡತಿ-ಮಕ್ಕಳು, ಒಡಹುಟ್ಟಿದವರು ಹೋಗದಂತಹ ಪರಿಸ್ಥಿತಿ ಇದೆ. ಕೊರೋನಾ ವೈರಸ್‌ ಹರಡದಂತೆ ತಡೆಯಲು ಆರೋಗ್ಯ ಇಲಾಖೆ, ಪೊಲೀಸ್‌, ಸ್ಥಳೀಯ ಆಡಳಿತ ಸಿಬ್ಬಂದಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಜೀವವೊಂದು ಉಳಿದರೆ ಭವಿಷ್ಯದ ದಿನಗಳಲ್ಲಿ ನಾವು ಅಂದುಕೊಂಡಂತೆ ಬದುಕಬಹುದು. ಆದ್ದರಿಂದ ಎಲ್ಲರೂ ನಮ್ಮ ಆಸೆ, ಆಸಕ್ತಿ, ಅವಶ್ಯಕತೆ, ಹಿತಾಸಕ್ತಿಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಂಡು ನಮ್ಮವರ ಉಳಿವಿಗಾಗಿ ಸಂಕಲ್ಪ ಮಾಡಬೇಕಿದೆ. ಇಷ್ಟಾಗಿಯೂ ಸರ್ಕಾರದ ನಿಯಮ ಸೂಚನೆಗಳನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಬದುಕು ಕಷ್ಟದಾಯಕವಾಗುತ್ತದೆ. ನಮ್ಮವರ ಅಂತ್ಯಕ್ಕೆ ನಾವೇ ಕಾರಣರಾಗುತ್ತೇವೆ. ಈ ಸಾಂಕ್ರಾಮಿಕ ಸೋಂಕನ್ನು ಹೊಡೆದೊಡಿಸಿ ನಮಗಾಗಿ ನಮ್ಮ ದೇಶ ರಕ್ಷಣೆಗಾಗಿ ಎಲ್ಲರೂ ಕಟಿಬದ್ಧರಾಗೋಣ ಎಂದಿದ್ದಾರೆ.