ಹುಬ್ಬಳ್ಳಿ(ಜ.28): ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿಯೇ ಶ್ರೀಮಠದ ಸರ್ವ ನಾಶಕ್ಕೆ ನಿಂತಿದೆ ಎಂದು ಬಾಲೆಹೊಸೂರ ಮಠದ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ. 

ಘಂಟಿಕೇರಿ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಠದ ಸ್ಥಿರಾಸ್ತಿಗಳನ್ನು ಪರಭಾರೆ ಮಾಡಬಾರದು ಎಂಬ ಕಾನೂನು ಇದೆ. ಇದನ್ನು ಉಲ್ಲಂಘಿಸಿ ಆಸ್ತಿಯನ್ನು ಪರಭಾರೆ ಮಾಡಲಾಗಿದೆ ಎಂದರು.

ಮೂರುಸಾವಿರ ಮಠದಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ನಾನು ಮಠದ ಉತ್ತರಾಧಿಕಾರಿ ಆಗಲು ಹೋರಾಟ ನಡೆಸುತ್ತಿಲ್ಲ. ಬದಲಾಗಿ ಮಠದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇನೆ. ಉತ್ತರಾಧಿಕಾರಿ ನೇಮಕ ಮಾಡುವ ವ್ಯವಸ್ಥೆಯನ್ನು ಮಾಜಿ ಸಚಿವ ಸಿ.ಎಂ. ಉದಾಸಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹಾಳು ಮಾಡಿದರು. ನನ್ನ ದೇಹದಲ್ಲಿ ಜೀವ ಇರುವ ವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇನೆ ಎಂದು ಶ್ರೀಗಳು ಎಚ್ಚರಿಸಿದರು.

"

ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ: ದಿಂಗಾಲೇಶ್ವರ ಶ್ರೀ

ಮೂರುಸಾವಿರ ಮಠದಲ್ಲಿ ಅವ್ಯವಹಾರ ನಡೆದಿದ್ದರೆ ದಾಖಲಾತಿ ನೀಡಲಿ ಎಂಬ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ನಾನು ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ. ಮಠದ ಆಸ್ತಿ ಮಾರಾಟದಲ್ಲಿ ನಡೆದಿರುವ ಅವ್ಯವಹಾರದ ದಾಖಲೆ ನನ್ನ ಬಳಿ ಇವೆ. ಸದ್ಯದಲ್ಲೇ ಮಠದ ಉನ್ನತ ಸಮಿತಿ ಸದಸ್ಯರು ಮಾಡಿದ ಪಾಪದ ಕೆಲಸಗಳನ್ನು ಜನರ ಮುಂದೆ ಇಡುವೆ ಎಂದರು.

ಮಠದ ಉನ್ನತ ಸಮಿತಿ ಸದಸ್ಯರು ಬಹಿರಂಗ ಸಭೆ ಕರೆದು ಸತ್ಯವನ್ನು ಮಠದ ಭಕ್ತ ಸಮೂಹಕ್ಕೆ ತಿಳಿಸಬೇಕು. ಮಠದ ಶ್ರೀಗಳನ್ನು ಉನ್ನತ ಸಮಿತಿ ಸದಸ್ಯರು ತಮ್ಮ ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ. ಮಠದ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿಲ್ಲ ಎಂದು ಮೋಹನ ಲಿಂಬಿಕಾಯಿ ಹೇಳಿಕೆ ನೀಡುತ್ತಿದ್ದಾರೆ. ಆಸ್ತಿಯನ್ನು ಕಾನೂನಿನ ಪ್ರಕಾರವೇ ಮಾರಾಟ ಮಾಡುವ ಅಧಿಕಾರವನ್ನು ನಿಮಗೆ ಕೊಟ್ಟವರಾರ‍ಯರು? ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸವಣೂರು ಅಡವಿಸ್ವಾಮಿ ಮಠದ ಮಹಾಂತ ಸ್ವಾಮೀಜಿ, ಮಂಟೂರು ಅಡವಿಸಿದ್ದೇಶ್ವರ ಮಠದ ಶಿವಲಿಂಗ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಯೋಗೇಶ್ವರ ಸ್ವಾಮೀಜಿ, ಬಂಕಾಪುರದ ಸದಾಶಿವ ಪೇಟದ ನಂದೀಶ್ವರ ಸ್ವಾಮೀಜಿ ಇದ್ದರು.