ಧಾರವಾಡದ ಪ್ರತಿಷ್ಠಿತ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರದ ಪಿಜಿ ವ್ಯಾಸಂಗ ಮಾಡುತ್ತಿದ್ದ ಡಾ. ಪ್ರಜ್ಞಾ ಪಾಲೇಗರ್ ಎಂಬ ಯುವತಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಭೇಟಿಯಾಗಿ ತೆರಳಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದ್ದು,  ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಧಾರವಾಡ (ಜ.28): ಶೈಕ್ಷಣಿಕ ನಗರಿ ಧಾರವಾಡದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ನಗರದ ಪ್ರತಿಷ್ಠಿತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (DIMHANS) ಹಾಸ್ಟೆಲ್‌ನಲ್ಲಿ ವೈದ್ಯಕೀಯ ಪಿಜಿ ವಿದ್ಯಾರ್ಥಿನಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ವಿವರ

ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮೊದಲ ವರ್ಷದ ಸೈಕಿಯಾಟ್ರಿಕ್ (ಮನೋವೈದ್ಯಶಾಸ್ತ್ರ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಕೇವಲ ಎರಡು ವಾರಗಳ ಹಿಂದಷ್ಟೇ ಇವರು ಈ ಸಂಸ್ಥೆಗೆ ಸೇರ್ಪಡೆಯಾಗಿದ್ದರು ಎಂದು ತಿಳಿದುಬಂದಿದೆ.

ಪೋಷಕರು ಹೋಗುತ್ತಿದ್ದಂತೆಯೇ ವಿಧಿವಶ

ಅತ್ಯಂತ ನೋವಿನ ಸಂಗತಿಯೆಂದರೆ, ಪ್ರಜ್ಞಾ ಅವರ ಪೋಷಕರು ಮಗಳನ್ನು ನೋಡಲು ಧಾರವಾಡಕ್ಕೆ ಬಂದಿದ್ದರು. ನಿನ್ನೆಯಷ್ಟೇ ಅವರು ಧಾರವಾಡಕ್ಕೆ ಬಂದು ಮಗಳ ಜೊತೆ ಸಮಯ ಕಳೆದು, ರಾತ್ರಿ ಶಿವಮೊಗ್ಗಕ್ಕೆ ಮರಳಿದ್ದರು. ಪೋಷಕರು ಹೋದ ಕೆಲವೇ ಗಂಟೆಗಳಲ್ಲಿ ಪ್ರಜ್ಞಾ ಈ ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಡಾ. ಪ್ರಜ್ಞಾ ಅವರು ಡಾ. ಪ್ರಿಯಾ ಪಾಟೀಲ್ ಎಂಬುವವರ ಜೊತೆ ರೂಮ್ ಹಂಚಿಕೊಂಡಿದ್ದರು. ನಿನ್ನೆ ಪ್ರಜ್ಞಾ ಅವರ ಪೋಷಕರು ಬಂದಿದ್ದ ಕಾರಣ, ಸಹಪಾಠಿ ಪ್ರಿಯಾ ಅವರು ಬೇರೆಡೆ ಉಳಿದುಕೊಂಡಿದ್ದರು. ರಾತ್ರಿ ರೂಮಿನಲ್ಲಿ ಒಬ್ಬಳೇ ಇದ್ದ ಪ್ರಜ್ಞಾ, ಫ್ಯಾನಿಗೆ ನೇಣು ಹಾಕಿಕೊಂಡು ಜೀವನ ಅಂತ್ಯಗೊಳಿಸಿದ್ದಾರೆ. ಇಂದು ಬೆಳಿಗ್ಗೆ ಪ್ರಿಯಾ ಅವರು ರೂಮಿಗೆ ಮರಳಿದಾಗ ಪ್ರಜ್ಞಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು

ವಿಷಯ ತಿಳಿದ ತಕ್ಷಣ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಓದಿನ ಒತ್ತಡವೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದ ಯುವತಿ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ವೈದ್ಯಕೀಯ ಲೋಕದಲ್ಲಿ ವಿಷಾದ ಮೂಡಿಸಿದೆ.