ದಕ್ಷಿಣ ಕನ್ನಡ; ಕೆಫೆಯಲ್ಲಿ ಭಿನ್ನಕೋಮಿನ ಯುವಕರು-ಯುವತಿಯರು: ಹಿಂದೂ ಸಂಘಟನೆ ಆಕ್ಷೇಪ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಯತ್ನ ನಡೆದಿದ್ದು, ಭಿನ್ನ ಕೋಮಿನ ಯುವಕ-ಯುವತಿಯರು ಕೆಫೆಗೆ ಬಂದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ಯರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಮಂಗಳೂರು (ಆ.25): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಯತ್ನ ನಡೆದಿದ್ದು, ಭಿನ್ನ ಕೋಮಿನ ಯುವಕ-ಯುವತಿಯರು ಕೆಫೆಗೆ ಬಂದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ದ.ಕ ಜಿಲ್ಲೆಯ ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ಓರ್ವ ಹಿಂದೂ ಯುವತಿ, ಇಬ್ಬರು ಮುಸ್ಲಿಂ ಯುವಕರು ಹಾಗೂ ಇಬ್ಬರು ಕ್ರಿಶ್ಚಿಯನ್ ಯುವತಿಯರು ಜ್ಯೂಸ್ ಕುಡಿಯಲು ಬಂದಿದ್ದ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಕೆಫೆ ಮುಂಭಾಗ ಸೇರಿದ್ದಾರೆ. ಅಲ್ಲದೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪುತ್ತೂರು ನಗರ ಠಾಣೆಗೆ ಹಿಂದೂ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣೆ ಎಸ್ಸೈ ಶ್ರೀಕಾಂತ್ ರಾಥೋಡ್ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗೊಂದಲ ಪರಿಸ್ಥಿತಿ ಹಿನ್ನೆಲೆ ಭಿನ್ನ ಕೋಮಿನ ಜೋಡಿ ವಿಚಾರಣೆ ನಡೆಸಿ ಬಳಿಕ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಜನ ಸೇರಿದ್ದ ಕಾರಣ ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಯಕರ್ತರ ಸಿಟ್ಟು ತಣಿಸಲು ಆರೆಸ್ಸೆಸ್ ಬೈಠಕ್: ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ಆರೆಸ್ಸೆಸ್ ಪ್ರಮುಖರು, ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಜತೆ ಬೈಠಕ್ ನಡೆಸಿದ್ದಾರೆ. ಪ್ರವೀಣ್ ಹತ್ಯೆ ಸಂದರ್ಭ ಮುಖಂಡರ ವಿರುದ್ಧವೇ ಸಿಟ್ಟಾಗಿದ್ದ ಕಾರ್ಯಕರ್ತರ ಆಕ್ರೋಶ ತಣಿಸಲು ಈ ಬೈಠಕ್ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರವೀಣ್ ಹತ್ಯೆ ಸಂದರ್ಭ ಬಿಜೆಪಿ ಮುಖಂಡರ ಮೇಲೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಯಕರ್ತರ ಈ ಆಕ್ರೋಶ ತಣಿಸಲು ಅವರೊಂದಿಗೆ ಚರ್ಚೆ ನಡೆಸಲು ತೀರ್ಮಾನಿಸಿದ ಮುಖಂಡರು, ಕೆಲ ದಿನಗಳ ಹಿಂದೆ ನಾಲ್ಕೂ ತಾಲೂಕುಗಳಲ್ಲಿ ಬೈಠಕ್ ನಡೆಸಿ ಕಾರ್ಯಕರ್ತರ ಅಹವಾಲು ಆಲಿಸಿದ್ದಾರೆ. ಈ ಸಂದರ್ಭ ಕಾರ್ಯಕರ್ತರು ಕೆಲವು ಮುಖಂಡರ ವಿರುದ್ಧ ದೂರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳೂರು: 5 ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ 40ಕ್ಕೂ ಹೆಚ್ಚು ಕೋಮು ಹತ್ಯೆ
ಪ್ರವೀಣ್ ಹತ್ಯೆ ನಡೆದ ಬೆಳ್ಳಾರೆಯಲ್ಲೂ ಬೈಠಕ್ ನಡೆಸಿ ಅಲ್ಲಿನ ಆಕ್ರೋಶಿತ ಕಾರ್ಯಕರ್ತರ ಅಭಿಪ್ರಾಯಗಳನ್ನು ಕೇಳಿಸಿಕೊಂಡಿದ್ದಾರೆ. ಕಾರ್ಯಕರ್ತರ ದೂರುಗಳನ್ನು ಆಲಿಸಿದ ಮುಖಂಡರು, ಈ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಂಘದ ಶಿಸ್ತು ಉಲ್ಲಂಘಿಸದಂತೆಯೂ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Mangaluru: ಸರಣಿ ಸಾವಿನ ಬೆನ್ನಲ್ಲೇ ಒಂದಾದ ಜಾತ್ಯಾತೀತ ಪಕ್ಷಗಳು: ಡಿಸಿ ಭೇಟಿಯಾಗಿ ಮನವಿ
ಪುತ್ತೂರಿನಲ್ಲಿ ಆ.26ರಿಂದ ಆರೆಸ್ಸೆಸ್ ದಕ್ಷಿಣ ಪ್ರಾಂತ ಬೈಠಕ್ ನಡೆಯಲಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಇದರಲ್ಲಿ ಕೂಡ ಕರಾವಳಿ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.