ಮಂಗಳೂರು: 5 ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ 40ಕ್ಕೂ ಹೆಚ್ಚು ಕೋಮು ಹತ್ಯೆ

ಸಾವಿಗೀಡಾದವರಲ್ಲಿ ಬಹುತೇಕರು ಅಮಾಯಕರು. ಆದರೆ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ಎಂಬುದು ಮರೀಚಿಕೆ

More Than 40 Communal Killed in Dakshina Kannada in 5 Decades grg

ಆತ್ಮಭೂಷಣ್‌

ಮಂಗಳೂರು(ಆ.07):  ಸರಣಿ ಹತ್ಯೆಗಳಿಂದಲೇ ಕಳೆದ ಕೆಲ ದಿನಗಳಿಂದ ಸುದ್ದಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ಸಂಘರ್ಷಕ್ಕೆ ದಶಕಗಳ ಇತಿಹಾಸವೇ ಇದೆ. ಜಿಲ್ಲೆಯಲ್ಲಿ ಐದು ದಶಕಗಳಿಂದ ಮತೀಯ ಸಂಘರ್ಷ ಆಗಾಗ ನಾನಾ ರೂಪದಲ್ಲಿ ಸ್ಫೋಟಗೊಳ್ಳುತ್ತಲೇ ಇದ್ದು, ಈ ಅವಧಿಯಲ್ಲಿ ತಲ್ಲಣ ಸೃಷ್ಟಿಸಿದ 40ಕ್ಕೂ ಹೆಚ್ಚು ಸಾವುಗಳು ಕೋಮುದ್ವೇಷದ ಕಾರಣಗಳಿಗಾಗಿಯೇ ನಡೆದಿವೆ. ಇಷ್ಟಾದರೂ ಹತ್ಯೆ ಆರೋಪಿಗಳಿಗೆ ಈವರೆಗೆ ಕಠಿಣ ಶಿಕ್ಷೆ ಆಗಿಯೇ ಇಲ್ಲ ಎಂಬುದು ವಿಪರ್ಯಾಸ.

1968ರಿಂದ 2022ರವರೆಗಿನ ಅವಧಿಯಲ್ಲಿ ಅಲ್ಲಲ್ಲಿ ಒಂದೆರಡು ವರ್ಷ ಮತೀಯ ಸಂಘರ್ಷ ಇರಲಿಲ್ಲ ಎನ್ನುವ ಸಮಾಧಾನ ಬಿಟ್ಟರೆ, ಉಳಿದೆಲ್ಲ ವರ್ಷಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಮತೀಯ ಸಂಘರ್ಷ ನಡೆಯುತ್ತಲೇ ಬಂದಿದೆ. 1962ರ ಅವಧಿಯಲ್ಲಿ ಹಿಂದು-ಮುಸ್ಲಿಂ ಸಮುದಾಯದ ನಡುವೆ ಅಪನಂಬಿಕೆ ನೆಪದಲ್ಲಿ ಶುರುವಾದ ಮತೀಯ ಸಂಘರ್ಷ ಬಳಿಕ ಇರಿತ, ಈಗ ಕೊಲೆ ಹಂತದವರೆಗೆ ತಲುಪಿದೆ. ಮೊದಲು ಗುಂಪು ಘರ್ಷಣೆಯಲ್ಲಿ ನಡೆಯುತ್ತಿದ್ದ ಸಂಘರ್ಷ ಇದೀಗ ವ್ಯಕ್ತಿಗತ ಟಾರ್ಗೆಟ್‌ ಮಟ್ಟಕ್ಕೆ ಬಂದಿದೆ. ಹೆಣ್ಣುಮಕ್ಕಳ ವಿಚಾರ, ಗೋಹತ್ಯೆ, ಧಾರ್ಮಿಕ ಶ್ರದ್ಧಾಕೇಂದ್ರಗಳ ವಿಚಾರವಾಗಿ ಈಗ ಹೆಚ್ಚಿನ ಹತ್ಯೆಗಳು ನಡೆಯುತ್ತಿವೆ. ಹತ್ಯೆ, ಪ್ರತೀಕಾರದ ಹತ್ಯೆಗಳು ನಡೆದು ಕರಾವಳಿ ಜಿಲ್ಲೆ ಪದೇ ಪದೇ ಕರ್ಫ್ಯೂ ಕಾಣುವಂತಾಗಿದೆ.

BREAKING ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಇನ್ನಿಬ್ಬರು ಆರೋಪಿಗಳ ಬಂಧನ

ಜಿಲ್ಲೆಯಲ್ಲಿ ಸುರತ್ಕಲ್‌, ಮೂಲ್ಕಿ, ಬಜಪೆ, ಮಂಗಳೂರು ನಗರ, ಉಳ್ಳಾಲ, ತೊಕ್ಕೊಟ್ಟು, ಫರಂಗಿಪೇಟೆ, ಬಿ.ಸಿ.ರೋಡ್‌, ಪೊಳಲಿ ಹೀಗೆ ಕೋಮು ಸೂಕ್ಷ್ಮ ಪ್ರದೇಶಗಳ ಸರಣಿ ಬೆಳೆಯುತ್ತಲೇ ಹೋಗುತ್ತದೆ. ಈತನಕ ಎರಡು ಸಮುದಾಯಗಳಲ್ಲಿ ತಲಾ 15ಕ್ಕೂ ಹೆಚ್ಚು ಹತ್ಯೆ ನಡೆದಿದೆ, ಹಲವರು ಪೊಲೀಸ್‌ ಗುಂಡೇಟಿಗೂ ಬಲಿಯಾಗಿದ್ದಾರೆ. ಈ ರೀತಿ ಸಾವಿಗೀಡಾದವರಲ್ಲಿ ಬಹುತೇಕರು ಅಮಾಯಕರು ಎಂಬುದು ಬೇಸರದ ಸಂಗತಿ.

ದೊಡ್ಡ ಮಟ್ಟದ ಶಿಕ್ಷೆ ಆಗುತ್ತಿಲ್ಲ

ಜಿಲ್ಲೆಯಲ್ಲಿ ಇಷ್ಟೆಲ್ಲ ಮತೀಯ ಸಂಘರ್ಷ, ಹತ್ಯೆಗಳು ನಡೆದರೂ ಆರೋಪಿಗಳಿಗೆ ದೊಡ್ಡಮಟ್ಟದ ಶಿಕ್ಷೆಯಾಗಿಲ್ಲ ಎಂಬುದು ಕಳವಳಕಾರಿ ಸಂಗತಿ. ಕೆಳ ನ್ಯಾಯಾಲಯಗಳಲ್ಲಿ ಶಿಕ್ಷೆ ತೀರ್ಪು ಪ್ರಕಟವಾದರೂ ಹೈಕೋರ್ಚ್‌ನಲ್ಲಿ ಕೇಸು ಖುಲಾಸೆಗೊಂಡು ಆರೋಪಿಗಳು ಬಚಾವ್‌ ಆಗಿದ್ದೇ ಜಾಸ್ತಿ. ಇನ್ನೂ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲೇ ಇವೆ. ಹೀಗಾಗಿ ಕಾನೂನಿನ ಬಿಗಿ ಕುಣಿಕೆಯ ಭೀತಿ ಇಲ್ಲದೆ ಶಾಂತಿ ಕದಡುವ ಘಟನೆಗಳು ಆಗಾಗ ಮರುಕಳಿಸುತ್ತಿವೆ ಎನ್ನುತ್ತಾರೆ ಜನತೆ. ಮತೀಯ ಸಂಘರ್ಷ, ಕೊಲೆ ಪ್ರಕರಣಗಳ ಆರೋಪಿಗಳು/ಅಪರಾಧಿಗಳು ಬೇರೆ ಬೇರೆ ಜೈಲಿನಲ್ಲಿದ್ದಾರೆ. ಹೊರಗೆ ಬರುವುದಕ್ಕಿಂತ ಜೈಲು ವಾಸವೇ ವಾಸಿ ಎಂದು ಠಿಕಾಣಿ ಹೂಡಿದವರೂ ಇದ್ದಾರೆ.

ಪ್ರತ್ಯೇಕ ಕೋರ್ಟ್‌ ಇರಲಿ

ಆರೋಪಿಗಳಿಗೆ ರಾಜಕೀಯ ಹಸ್ತಕ್ಷೇಪ ಕಾರಣಗಳಿಂದ ಶಿಕ್ಷೆಯಾಗುತ್ತಿಲ್ಲ. ಕೇಸುಗಳನ್ನು ಹಿಂಪಡೆಯಲಾಗುತ್ತದೆ. ಇದರಿಂದಾಗಿ ಸರಿಯಾಗಿ ನ್ಯಾಯ ಸಿಗುತ್ತಿಲ್ಲ. ಮತೀಯ ಸಂಘರ್ಷ ಪ್ರಕರಣಗಳ ತ್ವರಿತ ಇತ್ಯರ್ಥ ಹಾಗೂ ನ್ಯಾಯಕ್ಕಾಗಿ ಪ್ರತ್ಯೇಕ ಕೋರ್ಚ್‌ ಮಾಡಬೇಕು ಅಂತ ಮಂಗಳೂರು ಪಿಯುಸಿಎಲ್‌ ಸದಸ್ಯ ಸುರೇಶ್‌ ಭಟ್‌ ಬಾಕ್ರಬೈಲು ಹೇಳಿದ್ದಾರೆ. 

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ತನಿಖೆ ಕೈಗೆತ್ತಿಕೊಳ್ಳಲು NIAಗೆ ಕೇಂದ್ರ ಗೃಹ ಇಲಾಖೆ ಆದೇಶ

ಬಿಎಸ್‌ವೈ ಮಾದರಿ ಸೂಕ್ತ

ಈವರೆಗೆ ನಡೆದ ಮತೀಯ ಸಂಘರ್ಷ ಘಟನೆಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಿಲ್ಲ. ಇದಕ್ಕಾಗಿ ಫಾಸ್ಟ್‌ ಟ್ರ್ಯಾಕ್‌ ಕೋರ್ಚ್‌ಗಳ ಅಗತ್ಯವಿದೆ. ಧಾರ್ಮಿಕ ಮುಖಂಡರು ಮುಂದೆ ಬಂದು ಯುವ ಪೀಳಿಗೆಗೆ ತಿಳಿವಳಿಕೆ ಹೇಳಿದರೆ ಮಾತ್ರ ಇಂಥ ಸಂಘರ್ಷ ನಿವಾರಣೆಯಾಗಬಹುದು. 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂಥದ್ದೊಂದು ಪ್ರಯತ್ನ ರಾಜ್ಯಮಟ್ಟದಲ್ಲಿ ನಡೆದಿದೆ. ಸಂಘಪರಿವಾರ ಮತ್ತು ಮುಸ್ಲಿಂ ಸಂಘಟನೆಗಳ ನಡುವೆ ಮಾತುಕತೆ ನಡೆಸಿದ್ದರು ಅಂತ ಹಿಂದೂ ಸಂಘಟನೆ ಮುಖಂಡ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ.  

ದಕ್ಷಿಣ ಕನ್ನಡದ ಪ್ರಮುಖ ಸಂಘರ್ಷಗಳು

1978: ರಾಘವೇಂದ್ರ ನಾಗೋರಿ ಕೊಲೆ, ವಾರಗಳ ಕರ್ಫ್ಯೂ
1998-ಸುರತ್ಕಲ್‌ನಲ್ಲಿ 3 ಮಂದಿ ಹತ್ಯೆ. ಕಫä್ರ್ಯ ಹೇರಿಕೆ.
1998-ಪೊಳಲಿಯಲ್ಲಿ ಆಟದ ವೈಷಮ್ಯದಲ್ಲಿ ಗುಜರಿ ವ್ಯಾಪಾರಿ ಹತ್ಯೆ, ಉದ್ವಿಗ್ನ
2001-ಕಂದಾವರದಲ್ಲಿ ಅಟೋರಿಕ್ಷಾ ಚಾಲಕ ಕೊಲೆ, ಉದ್ವಿಗ್ನ
2002-ಕುದ್ರೋಳಿಯಲ್ಲಿ ಬಡಗಿ ಕೆಲಸದಾತನ ಕೊಲೆ, ಉದ್ವಿಗ್ನ
2003-ಯುವತಿ ಚುಡಾಯಿಸಿದ್ದಕ್ಕೆ ಒಂದೇ ಸಮುದಾಯದ 7, ಇನ್ನೊಂದು ಸಮುದಾಯದ ಇಬ್ಬರ ಕೊಲೆ, ಕ್ಲಾಕ್‌ಟವರ್‌ ಬಳಿ ಓರ್ವ ಪೊಲೀಸ್‌ ಕೂಡ ಸಾವು. ಉದ್ವಿಗ್ನ
2005-ತಾ.ಪಂ.ಅಧ್ಯಕ್ಷ ಜಬ್ಬಾರ್‌ ಹತ್ಯೆ, ಮಂಗಳೂರಲ್ಲಿ ರಿಕ್ಷಾ ಚಾಲಕ ಫಾರೂಕ್‌ ಕೊಲೆ, ಅಡ್ಡೂರಲ್ಲಿ ಉ.ಕರ್ನಾಟಕ ಮೂಲದ ಲಾರಿ ಕ್ಲೀನರ್‌ ಹತ್ಯೆ.
2006-ಗೋ ಕಳವು, ಹತ್ಯೆ ಹಿನ್ನೆಲೆಯಲ್ಲಿ ಬಿಜೈನಲ್ಲಿ ಧರ್ಮಗುರುಗಳ ಕೊಲೆ, ಮಂಗಳೂರಿನಲ್ಲಿ ಇನ್ನೊಂದು ಕೊಲೆ, ಪೊಳಲಿಯಲ್ಲಿ ರಿಕ್ಷಾ ಚಾಲಕನ ಹತ್ಯೆ.
2006-ಶಾರದೋತ್ಸವ ಟ್ಯಾಬ್ಲೋ ವಿವಾದ-ಹೊಸಬೆಟ್ಟುವಿನಲ್ಲಿ ಮೂಲ್ಕಿ ಸುಖಾನಂದ ಶೆಟ್ಟಿಕೊಲೆ, ಮೆರವಣಿಗೆಯಲ್ಲಿ ಪೊಲೀಸ್‌ ಗೋಲಿಬಾರ್‌ಗೆ ಇಬ್ಬರು ಬಲಿ, ಬಳಿಕ ಬುಲೆಟ್‌ ಸುಧೀರ್‌ ಮತ್ತು ಮೂಲ್ಕಿ ರಫೀಕ್‌ ಎನ್‌ಕೌಂಟರ್‌, ಉಳ್ಳಾಲ, ಮಾಸ್ತಿಕಟ್ಟೆ, ಫರಂಗಿಪೇಟೆಗಳಲ್ಲಿ ಕೊಲೆ, ಕರ್ಫ್ಯೂ
2008-ಪೊಳಲಿಯಲ್ಲಿ ಪೊಳಲಿ ಅನಂತು ಕೊಲೆ. ದೇವಸ್ಥಾನ ಮತ್ತು ಮಸೀದಿ ಅಪವಿತ್ರ ಘಟನೆ, ಮತ್ತೆ ಮತೀಯ ಸಂಘರ್ಷ, ಕರ್ಫ್ಯೂ ಜಾರಿ.
2016-ಭೂಗತ ಪಾತಕಿಗಳಿಂದ ಮಂಗಳೂರು ಜೈಲಲ್ಲೇ ಮಾಡೂರು ಇಸುಬು, ಗಣೇಶ್‌ ಶೆಟ್ಟಿಕೊಲೆ, ಪಣಂಬೂರಿನಲ್ಲಿ ಮತ್ತೊಂದು ಹತ್ಯೆ.
2017-18- ಮೂಡುಬಿದಿರೆಯ ಪ್ರಶಾಂತ್‌ ಪೂಜಾರಿ, ಬಂಟ್ವಾಳದಲ್ಲಿ ಹರೀಶ್‌, ಬಿ.ಸಿ.ರೋಡ್‌ನಲ್ಲಿ ಶರತ್‌ ಮಡಿವಾಳ ಹತ್ಯೆ, ಸುರತ್ಕಲ್‌ನಲ್ಲಿ ದೀಪಕ್‌ ರಾವ್‌, ಕೊಟ್ಟಾರದಲ್ಲಿ ಬಶೀರ್‌, ಬೆಂಜನಪದವಿನಲ್ಲಿ ಅಶ್ರಫ್‌ ಕಲಾಯಿ ಹತ್ಯೆ.
2020-ಮಂಗಳೂರಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ಘಟನೆ, ಪೊಲೀಸ್‌ ಗೋಲಿಬಾರ್‌-ನೌಷಧ್‌, ಜಲೀಲ್‌ ಸಾವು.
2022-ಬೆಳ್ಳಾರೆ ಪ್ರವೀಣ್‌ ನೆಟ್ಟಾರು ಹತ್ಯೆ, ಸುರತ್ಕಲ್‌ನಲ್ಲಿ ಫಾಝಿಲ್‌ ಕೊಲೆ.

ಹತ್ಯೆಗಳಿಗೇನು ಕಾರಣ?

ಹೆಣ್ಣುಮಕ್ಕಳ ವಿಚಾರ, ಗೋಹತ್ಯೆ, ಧಾರ್ಮಿಕ ಶ್ರದ್ಧಾಕೇಂದ್ರಗಳ ವಿಚಾರವಾಗಿ ಹೆಚ್ಚಿನ ಹತ್ಯೆಗಳು ನಡೆಯುತ್ತಿವೆ. ಒಂದು ಹತ್ಯೆ ಬಳಿಕ ಪ್ರತೀಕಾರದ ಹತ್ಯೆಗಳೂ ಆಗುತ್ತಿವೆ.
 

Latest Videos
Follow Us:
Download App:
  • android
  • ios