ಹಾಸನ(ಆ.27): ಜೀರ್ಣೋದ್ಧಾರಗೊಂಡಿರುವ ದೇಗುಲ ಪ್ರವೇಶಿಸುವ ವಿಚಾರದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ವಾಗ್ವಾದ ಉಂಟಾಗಿ ಕೊನೆಗೆ ಪೂಜಾರಿ ಮಾತ್ರ ಪ್ರವೇಶಿಸಿ, ಉಳಿದವರಾರ‍ಯರು ಒಳ ಹೋಗದೆ ದೇಗುಲದ ಹೊರಗೆ ನಿಂತು ಪೂಜೆ ಸಲ್ಲಿಸಲು ತೀರ್ಮಾನಿಸಲಾಯಿತು. ಈ ಘಟನೆ ಸೋಮವಾರ ತಾಲೂಕಿನ ಸಾಲಗಾಮೆ ಬಳಿ ಇರುವ ಕಡಗ ಗ್ರಾಮದಲ್ಲಿರುವ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದಲಿತರು ದೇವಾಲಯ ಪ್ರವೇಶಿಸಲು ತಡೆ:

ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಇಲಾಖೆ ಹಾಗೂ ಊರಿನ ಜನ ಎಲ್ಲ ಸೇರಿ ಜೀರ್ಣೋದ್ಧಾರ ಮಾಡುವ ಮೂಲಕ ಹೊಸ ರೂಪವನ್ನು ಕೊಡಲಾಗಿತ್ತು. ಇನ್ನು ಎರಡು ದಿನದದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ವೇಳೆ ದಲಿತ ಸಮುದಾಯದವರು  ದೇವಾಲಯ ಪ್ರವೇಶಿಸಲು ಹೊರಟಾಗ ಊರಿನ ಸವರ್ಣೀಯರು ತಡೆದಿದ್ದಾರೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಸೋಮವಾರ ಬೆಳಗ್ಗೆ ತಹಸೀಲ್ದಾರ್‌ ಮೇಘನಾ, ಡಿವೈಎಸ್ಪಿ ಹಾಗೂ ಇಲಾಖೆಯ ಅಧಿಕಾರಿಗಳು ಸೇರಿದಂತೆ ಊರಿನ ಮುಖಂಡರು ದೇವಾಲಯ ಪ್ರವೇಶ ಮಾಡುವ ಗೊಂದಲದ ಬಗ್ಗೆ ಚರ್ಚೆ ನಡೆಸಿದರು. ಕೊನೆಯಲ್ಲಿ ದೇವಾಲಯದ ಒಳಗೆ ಪೂಜೆ ಮಾಡುವವರು ಬಿಟ್ಟು ಉಳಿದ ಯಾರು ಕೂಡ ಗರ್ಭ ಗುಡಿ ಒಳಗೆ ಪ್ರವೇಶ ಮಾಡದಂತೆ ತೀರ್ಮಾನಿಸಲಾಯಿತು.

ಹೊರಗೇ ನಿಂತು ಪೂಜೆ:

ವಾತಾವರಣ ಸರಿಯಾಗುವವರೆಗೂ ಸವರ್ಣೀಯರು ಮತ್ತು ದಲಿತರು ಇಬ್ಬರೂ ಕೂಡ ದೇವಾಲಯದ ಹೊರಗೆ ನಿಂತು ಅಲ್ಲಿಂದಲೇ ಪೂಜೆ ಮಾಡಿಸಲು ಒಪ್ಪಲಾಯಿತು. ದೇವಾಲಯ ಮುಜರಾಯಿ ಇಲಾಖೆ ಸೇರಿರುವುದರಿಂದ ಕೆಲ ದಿನಗಳಲ್ಲೇ ನಾಮಫಲಕವನ್ನು ಕೂಡ ಹಾಕುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಡೆಗ ಗ್ರಾಮದಲ್ಲಿ ಶಾಂತಿಯ ವಾತಾರವಣ ಇದ್ದರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಇರುವ ಪರಿಸ್ಥಿತಿ ಇದೆ.