Asianet Suvarna News Asianet Suvarna News

ಕಾಮಗಾರಿ ವಿಳಂಬಕ್ಕೆಂದೇ ಹಣ ಕೊಟ್ಟಿದ್ದಾರಾ?: ಸಂಸದ ಸಿದ್ದೇಶ್ವರ

ಚುನಾವಣೆ ಆಗುವವರೆಗೂ ಜಲಸಿರಿ, ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗುವಂತೆ ಯಾರಾದರೂ ನಿಮಗೆ ದುಡ್ಡು ಕೊಟ್ಟಿದ್ದಾರಾ? ಅಂತಹದ್ದೂ ನಡೆಯುತ್ತದೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು.

Did you pay for the delay in the work says gm siddeswara gvd
Author
Bangalore, First Published Aug 21, 2022, 12:58 AM IST

ದಾವಣಗೆರೆ (ಆ.21): ಚುನಾವಣೆ ಆಗುವವರೆಗೂ ಜಲಸಿರಿ, ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗುವಂತೆ ಯಾರಾದರೂ ನಿಮಗೆ ದುಡ್ಡು ಕೊಟ್ಟಿದ್ದಾರಾ? ಅಂತಹದ್ದೂ ನಡೆಯುತ್ತದೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು. ನಗರದ ಸ್ಮಾರ್ಟ್‌ ಸಿಟಿ ಯೋಜನೆ ಕಚೇರಿಯಲ್ಲಿ ಗುರುವಾರ ಜಲಸಿರಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಕ್‌ವೆಲ್‌ ಕಾಮಗಾರಿ, ಪೈಪ್‌ ಲೈನ್‌ ಅಳವಡಿಕೆ, ವಿದ್ಯುತ್‌ ಪೂರೈಕೆ ಸೇರಿ ಯಾವುದೇ ಸಬೂಬು ಹೇಳದೇ, ಸೆಪ್ಟೆಂಬರ್‌ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು. 

ದಿನದ 24 ಗಂಟೆ ನಗರಕ್ಕೆ ನೀರು ಪೂರೈಸುವ ಜಲಸಿರಿ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗುತ್ತಿದೆ. ತಮಿಳುನಾಡು ಮೂಲಕ ಕಂಪನಿ ಕಾಮಗಾರಿ ಮಾಡುತ್ತಿದೆಯೆಂದರೆ, ನಿಮಗೆ ಜವಾಬ್ದಾರಿ ಇರುತ್ತದೆಯೇ ಕೆಲಸ ಮಾಡಲು? ನಮ್ಮನ್ನೇನು ದನ ಕಾಯೋರು ಅಂತಾ ತಿಳಿದಿದ್ದೀರಾ? ಪ್ರತಿ ಸಲವೂ ಇದೇ ರೀತಿ ಸುಳ್ಳು ಹೇಳಿ ಹೋಗುತ್ತಿದ್ದೀರಿ. ಹೊಟ್ಟೆಗೆ ಏನು ತಿನ್ನುತ್ತೀರಿ ನೀವೆಲ್ಲಾ? ನಿಮ್ಮಿಂದ ಕೆಲಸ ಮಾಡಲಾಗದಿದ್ದರೆ, ಎಷ್ಟುಮಾಡಿದ್ದೀರೋ ಅಷ್ಟಕ್ಕೆ ಕೆಲಸ ಬಿಟ್ಟು ಹೋಗಿ ಎಂದು ಕಿಡಿಕಾರಿದರು.

ಎಫ್‌ಆರ್‌ಪಿ ಹೆಚ್ಚಳಕ್ಕೆ ರೈತರಿಂದ ಹೆದ್ದಾರಿ ತಡೆ: ಸರ್ಕಾರದ ವಿರುದ್ಧ ಘೋಷಣೆ

ಶೇ.50 ಕಾಮಗಾರಿ ಆಗಿಲ್ಲವೆಂದರೆ ಏನರ್ಥ?: ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕಾಮಗಾರಿಗಳ ಪರಿಶೀಲಿಸದೇ, ನೇರವಾಗಿ ಸಭೆ ಕರೆದರೆ ಏನು ಪ್ರಯೋಜನ? ಗುತ್ತಿಗೆದಾರರಿಂದ ಕೆಲಸ ಮಾಡಿಸುವುದು ನಿಮ್ಮ ಕೆಲಸ. ಅದನ್ನು ಬಿಟ್ಟು, ಗುತ್ತಿಗೆದಾರ ಕಂಪನಿಯವರು ಹೇಳಿದ್ದಕ್ಕೆಲ್ಲಾ ಓಕೆ ಎನ್ನುತ್ತೀರಾ? ಚುನಾವಣೆ ಸಮೀಪಿಸುತ್ತಿದೆ. ಜನರಿಗೆ ಉತ್ತರ ಕೊಡುವವನು ನಾನು. 2018ರಲ್ಲಿ ಆರಂಭವಾದ ಕಾಮಗಾರಿ 2022 ಮುಗಿಯುತ್ತಾ ಬಂದರೂ ಶೇ.50ರಷ್ಟುಕಾಮಗಾರಿ ಆಗಿಲ್ಲವೆಂದರೆ ಏನರ್ಥ? ಚನ್ನಗಿರಿ, ಹೊನ್ನಾಳಿ ಕ್ಷೇತ್ರದಲ್ಲಿ ಮಳೆ ಆಗಿದೆ. ಕಾಮಗಾರಿ ನಡೆಯುವ ಹರಿಹರ, ದಾವಣಗೆರೆ ಕ್ಷೇತ್ರದಲ್ಲಿ ಅಲ್ಲ ಎಂದು ಕಿಡಿಕಾರಿರದು.

ಕಾಮಗಾರಿ ಪರಿಶೀಲಿಸಿ: ಮೂಲ ಸೌಕರ್ಯ ನಿಗಮದ ಅಧಿಕಾರಿ ಮಂಜುನಾಥ ಮಾತನಾಡಿ, ಗುತ್ತಿಗೆದಾರರಿಂದ ನಮಗೆ ಸರಿಯಾದ ಸಹಕಾರ ಸಿಗುತ್ತಿಲ್ಲ. ಇಷ್ಟುದಿನ ಕೇವಲ ಸಾಮಗ್ರಿ ವರ್ಗಾವಣೆ ಕೆಲಸ ಮಾತ್ರ ಮಾಡಿದ್ದಾರೆ ಎಂದರು. ಮಧ್ಯ ಪ್ರವೇಶಿಸಿದ ಸಂಸದ ಸಿದ್ದೇಶ್ವರ, ಕೆಲಸ ಮಾಡದಂತೆ ನಿಮಗೆ ಯಾರಾದರೂ ದುಡ್ಡು ಕೊಟ್ಟಿದ್ದಾರಾ? ಅದೂ ಸಹ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತದೆ. ಇನ್ನೂ ಒಂದೆರೆಡು ದಿನಗಳ ಇಲ್ಲಿಯೇ ಉಳಿದು ಕಾಮಗಾರಿ ಪರಿಶೀಲಿಸುವಂತೆ ಸ್ಮಾರ್ಟ್‌ಸಿಟಿ ಟಾಸ್‌್ಕ ವ್ಯವಸ್ಥಾಪಕ ದೇವರಾಜ್‌ಗೆ ಸೂಚನೆ ನೀಡಿದರು. ಸ್ಮಾರ್ಟ್‌ ಸಿಟಿ ಯೋಜನೆ ಟಾಸ್‌್ಕ ವ್ಯವಸ್ಥಾಪಕ ದೇವರಾಜ, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ, ತಹಸೀಲ್ದಾರ ಬಸವನಗೌಡ ಕೋಟೂರು, ಇಂಜಿನಿಯರ್‌ಗಳಾದ ಮಂಜುನಾಥ, ಮಲ್ಲಪ್ಪ ಸೇರಿದಂತೆ ಅಧಿಕಾರಿಗಳಿದ್ದರು.

ನೀವು ನನಗೆ ಶಾಪ ಹಾಕುವುದೂ ಬೇಡ: ಆಗಸ್ಟ್‌ 15ಕ್ಕೆ ಕಾಮಗಾರಿ ಮುಗಿಸುವುದಾಗಿ ಕಳೆದ ಸಭೆಯಲ್ಲಿ ಹೇಳಿದ್ದು, ಪದೇ ಪದೇ ಸಬೂಬು ಹೇಳಿಕೊಂಡೇ ಮುಂದೂಡುತ್ತಿದ್ದೀರಿ. ನಿಮ್ಮ ತಮಿಳುನಾಡಿನಲ್ಲಿಯೇ ಕಾಮಗಾರಿ ಗುತ್ತಿಗೆ ಪಡೆದು, ಇದೇ ರೀತಿ ಮಾಡಬಹುದಿತ್ತಲ್ಲ. ಪದೇ ಪದೇ ನಾನು ನಿಮಗೆ ಬೈಯ್ಯುವುದೂ ಬೇಡ, ನೀವು ನನಗೆ ಶಾಪ ಹಾಕುವುದೂ ಬೇಡ. ನನಗೇಕೆ ಬೇಕು ಈ ಕರ್ಮ? ಕಾಮಗಾರಿ ವಿಳಂಬಕ್ಕೆ ಪ್ರಯತ್ನಿಸುತ್ತಿರುವ ಕಂಪನಿಗೆ 2 ಕೋಟಿ ರು. ದಂಡ ಹಾಕಿ, ಇಲ್ಲ ಗುತ್ತಿಗೆಯಿಂದ ಕಂಪನಿಯನ್ನು ಕೈಬಿಡಿ. ಆಗ ಬುದ್ಧಿ ಬರುತ್ತದೆ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರಗೆ ಸಂಸದ ಸಿದ್ದೇಶ್ವರ ಸೂಚಿಸಿದರು.

ಖಾಸಗಿ ಫೋಟೋ ಇದೆ ಎಂದು ಬ್ಲ್ಯಾಕ್‌ಮೇಲ್‌: ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್‌ ಯುವತಿಯರ ಸೆರೆ

ಕಾಮಗಾರಿ ವಿಳಂಬ ಮಾಡಿದರೆ ದೊಡ್ಡ ಮಟ್ಟದ ದಂಡ ವಿಧಿಸುವ ಹಾಗೂ ಗುತ್ತಿಗೆ ರದ್ದುಪಡಿಸಲು ಅವಕಾಶವಿದೆ. 2 ಕೋಟಿ ರು.ಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಲು ಅವಕಾಶ ಇದೆ. ಜಾಕ್‌ವೆಲ್‌ ಸೇರಿ ಯಾವೆಲ್ಲ ಕಾಮಗಾರಿ ಬಾಕಿ ಉಳಿದಿವೆಯೋ ಅಲ್ಲಿ ಹೆಚ್ಚು ಕೆಲಸಗಾರರನ್ನು ಬಿಟ್ಟು, ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಚಾರದಲ್ಲಿ ಅಸಡ್ಡೆ ಸಹಿಸಲ್ಲ.
-ಶಿವಾನಂದ ಕಾಪಶಿ, ಜಿಲ್ಲಾಧಿಕಾರಿ

Follow Us:
Download App:
  • android
  • ios