ಕೆ.ಎಂ. ಮಂಜುನಾಥ್‌

ಬಳ್ಳಾರಿ(ಡಿ.11):  ಚುನಾವಣೆ ಎಂದರೆ ಜಿದ್ದಾಜಿದ್ದಿ, ರಾಜಕೀಯ ಮೇಲಾಟ, ಪ್ರತಿಷ್ಠೆಗಾಗಿನ ಜಗ್ಗಾಟ, ಹೊಡೆದಾಟ ಸಾಮಾನ್ಯ. ಆದರೆ, ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮ ಪಂಚಾಯಿತಿಗೆ 27 ವರ್ಷದಿಂದ ಚುನಾವಣೆಯೇ ನಡೆದಿಲ್ಲ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಚುನಾವಣಾ ರಾಜಕೀಯದಿಂದ ದೂರ ಉಳಿದು ಹಳ್ಳಿಯ ಸೌಹಾರ್ದತೆ ಗಟ್ಟಿಗೊಳ್ಳಬೇಕು ಎಂದು ಗ್ರಾಮಸ್ಥರು ಹಾಕಿಕೊಂಡಿರುವ ನಿಯಮದಿಂದ ಪ್ರತಿ ಚುನಾವಣೆಯಲ್ಲೂ ಇಲ್ಲಿ ಸದಸ್ಯರ ಆಯ್ಕೆ ಅವಿರೋಧವಾಗಿಯೇ ನಡೆಯುತ್ತದೆ.

ಗ್ರಾಮದ ಹಿರಿಯರ ತೀರ್ಮಾನ:

ಕಪ್ಪಗಲ್ಲು ಹಾಗೂ ಬಾಲಾಜಿ ಕ್ಯಾಂಪ್‌ ಕಪ್ಪಗಲ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಿಗಳು. ಇಲ್ಲಿ ಒಟ್ಟು 6,000 ಮತದಾರರಿದ್ದು, ಒಟ್ಟು 19 ಸ್ಥಾನಗಳಿವೆ. ಈ ಎರಡು ಗ್ರಾಮಗಳು ಚುನಾವಣೆ ರಾಜಕೀಯದಿಂದ ಗ್ರಾಮದ ಸೌಹಾರ್ದ ಹಾಳಾಗುವಂತೆ ಮಾಡಿಕೊಂಡಿಲ್ಲ. ಎಲ್ಲ ಸಮುದಾಯದ ಜನರು ಒಟ್ಟಿಗೆ ಕೂತು ಗ್ರಾಮಗಳ ಹಿರಿಯರ ನೇತೃತ್ವದಲ್ಲಿ ಸದಸ್ಯರ ಅವಿರೋಧ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ.

ಕೂಡ್ಲಿಗಿ: ಹೆಂಡತಿ ನಿಧನದ ಸುದ್ದಿ ಕೇಳಿ ಗಂಡನೂ ಸಾವು, ಸಾವಿನಲ್ಲೂ ಒಂದಾದ ದಂಪತಿ

ಆಯ್ಕೆ ಪ್ರಕ್ರಿಯೆ ವೇಳೆ ಸಾಮಾಜಿಕ ನ್ಯಾಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಎಲ್ಲ ಸಮುದಾಯಕ್ಕೂ ಸದಸ್ಯತ್ವ ನೀಡುತ್ತಾರೆ. ನಿರ್ದಿಷ್ಟಸಮುದಾಯದಿಂದ ಒಂದು ಬಾರಿ ಆಯ್ಕೆಯಾದವರು ಮುಂದಿನ ಚುನಾವಣೆಗೆ ಆಯ್ಕೆಯಾಗುವಂತಿಲ್ಲ. ಅದೇ ಸಮುದಾಯದ ಬೇರೊಬ್ಬರಿಗೆ ಸದಸ್ಯರಾಗಲು ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ ಅವಿರೋಧ ಆಯ್ಕೆಗೆ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ.