Asianet Suvarna News Asianet Suvarna News

ಚುನಾವಣೆ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಚುನಾವಣಾ ಸಾಮಾನ್ಯ ವೀಕ್ಷಕರು

ಧಾರವಾಡ ಲೋಕಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಆಗಮಿಸಿರುವ ಅಜಯ ಗುಪ್ತಾ ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಚುನಾವಣಾಧಿಕಾರಿಗಳೊಂದಿಗೆ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಧಾರವಾಡ ಲೋಕಸಭಾ ಮತಕ್ಷೇತ್ರದ ಬಗ್ಗೆ ಮಾಹಿತಿ ಪಡೆದರು. 

Dharwad Lok sabha election 2024 GEO informed by officials about election preparations rav
Author
First Published Apr 18, 2024, 4:26 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಏ.18) : ಧಾರವಾಡ ಲೋಕಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಆಗಮಿಸಿರುವ ಅಜಯ ಗುಪ್ತಾ ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಚುನಾವಣಾಧಿಕಾರಿಗಳೊಂದಿಗೆ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಧಾರವಾಡ ಲೋಕಸಭಾ ಮತಕ್ಷೇತ್ರದ ಬಗ್ಗೆ ಮಾಹಿತಿ ಪಡೆದರು. 

ಜಿಲ್ಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯ ಮತದಾನ ಪೂರ್ವದ ಮತ್ತು  ಮತದಾನ ದಿನದ ಸಿದ್ದತೆಗಳನ್ನು  ಖಚಿತಪಡಿಸಿಕೊಳ್ಳಬೇಕು ಚುನಾವಣಾಧಿಕಾರಿಗಳು ಸೇರಿದಂತೆ ಎಲ್ಲ ನಿಯೋಜಿತ ಅಧಿಕಾರಿಗಳು ಅನುಭವಿಕರಿದ್ದು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿರಿ ಎಂಬ ಭರವಸೆ ಇದೆ.  ಚುನಾವಣೆಯ ಎಲ್ಲ ಕಾರ್ಯ ಸಿದ್ದತೆಗಳನ್ನು ಪರಿಶೀಲಿಸಲಾಗಿದ್ದು, ನಿಯಮಾನುಸಾರವಿದೆ ಎಂದರು.

ಮನೆಯಿಂದ ಮತದಾನ ಮಾಡಲು ನೋಂದಾಯಿತರಾಗಿರುವ ಹಿರಿಯ ನಾಗರಿಕರಿಂದ, ವಿಕಲಚೇತನರಿಂದ ಮತದಾನ ಪಡೆಯಲು ತೆರಳುವ ತಂಡಗಳಿಗೆ ಸರಿಯಾದ ತರಬೇತಿ ನೀಡಬೇಕು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಜಿಲ್ಲೆಯ ಮತದಾರ ಮುಕ್ತವಾಗಿ ಮತದಾನ ಮಾಡಲು ಶಾಂತಿಯುತವಾದ, ಸುವ್ಯವಸ್ಥಿತವಾದ ವಾತಾವರಣ ರೂಪಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸ ಇಲಾಖೆ ಅಧಿಕಾರಿಗಳು ಕೈಗೊಂಡ ಕ್ರಮಗಳು ನಿಯಮಾನುಸಾರ ಇದೆ ಎಂದು ಅವರು ತಿಳಿಸಿದರು. ತಾವು ಸಹ ಮತದಾನ ಕೇಂದ್ರಗಳಿಗೆ, ಚೆಕ್ ಪೊಸ್ಟ್ ಮತ್ತು ಕಂಟ್ರೋಲ್ ರೂಮ್ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಅವರು ತಿಳಿಸಿದರು.

ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಸ್ಪರ್ಧಿಸುವ ದುಸ್ಸಾಹಸಕ್ಕೆ ಮುಂದಾಗಬಾರದು: ಬಿಎಸ್‌ವೈ

ಸುವಿಧಾ ಮತ್ತು ಸಿ- ವಿಜಲ್ ಆ್ಯಪ್ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ಸಾರ್ವಜನಿಕರಲ್ಲಿ ಸುವಿಧಾ ಮತ್ತು ಸಿ-ವಿಜಿಲ್ ಬಳಕೆ ಬಗ್ಗೆ ಅರಿವು ಮೂಡಿಸಲು ಅವರು ತಿಳಿಸಿದರು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಯು ಶಾಂತಿಯುತ ಮುಕ್ತ ನ್ಯಾಯಸಮ್ಮತವಾಗಿ ಜರುಗಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾವಹಿಸಲು ಜಿಲ್ಲಾಮಟ್ಟದಲ್ಲಿ ಹಾಗೂ ವಿಧಾನಸಭಾ ಮತಕ್ಷೇತ್ರವಾರು ಎಂಸಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. 

ಧಾರವಾಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಮಾರ್ಚ್ 16 ರಿಂದ  ಏಪ್ರೀಲ್  17, 2024 ರ ವರೆಗೆ ವಿವಿಧ ಚೆಕ್‍ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣಾ ಸಮಯದಲ್ಲಿ ದಾಖಲೆರಹಿತ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ಪತ್ತೆಯಾದ ರೂ.2,28,90,470/-ಗಳ ನಗದು, ರೂ.30,90,429/- ಮೌಲ್ಯದ  10545.281 ಲೀಟರ್ ಮದ್ಯ ರೂ.9,26,430/- ಮೊತ್ತದ ಡ್ರಗ್ಸ್, ರೂ.38,50,000/- ಮೊತ್ತದ ಬಂಗಾರದ ಆಭರಣ ಮತ್ತು ರೂ. 30,07,690/- ಮೌಲ್ಯಗಳ ಕುಕ್ಕರ್, ಸೀರೆ, ಪ್ಯಾಂಟ್ ಪೀಸ್ ಸೇರಿದಂತೆ ವಿವಿಧ ರೀತಿಯ ಉಚಿತ ಕೊಡುಗೆಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ ದಾಖಲೆರಹಿತ ಮತ್ತು ಸಂಶಯಾಸ್ಪದವಾಗಿ ಹೊಂದಿದ್ದ ನಗದು ಹಣ, ವಸ್ತುಗಳು ಸೇರಿದಂತೆ ಒಟ್ಟು ರೂ. 3,37,65,019/- ಗಳ ಹಣವನ್ನು ಜಪ್ತಿ ಮಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ನಿಯಮಾನುಸಾರ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಧಾರವಾಡ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಎಫ್‍ಎಸ್ ತಂಡದಿಂದ 1 ಪ್ರಕರಣ, ಎಸ್‍ಎಸ್ ತಂಡದಿಂದ 11 ಪ್ರಕರಣಗಳನ್ನು ಹಾಗೂ ಅಬಕಾರಿ ಕಾನೂನು ಉಲ್ಲಂಘನೆಯಡಿ 67 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು     ಸಿ-ವಿಜಿಲ್ ಮೂಲಕ ಇಲ್ಲಿಯವರೆಗೆ 1757 ದೂರುಗಳು ಸ್ವೀಕೃತವಾಗಿದ್ದು, ನಿಗದಿತ 100 ನಿಮಿಷಗಳ ಕಾಲಮಿತಿಯಲ್ಲಿ ಎಲ್ಲ ದೂರುಗಳನ್ನು ನಿಯಮಾನುಸಾರ ಪರಿಹರಿಸಿ ವಿಲೇವಾರಿ ಮಾಡಲಾಗಿದೆ ರಾಜಕೀಯ ಪಕ್ಷ, ಪ್ರತಿನಿಧಿಗಳು, ಅಭ್ಯರ್ಥಿಗಳು ವಿಡಿಯೋ ವ್ಯಾನ್, ಪ್ರಚಾರಕ್ಕಾಗಿ ಅಂತರ ಜಿಲ್ಲಾ ವಾಹನ ಸಂಚಾರ ಮತ್ತು ಜಿಲ್ಲೆಯಲ್ಲಿ ವಾಹನ ಸಂಚಾರ , ಕರ ಪತ್ರ ಹಂಚಿಕೆಗೆ ಅನುಮತಿ ಕೋರಿ, ಸುವಿಧಾ ಮೂಲಕ ಇವತ್ತಿನವರೆಗೆ ಸಲ್ಲಿಸಿದ್ದ 135 ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ಅನುಮತಿಸಿ, ವಿಲೇವಾರಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದರು. 

ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 1405 ಜನ ಹಾಗೂ 496 ಜನ ವಿಕಲಚೇತನರು ನೋಂದಾಯಿಸಿಕೊಂಡಿದ್ದಾರೆ ಮತ್ತು ಜಿಲ್ಲೆಯಲ್ಲಿ ಅಗತ್ಯ ಸೇವೆಯಲ್ಲಿರುವ 1188 ಜನ ಸೇವಾ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ  ಒಂದು ಸ್ಥಳದಲ್ಲಿ ಅಂಚೆ ಮತದಾನ ಕೇಂದ್ರ ತೆರೆದು, ಮೂರು ದಿನ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮತ್ತು ಮುಕ್ತವಾಗಿ ಚುನಾವಣೆ ಜರುಗಿಸಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಅರೆ ಸೇನಾ ಪಡೆ, ಮೀಸಲು ಪಡೆ, ಹೊಂ ಗಾರ್ಡ್ ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗುತ್ತದೆ. ಲೈಸನ್ಸ್ ಪಡೆದಿರುವ 865 ಗನ್‍ಗಳನ್ನು ನಿಯಮಾನುಸಾರ ವಶಕ್ಕೆ ಪಡೆದು, ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಲಾಗಿದೆ. ಮತ್ತು 88 ಗನ್‍ಗಳಿಗೆ ಕಾನೂನು ಪ್ರಕಾರ ವಿನಾಯಿತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಮತ್ತು ಚುನಾವಣಾ ಪ್ರಕ್ರಿಯೆಗೆ ದಕ್ಕೆ ತರಬಹುದಾದ ಹಾಗೂ ಈಗಾಗಲೇ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗಿರುವ 21 ಜನ ಆರೋಪಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಿಂದ ಗಡಿಪಾರು ಮಾಡಿ, ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು. 

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಸೇನಾ ಪಡೆ ಹಾಗೂ ಇತರ ರಕ್ಷಣಾ ಪಡೆಗಳಿಂದ ಪಥ ಸಂಚಲನ ಮಾಡಿ, ಮತದಾರರಲ್ಲಿ, ಸಾರ್ವಜನಿಕರಲ್ಲಿ ಮತದಾನ ಕುರಿತು ಆತ್ಮಸ್ಥೈರ್ಯ ಹೆಚ್ಚಿಸಲಾಗಿದೆ. ಸೂಕ್ತ ಬಂದೋಬಸ್ತ್ ಮೂಲಕ ಮುಕ್ತ, ಶಾಂತಿಯುತ ಚುನಾವಣೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ತಿಳಿಸಿದರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಧಾರವಾಡ ಜಿಲ್ಲಾ ಗ್ರಾಮೀಣ ಭಾಗದಲ್ಲಿ ಅನುಮತಿ ಹೊಂದಿರುವ 1305 ಗನ್‍ಗಳ ಪೈಕಿ, 27 ಗನ್‍ಗಳಿಗೆ ನಿಯಮಾನುಸಾರ ವಿನಾಯಿತಿ ನೀಡಿ, ಉಳಿದವುಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ನಗರಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ಪಡೆಯೊಂದಿಗೆ ಪಥ ಸಂಚಲನ ಮಾಡಿ, ಜನರಲ್ಲಿ ಸುವ್ಯವಸ್ಥಿತ ಚುನಾವಣೆಯ ಬಗ್ಗೆ ಆತ್ಮ ವಿಶ್ವಾಸ, ಸ್ಥೈರ್ಯ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆಗೆದಕ್ಕೆ ತರಬಹುದಾದ ಮತ್ತು ಹಲವು ಅಪರಾಧ ಪ್ರಕರಣಗಳಲ್ಲಿ ಈಗಾಗಲೇ ಭಾಗಿ ಆಗಿರುವ  ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಉಪವಿಭಾಗ ದಂಡಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಯುತ, ಸುವ್ಯವಸ್ಥಿತ, ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು 

 

ನನ್ನ ತೇಜೋವಧೆಗೆ ಜೋಶಿ ಇಳಿದಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ ಆರೋಪ

ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿ.ಇ.ಓ. ಸ್ವೂರಪ ಟಿ.ಕೆ. ಅವರು ಮಾತನಾಡಿ, ಜಿಲ್ಲೆಯಾಂದ್ಯತ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಪ್ರಸಕ್ತ ಲೋಕಸಭಾ  ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಶೇ. 75 ಕ್ಕಿಂತ  ಹೆಚ್ಚು ಮತದಾನ ಮಾಡಿಸುವ ಗುರಿ ಹೊಂದಾಗಿದೆ ಎಂದು ಅವರು ತಿಳಿಸಿದರು ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಮೋನಾ ರೋತ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಆದಾಯ ತೆರಿಗೆ ಇಲಾಖೆ ಅಧಿಕಾರಿ ಪಕೀರೇಶ ಬಾದಾಮಿ, ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ವಿಶ್ವನಾಥ ಪಿ.ಬಿ.ಅಂಚೆ ಮತದಾನ ನೋಡಲ್ ಅಧಿಕಾರಿ ಮೋಹನ ಶಿವಣ್ಣವರ, ಸುವಿಧಾ ನೋಡಲ್ ಅಧಿಕಾರಿ ರೇಷ್ಮಾ ತಾಳಿಕೋಟಿ, ಜಿಲ್ಲಾಧಿಕಾರಿಗಳ ಕಚೇರಿ ನೋಡಲ್ ಅಧಿಕಾರಿ ಅನುರಾಧಾ ವಸ್ತ್ರದ, ಸಿ-ವಿಜಿಲ್ ನೋಡಲ್ ಅಧಿಕಾರಿ ಅನೀಸ್ ನಾಯಕ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios