* ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 100 ದಾಟಿದ ಪೆಟ್ರೋಲ್‌ ಬೆಲೆ* ಗುಲಾಬಿ ಹೂವು ಕೊಟ್ಟು ಪ್ರತಿಭಟನೆ* ಆದಷ್ಟು ಬೇಗ ಮೋದಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು 

ಹುಬ್ಬಳ್ಳಿ(ಜೂ.14): ಚುನಾವಣೆ ಬಂದಾಗ ಪೆಟ್ರೋಲ್‌ ಬೆಲೆ ಕಡಿಮೆ ಮಾಡುವ ಕೇಂದ್ರ ಸರ್ಕಾರ, ಕೊರೋನಾ ಸಂಕಷ್ಟದ ಈ ವೇಳೆ ಬೆಲೆಯನ್ನು ಏರಿಕೆ ಮಾಡಿರುವುದು ಖಂಡನೀಯ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಖಂಡಿಸಿದ್ದಾರೆ. 

ವಿದ್ಯಾನಗರ ಹಾಗೂ ಉಣಕಲ್‌ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ನಗರದ ಕೇಶ್ವಾಪುರದ ಪೆಟ್ರೋಲ್‌ ಬಂಕ್‌ ಎದುರು ಹಮ್ಮಿಕೊಂಡ 100- ನಾಟೌಟ್‌ ಪ್ರತಿಭಟನೆಯಲ್ಲಿ ಮಾತನಾಡಿದರು.

ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಕೇಂದ್ರ ಸರ್ಕಾರ ಒಂಬತ್ತು ಬಾರಿ ಪೆಟ್ರೋಲ್‌ ಬೆಲೆಯನ್ನು ಹೆಚ್ಚಿಸಿದೆ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಪೆಟ್ರೋಲ್‌ ಬೆಲೆ 100 ದಾಟಿದೆ. ವಿಶ್ವದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ನಾವು ಹೆಚ್ಚಿನ ಹಣ ತೆರಬೇಕಾಗಿದೆ. ಅಚ್ಚೇ ದಿನ ಬಗ್ಗೆ ಭಾಷಣ ಮಾಡಿದ ಮೋದಿಯವರು ಕಳೆದ ಏಳು ವರ್ಷದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೆ ಇದೆ. ಬಡವರ ಬಗ್ಗೆ ಯಾವುದೆ ಕಾಳಜಿ ಇಲ್ಲದಂತೆ ಕೇಂದ್ರ ವರ್ತಿಸುತ್ತಿದ್ದು, ಅವರ ಬೆನ್ನು ಮುರಿಯಲಾಗುತ್ತಿದೆ. ಇಲ್ಲದಿದ್ದರೆ ಕೊರೋನಾ ಸಂಕ್ರಮಣದ ಈ ವೇಳೆ ದಿನಬಳಕೆ ಸಾಮಗ್ರಿಗಳ ಬೆಲೆ ಏರುತ್ತಿರಲಿಲ್ಲ ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಡಳಿತಕ್ಕೆ ತೊಂದರೆ: ಶೆಟ್ಟರ್‌

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಿರಂತರವಾಗಿ ಪ್ರತಿಭಟನೆ ನಡೆಯಲಿದೆ. ವಿದೇಶದಲ್ಲಿನ ಒಳಜಗಳ, ನೆಹರು ಮೇಲೆ, ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತ ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದೆ ಬಿಜೆಪಿ ಕೆಲಸವಾಗಿದೆ. ಬಿಜೆಪಿಗೆ ಜನತೆ ಬಗ್ಗೆ ಕಾಳಜಿ ಇಲ್ಲ. ಬಡವರಿಗೆ ತಮ್ಮವರ ಅಂತ್ಯಸಂಸ್ಕಾರವನ್ನೂ ಮಾಡಲು ಸಾಧ್ಯವಾಗಿಲ್ಲ. ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದವು. ಗಾಜಿಯಾಬಾದ್‌ನಲ್ಲಿ ರಸ್ತೆಗಳಲ್ಲಿ ಹೆಣ ಸುಡಲಾಯಿತು. ಇದಕ್ಕೆಲ್ಲ ಮೋದಿ ನೇತೃತ್ವದ ಸರ್ಕಾರವೆ ಕಾರಣ. ಆದಷ್ಟು ಬೇಗ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದರು.

ಈ ವೇಳೆ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ನ ರಜತ್‌ ಉಳ್ಳಾಗಡ್ಡಿಮಠ, ಅಬ್ದುಲ್‌ ಘನಿ, ಎಂ.ಎಸ್‌. ಪಾಟೀಲ್‌, ಸಮೀರ್‌ ಖಾನ್‌, ರಾಜೇಂದ್ರ ಪಾಟೀಲ್‌, ಸತೀಶ ಮೆಹೆರವಾಡೆ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಪ್ರಕಾಶ ಕ್ಯಾರಿಕಟ್ಟಿಸೇರಿ ಹಲವರಿದ್ದರು.

ಗುಲಾಬಿ ಹೂವು ಕೊಟ್ಟು ಪ್ರತಿಭಟನೆ

ಪೆಟ್ರೋಲ್‌ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್‌ನ ಮೂರನೇ ದಿನದ ಪ್ರತಿಭಟನೆ ವಿಶಿಷ್ಟವಾಗಿ ನಡೆದಿದ್ದು, ಮಹಿಳಾ ಘಟಕದವರು ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದಂತಹ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಅವರಿಗೆ ಗುಲಾಬಿ ಹೂವು ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಗೆ ಮತದಾನ ಮಾಡುವಂತೆ ಕೇಳಿಕೊಂಡರು.

ಇಲ್ಲಿನ ಇಂದಿರಾನಗರ, ವಿದ್ಯಾನಗರ, ಇಂಡಿಪಂಪ್‌, ಆನಂದ ನಗರ, ಕಾರವಾರ ರಸ್ತೆಯ ಪೆಟ್ರೋಲ್‌ ಬಂಕ್‌ ಎದುರು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಬೆಲೆಯೇರಿಕೆ ವಿರುದ್ಧ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದವರಿಗೆ ಕೇಂದ್ರ ಸರ್ಕಾರದ ಬೆಲೆಯೇರಿಕೆ ಧೋರಣೆ ಕುರಿತು ಹೇಳಿ ಅವರಿಂದ ಅಭಿಪ್ರಾಯ ಪಡೆದರು. ಅಲ್ಲದೆ ಗುಲಾಬಿ ಹೂವನ್ನು ನೀಡಿ ಮುಂದಿನ ಚುನಾವಣೆಗೆ ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿದರು.

ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಗೌರಿ, ಚೇತನಾ ಲಿಂಗದಾಳ, ಬಾಳಮ್ಮ ಜಂಗಿನವರ, ಪ್ರೀತಿ ಜೈನ, ಖೈರುನ್ನೀಸಾ ಧಾರವಾಡ, ಮಂಜುಳಾ ಹೆಬ್ಬಳ್ಳಿ, ಸಲ್ಮಾ ಸೇರಿ ಮತ್ತಿತರರು ಇದ್ದರು.