ಧಾರವಾಡ(ಸೆ.17): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 13ನೇ ಆವೃತ್ತಿಯ ಪ್ರಾರಂಭಕ್ಕೆ ಒಂದೇ ದಿನ ಬಾಕಿಯಿದ್ದು, ಕೊರೋನಾ ಮಧ್ಯೆಯೂ ‘ಕ್ರಿಕೆಟ್‌ ಕಾವು’ ಏರತೊಡಗಿದೆ. ಕೊರೋನಾ ಹಿನ್ನೆಲೆ ದೂರದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಐಪಿಎಲ್‌ ನಡೆಯುತ್ತಿದ್ದು, ಧಾರವಾಡದ ಹುಡುಗ ಪವನ ದೇಶಪಾಂಡೆ, ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ಪರ ಆಡುತ್ತಿರುವುದು ಹೆಮ್ಮೆಯ ಸಂಗತಿ.

ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ (ವಿಎಂಸಿಎ)ಯಲ್ಲಿ ಎಂಟು ವರ್ಷದವನಿದ್ದಾಗಲೇ ಆಡಲು ಆರಂಭಿಸಿದ ಪವನ, ಕೆಲವೇ ಸಮಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗಳೆರಡರಲ್ಲೂ ಪ್ರಬುದ್ಧತೆ ಸಾಧಿಸಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಧಾರವಾಡ ವಲಯ ತಂಡದ ಕಾಯಂ ಆಟಗಾರರಾದರು. ತಂದೆ ಉದಯ ಧಾರವಾಡದಲ್ಲಿ ಪತ್ರಿಕಾ ವಿತರಕರು. ಕಷ್ಟದಲ್ಲಿಯೇ ಬೆಳೆದ ಪವನ ತನ್ನ ಪ್ರತಿಭೆ ಮೂಲಕ ಕೆಎಸ್‌ಸಿಎ ಲೀಗ್‌ ಪಂದ್ಯಗಳಲ್ಲಿ ಸತತ ಅತ್ಯುತ್ತಮ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದರಾದರೂ ರಾಜ್ಯ ತಂಡದ ಪರ ಆಡಲು ಸಾಕಷ್ಟು ಕಾಯಬೇಕಾಯಿತು.

ಗದಗ: ಕೂಲಿ ಕಾರ್ಮಿಕನ ಪುತ್ರಿ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ..!

ಕೊನೆಗೂ ಅವರಿಗೆ ‘ಬ್ರೇಕ್‌’ ನೀಡಿದ ವರ್ಷ 2015. ಕೊಚ್ಚಿಯಲ್ಲಿ ಕೇರಳದ ಎದುರು ಟಿ-20 ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಆಡಿದ ‘ಧಾರವಾಡದ ಹುಡುಗ’ ಮುಂದಿನ ವರ್ಷ ಡಿಸೆಂಬರ್‌ 7ರಂದು ಮಹಾರಾಷ್ಟ್ರದ ವಿರುದ್ಧ ರಣಜಿ ಪಂದ್ಯದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು.(ಪವನ, ಕರ್ನಾಟಕದ ಪರ ರಣಜಿ ಆಡಿದ ಧಾರವಾಡದ ನಾಲ್ಕನೇ ಆಟಗಾರ. ಆನಂದ ಕಟ್ಟಿ, ಸೋಮಶೇಖರ ಶಿರಗುಪ್ಪಿ ಹಾಗೂ ರಾಜು ಭಟ್ಕಳ ಮೊದಲ ಮೂವರು).
ಪವನ ಎಡಗೈ ಬ್ಯಾಟ್ಸಮನ್‌ ಹಾಗೂ ಬಲಗೈ ಆಫ್‌ ಬ್ರೇಕ್‌ ಬೌಲರ್‌ ಆಗಿದ್ದು, 2018ರಲ್ಲಿ ಮೊದಲ ಬಾರಿ ಆರ್‌ಸಿಬಿಯಿಂದ ಖರೀದಿಸಲ್ಪಟ್ಟರೂ ಆಡುವ ಅವಕಾಶದಿಂದ ವಂಚಿತರಾದರು. ಕಳೆದ ವರ್ಷದ ಉತ್ತಮ ಫಾಮ್‌ರ್‍ದಿಂದಾಗಿ ಆರ್‌ಸಿಬಿ ಅವರನ್ನು ಮತ್ತೆ ಖರೀದಿ ಮಾಡುವಂತೆ ಮಾಡಿತು. ಇದುವರೆಗೆ ಇಪ್ಪತ್ತು ಟಿ- 20 ಪಂದ್ಯಗಳಲ್ಲಿ 426 ಓಟಗಳಿಸಿದ್ದಲ್ಲದೇ ನಾಲ್ಕು ವಿಕೆಟ್‌ ಪಡೆದಿರುವ ಪವನ, ಎಂಟು ಪ್ರಥಮದರ್ಜೆ ಪಂದ್ಯಗಳಲ್ಲಿ 255 ಓಟ ಸಂಪಾದಿಸಿದ್ದಾರೆ. 14 ಹುದ್ದರಿಗಳನ್ನೂ ಪಡೆದಿದ್ದಾರೆ. 23 ‘ಲಿಸ್ಟ್‌- ಎ’ ಪಂದ್ಯಗಳಲ್ಲಿ 777 ಓಟ ಗಳಿಸಿದ್ದಲ್ಲದೇ 2 ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಸೆ. 16ರಂದು ತಮ್ಮ ಜನ್ಮದಿನವನ್ನಾಚರಿಸಿಕೊಂಡ ಪವನಗೆ ಈ ಸಲವಾದರೂ ಆಡುವ ಅವಕಾಶ ಸಿಗುವ ನಿರೀಕ್ಷೆಯಿದೆ. ಈ ನಿರೀಕ್ಷೆ ಹುಸಿಹೋಗದಿರಲಿ, ಧಾರವಾಡದ ಈ ಪ್ರತಿಭೆಗೆ ಅವಕಾಶ ದೊರೆತು ಅದು ಮಿಂಚುವಂತಾಗಲಿ ಎಂದು ವಿಎಂಸಿಎ ತರಬೇತುದಾರ ವಸಂತ ಮುರ್ಡೇಶ್ವರ ಅವರು ತಿಳಿಸಿದ್ದಾರೆ.