ಧಾರವಾಡ(ಆ.26): ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್‌ ಅವರಿಗೆ ಭಾರತೀಯ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್ ಗೌರವಕ್ಕೆ ಪಾತ್ರ​ವಾ​ಗಿದ್ದು, ಲೆಫ್ಟಿ​ನೆಂಟ್‌ ಜನ​ರಲ್‌ ಹುದ್ದೆಗೆ ಬಡ್ತಿ​ ಪ​ಡೆ​ದಿ​ದ್ದಾ​ರೆ. ಈ ಮೂಲಕ ಈ ರೀತಿಯ ತ್ರೀಸ್ಟಾರ್‌ ಗೌರವ ಪಡೆದ ದೇಶದ 3ನೇ ಮಹಿಳಾ ಅಧಿಕಾರಿ ಎಂಬ ಗರಿ​ಮೆಗೆ ಡಾ.ಮಾ​ಧುರಿ ಪಾತ್ರ​ರಾ​ಗಿ​ದ್ದಾ​ರೆ. ಲೆಫ್ಟಿನೆಂಟ್‌ ಜನರಲ್‌ ಪುನೀತಾ ಅರೋರಾ ಮತ್ತು ಏರ್‌ ಮಾರ್ಷಲ್‌ ಪದ್ಮಾ ಬಂಡೋಪಾಧ್ಯಾಯ ಈ ಗೌರವ ಪಡೆದಿರುವ ಇನ್ನಿಬ್ಬರು ಮಹಿಳೆಯರು.

ಡಾ.ಮಾಧುರಿ ಅವ​ರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಪ್ರೇರಣೆ ನೀಡಿ​ದ​ವರು ಅವರ ಮುತ್ತಜ್ಜಿ ಸರಳಾದೇವಿ. ಸರ​ಳಾ​ದೇವಿ ಅವ​ರು 1920ರಲ್ಲಿಯೇ ವೈದ್ಯರಾಗಿ​ದ್ದರು. ಇನ್ನು ಎಂಬಿಬಿಎಸ್‌ ಪದವಿಯ ಮೂರು ಹಂತಗಳಲ್ಲಿ ಉತ್ಕೃಷ್ಟ ದರ್ಜೆಯೊಂದಿಗೆ ಪುಣೆ ವಿವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಹೆಮ್ಮೆ ಮಾಧುರಿ ಕಾನಿಟ್ಕರ್‌ ಅವರದ್ದು. 1982ರಲ್ಲಿ ಪದವಿ ಮುಗಿಸಿದಾಗ ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿಗಳ ಬಂಗಾರ ಪದಕ ಸಹ ಪಡೆದಿದ್ದರು.

ಸ್ಮಾರ್ಟ್‌ಸಿಟಿ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ: ಸಚಿವ ಪ್ರಹ್ಲಾದ ಜೋಶಿ

ಡಾ.ಮಾ​ಧುರಿ ಅವರ ಪತಿ ರಾಜೀವ್‌ ಕಾನಿ​ಟ್ಕರ್‌ ಕೂಡ ಲೆಫ್ಟಿ​ನೆಂಟ್‌ ಜನ​ರಲ್‌ ಆಗಿ ನಿವೃ​ತ್ತಿ​ ಪ​ಡೆ​ದಿ​ದ್ದಾ​ರೆ. ಪತಿ-ಪತ್ನಿ ಇಬ್ಬರೂ ಸೇನಾಪಡೆಯಲ್ಲಿ ಲೆಫ್ಟಿನೆಂಟ್‌ ಜನರಲ್‌ ಹುದ್ದೆ ಅಲಂಕರಿಸಿದ ಅಪರೂಪದ ಜೋಡಿ ಇದು.