ಆತ್ಮಭೂಷಣ್‌

ಮಂಗಳೂರು(ಏ.20): ರಾಜಧರ್ಮ-ಕಾಲಧರ್ಮ ಹಾಗೂ ವ್ಯವಹಾರ ಧರ್ಮ ಈ ಮೂರನ್ನೂ ಕೊರೋನಾ ಸಂಕಷ್ಟದ ಈ ಸಮಯದಲ್ಲಿ ನಾನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಮಾತ್ರವಲ್ಲ ಕ್ಷೇತ್ರದಲ್ಲೂ ನೂರಕ್ಕೆ ನೂರರಷ್ಟುಲಾಕ್‌ಡೌನ್‌ ಪಾಲನೆಗೆ ಒತ್ತು ನೀಡುತ್ತಿದ್ದೇನೆ. ದೇಶದ ರಾಜನ (ಪ್ರಧಾನಿ) ಆದೇಶವನ್ನು ಚಾಚೂ ತಪ್ಪದೆ ಪಾಲಿಸಬೇಕಾಗಿರುವುದು ಪ್ರಜೆಗಳ, ಪ್ರಜಾಪರಿಪಾಲಕರ ಧರ್ಮ. ಇದು ರಾಜಧರ್ಮ ಪರಿಪಾಲನೆ. ಇದಕ್ಕಾಗಿ ಭಕ್ತರಿಗೆ, ಜನತೆಗೆ ನಾನು ಅಭಿನಂದನೆ ಹೇಳುತ್ತೇನೆ.

ಇದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮವಿಭೂಷಣ ಪುರಸ್ಕೃತ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಮಾತು​ಗ​ಳು. ಲಾಕ್‌ಡೌನ್‌ ಆರಂಭವಾದ ಬಳಿಕ ಮುಕ್ತಾಯದ ವರೆಗೂ ಕ್ಷೇತ್ರ ಬಿಟ್ಟು ಕದಲುವುದಿಲ್ಲ ಎಂದು ಶಪಥ ಕೈಗೊಂಡಿದ್ದಾರೆ ಹೆಗ್ಗ​ಡೆ. ಲಾಕ್‌ಡೌನ್‌ ಅವಧಿಯ ದಿನಚರಿಯನ್ನು ‘ಕನ್ನಡಪ್ರಭ’ ಜತೆ ಹಂಚಿಕೊಂಡಿದ್ದು ಹೀಗೆ.

ದೊಡ್ಡ ಗೇಟು ದಾಟಿ ಹೋಗಿಲ್ಲ!

ಲಾಕ್‌ಡೌನ್‌ ಘೋಷಣೆಯಾದ ಬಳಿಕ ನಾನು ಧರ್ಮಸ್ಥಳದ ದೊಡ್ಡ ಗೇಟು ದಾಟಿ ಹೊರ ಹೋಗಿಲ್ಲ. ಬಸದಿ ಹಾಗೂ ಮ್ಯೂಸಿಯಂ ಗೇಟನ್ನೂ ಮೀರಿ ಹೋಗಿಲ್ಲ. ನನ್ನ ಬೀಡು, ದೇವಸ್ಥಾನ, ಗ್ರಂಥಾಲಯ, ಮ್ಯೂಸಿಯಂ ಬಿಟ್ಟರೆ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದೇನೆ. ಸದಾ ಭಕ್ತರಿಂದ ತುಂಬಿರುತ್ತಿದ್ದ ಕ್ಷೇತ್ರ ಈಗ ಖಾಲಿ, ಖಾಲಿ. ಗ್ರಾಮಾಭಿವೃದ್ಧಿ ಯೋಜನೆ, ಶೈಕ್ಷಣಿಕ ಆಗುಹೋಗುಗಳ ಸಭೆಯೂ ನಡೆಯುತ್ತಿಲ್ಲ. ಎಲ್ಲರೂ ಅವರವರ ಮನೆಯಲ್ಲೇ ಇದ್ದು ಲಾಕ್‌ಡೌನ್‌ ಪಾಲಿಸುವಂತೆ ಹೇಳಿದ್ದೇನೆ. ಇದನ್ನು ಚಾಚೂ ತಪ್ಪದೆ ಎಲ್ಲರೂ ಪಾಲಿಸುತ್ತಿದ್ದಾರೆ. ಶೇ.99.99ರಷ್ಟುಇದು ಪಾಲನೆಯಾಗುತ್ತಿದೆ ಎಂಬ ಹೆಮ್ಮೆ ಮತ್ತು ಸಮಾಧಾನ ನನಗಿದೆ.

ಧರ್ಮಸ್ಥಳ: ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ

ಏಳೋದು ಅರ್ಧ ಗಂಟೆ ತಡ

ಬೆಳಗ್ಗೆ ಅರ್ಧ ಗಂಟೆ ತಡವಾಗಿ ಅಂದರೆ, 6.30ಕ್ಕೆ ಏಳುತ್ತೇನೆ. ನಿತ್ಯಕರ್ಮ ಮುಗಿಸಿ ಎಲ್ಲ ಪತ್ರಿಕೆ ಓದುತ್ತೇನೆ. ನಂತರ ಯೋಗ ಮಾಡುತ್ತೇನೆ. ಪೂಜೆ ನೆರವೇರಿಸಿ ಉಪಹಾರ. ಮಧ್ಯಾಹ್ನ ಹಾಗೂ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತೇವೆ. ಈಗ ಕುಟುಂಬ​ದ​ವ​ರೊಂದಿ​ಗೆ ಬೆರೆಯುತ್ತಾ, ಹರಟುತ್ತಿರುತ್ತೇನೆ. ಮಧ್ಯಾಹ್ನದ ವರೆಗೆ ಗ್ರಂಥಗಳ ಓದುವಿಕೆ, ಆಗಾಗ ಟಿ.ವಿ. ನೋಡುತ್ತಾ ದೇಶ, ವಿದೇಶಗಳ ವಿದ್ಯಮಾನಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತೇನೆ.

ನೋಟ್ಸ್‌ ಮಾಡೋದು ಶ್ರೀಮತಿ

ನನಗೆ ಸಾಧ್ಯವಾದಷ್ಟುಓದಿದ್ದನ್ನು ನೆನಪಿಟ್ಟುಕೊಳ್ಳುವುದು ಅಭ್ಯಾಸ. ಆದರೆ ನನ್ನ ಶ್ರೀಮತಿ (ಹೇಮಾವತಿ ವಿ. ಹೆಗ್ಗಡೆ) ಅವರು ಪ್ರತಿಯೊಂದನ್ನೂ ನೋಟ್ಸ್‌ ಮಾಡುತ್ತಾರೆ. ಇದನ್ನು ನಾನೂ ಈಗ ರೂಢಿಸಿಕೊಳ್ಳಲು ಮುಂದಾಗಿದ್ದೇನೆ. ಭಾಷಣಕ್ಕೆ ಬೇಕಾದ ವಿಷಯಗಳನ್ನು ನೋಟ್ಸ್‌ ಮಾಡಿಕೊಳ್ಳುತ್ತೇನೆ. ನಮ್ಮದೇ ಪ್ರಕಾಶನದಿಂದ ಹೊರತರುವ ಶಾಂತಿವನ ಟ್ರಸ್ಟ್‌$ಮಕ್ಕಳ ಪುಸ್ತಕಗಳಿಗೆ ಸಣ್ಣ ಕತೆಗಳನ್ನು ಬರೆಯುತ್ತಿದ್ದೇನೆ.

ಮೊಮ್ಮಕ್ಕಳೊಂದಿಗೆ ಚಿನ್ನಾಟ!

ಮಧ್ಯಾಹ್ನ 1.30ಕ್ಕೆ ಭೋಜನವಾದರೆ, ನಂತರ 4ರವರೆಗೆ ವಿಶ್ರಾಂತಿ. ಬಳಿಕ ಬೀಡಿನಲ್ಲಿರುವ ಸಣ್ಣ ಗ್ರಂಥಾಲಯದಲ್ಲಿ ಪುಸ್ತಕದ ಒಡನಾಟ. ಮೊಮ್ಮಕ್ಕಳೊಂದಿಗೆ ಚಿನ್ನಿದಾಂಡು ಸೇರಿ ವಿವಿಧ ಚಿನ್ನಾಟಗಳನ್ನು ಆಡುತ್ತೇನೆ. ಸಂಜೆ 6ಕ್ಕೆ ಶ್ರೀಮತಿ ಜತೆಗೆ ದೇವಸ್ಥಾನಕ್ಕೆ ಒಂದು ಸುತ್ತು ಬರುತ್ತೇನೆ. ಕೊರೋನಾ ಆದಷ್ಟುಬೇಗ ದೂರವಾಗಲಿ ಎಂದು ನಿತ್ಯವೂ ಮಂಜುನಾಥ ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾತ್ರಿ ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ ಧಾರಾವಾಹಿಯನ್ನು ಕುಟುಂಬ ಸಮೇತ ನೋಡುತ್ತೇನೆ. ರಾತ್ರಿ 9.30ಕ್ಕೆ ಊಟದ ಬಳಿಕ ಈಗ ಬೇಗನೆ ಮಲಗುತ್ತೇನೆ.

9 ನಿಮಿಷ ಜ್ಯೋತಿ ಬೆಳಗಲು ಡಾ. ವೀ​ರೇಂದ್ರ ಹೆಗ್ಗಡೆ ಕರೆ

ವಸುಧೇಂದ್ರರ ‘ತೇಜೋ ತುಂಗಭದ್ರ’ ಹಾಗೂ ಬೇರೆ ಬೇರೆ ಇಂಗ್ಲಿಷ್‌ ಕೃತಿಗಳನ್ನು ಓದಿದ್ದೇನೆ. ಬೌದ್ಧ ಭಿಕ್ಷು, ಜೈನ ಮತ್ತು ಹಿಂದೂ ಧರ್ಮದ ಅನೇಕ ಪುಸ್ತಕಗಳು, ಇಸ್ತಾಂಬುಲ್‌ ಪ್ರವಾಸಿ ಕಥನ, ಇಸ್ಕಾನ್‌, ರಾಮಾಯಣ ಹೀಗೆ ಹತ್ತುಹಲವು ಪುಸ್ತಕಗಳನ್ನು ಓದುತ್ತಾ ಶ್ರೀಮತಿ ಜತೆಗೆ ವಿಮರ್ಶೆ ನಡೆಸುತ್ತಿರುತ್ತೇನೆ. ಕೆಲವೊಮ್ಮೆ ಮ್ಯೂಸಿಯಂಗೆ ಭೇಟಿ ನೀಡುತ್ತೇನೆ. ಅಲ್ಲಿರುವ ಪುರಾತನ ಮೂರ್ತಿಗಳ ಪೈಕಿ ಕೆಲವನ್ನು ಗುರುತಿಸಿ, ಅದರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುತ್ತೇನೆ. ಬಾಕಿಯುಳಿದಿರುವ ಶೇ.20ರಷ್ಟುಪ್ರಾಚ್ಯವಸ್ತುಗಳನ್ನು ಸಮಗ್ರ ವಿವರಗಳೊಂದಿಗೆ ಅಚ್ಚುಕಟ್ಟಾಗಿ ಜೋಡಿಸುವ ಕೆಲಸ ಮಾಡುತ್ತೇನೆ.