ಧರ್ಮಸ್ಥಳದ ( Dharmasthala) ಶವ ಹೂತಿಟ್ಟ ಪ್ರಕರಣದ ತನಿಖೆಗಾಗಿ ಎಸ್ಐಟಿ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಕಳೆದ 40 ವರ್ಷಗಳ ಕ್ರೈಂ ಹಿಸ್ಟರಿಯನ್ನು ಪರಿಶೀಲಿಸಿ, ಸಮಗ್ರ ಮಾಹಿತಿ ಸಂಗ್ರಹಿಸಲಿದೆ. ಎಸ್ಪಿ ಡಾ. ಅರುಣ್ ಕುಮಾರ್ ಜೊತೆ ಚರ್ಚಿಸಿ, ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದೆ.
ಬೆಂಗಳೂರು (ಜು.23): ಹಿಂದುಗಳ (Hindu) ಅತ್ಯಂತ ಪ್ರಮುಖ ಆರಾಧನ ಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟಿರುವ ಕೇಸ್‌ನಲ್ಲಿ ಇಂದು ಎಸ್ಐಟಿ (SIT) ಅಧಿಕೃತ ಎಂಟ್ರಿಯಾಗುವ ಸಾಧ್ಯತೆ ಇದೆ. ಇಂದು ಧರ್ಮಸ್ಥಳಕ್ಕೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ (Pranav Mohanty) ಭೇಟಿ ನೀಡ್ತಾರಾ ಎನ್ನುವ ಕುತೂಹಲಗಳು ಗರಿಗೆದರಿವೆ. ಆ ಮೂಲಕ ಅಧಿಕೃತವಾಗಿ ಧರ್ಮಸ್ಥಳ ಶವ ಹೂತಿಟ್ಟ ಕೇಸ್ ನ ಮಾಹಿತಿಯನ್ನು ಎಸ್‌ಐಟಿ ಟೀಮ್ ಪಡೆಯಲಿದೆ.
ಅದಕ್ಕೂ ಮುನ್ನ ದಕ್ಷಿಣ ಕನ್ನಡ ಎಸ್‌ಪಿ ಡಾ. ಅರುಣ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಲಿದ್ದು, ಕೇಸ್ ಬಗ್ಗೆ ಹಾಗೂ ಎಸ್ಐಟಿಗೆ ಅಗತ್ಯ ಸಿಬ್ಬಂದಿ ನೇಮಕ ಬಗ್ಗೆ ಚರ್ಚೆ ಆಗಲಿದ. ದ.ಕ ಜಿಲ್ಲೆಯ ಪೊಲೀಸ್ ಸಿಬ್ಬಂದಿಯನ್ನ ಎಸ್ಐಟಿಗೆ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಹೀಗಾಗಿ ಜಿಲ್ಲೆಯ ದಕ್ಷ ಪೊಲೀಸ್ ಸಿಬ್ಬಂದಿಯನ್ನ ಎಸ್ಐಟಿಗೆ ಬಳಸಲು ಪ್ಲಾನ್ ಮಾಡಲಾಗಿದೆ.
ಡಿವೈಎಸ್ಪಿ, ಇನ್ಸ್ಪೆಕ್ಟರ್, ಪಿಎಸ್‌ಐ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡುವ ಸಾಧ್ಯತೆ ಇದ್ದು, ಬಳಿಕ ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ ಕೇಸ್ ಫೈಲ್‌ಗಳನ್ನು ಎಸ್‌ಐಟಿ ಟೀಮ್ ಪಡೆಯಲಿದೆ. ಕೇಸ್ ನ ಸಮಗ್ರ ಮಾಹಿತಿ ಸಂಗ್ರಹಿಸಿ ಸದ್ಯದ ತನಿಖಾ ಪ್ರಗತಿ ಬಗ್ಗೆ ವಿವರ ಸಂಗ್ರಹ ಮಾಡಲಿದೆ.
ಆ ಬಳಿಕ ಧರ್ಮಸ್ಥಳ ಅಥವಾ ಬೆಳ್ತಂಗಡಿ ಕೇಂದ್ರ ಸ್ಥಾನ ಮಾಡಿಕೊಂಡು ಎಸ್ ಐಟಿ ತನಿಖೆ ಸಾಧ್ಯತೆ ಇದೆ. ಸದ್ಯ ಕೇಸ್ ಫೈಲ್ ಪಡೆದು ಸಿಬ್ಬಂದಿ ನೇಮಕ ಬಗ್ಗೆ ವಿವರ ಪಡೆದು ಬೆಂಗಳೂರಿಗೆ ವಾಪಾಸ್ ಆಗಲಿದೆ. ಆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಿ ಪ್ರತ್ಯೇಕ ಟೀಮ್ ರಚಿಸಿ ತನಿಖೆ ಶುರು ಮಾಡಲಿದೆ.
40 ವರ್ಷಗಳ ಕ್ರೈಮ್ ಹಿಸ್ಟರಿ ಜಾಲಾಡಲಿದೆ ಎಸ್ಐಟಿ: ಧರ್ಮಸ್ಥಳದ ಕಳೆದ 40 ವರ್ಷಗಳ ಕ್ರೈಂ ಹಿಸ್ಟರಿ ಬಗ್ಗೆ ಪ್ರಮುಖವಾಗಿ ಎಸ್ಐಟಿ ತನಿಖೆ ಮಾಡಬಹುದು. ಧರ್ಮಸ್ಥಳ ಗ್ರಾಮದ ಕಳೆದ 40 ವರ್ಷಗಳ ಅಪರಾಧ ಕೇಸ್ ಗಳ ಮಾಹಿತಿ ಸಂಗ್ರಹ ಮಾಡಿಕೊಂಡು ವಿವರ ಪಡೆಯಲಿದೆ. ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಿದೆ. ಈ ಹಿಂದೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಇತ್ತು ಸದ್ಯ ಧರ್ಮಸ್ಥಳ ಗ್ರಾಮ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ಎರಡೂ ಠಾಣಾ ವ್ಯಾಪ್ತಿಯ 40 ವರ್ಷಗಳ ಕ್ರೈಂ ದಾಖಲೆಗಳನ್ನು ಹುಡುಕಾಡಲಿದೆ. ಆತ್ಮಹತ್ಯೆ, ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ವಿವರ ಸಂಗ್ರಹ ಮಾಡಲಿದೆ. ಅನಾಥ ಶವಗಳು ಸೇರಿ ಎಲ್ಲಾ ಮೃತದೇಹಗಳ ವಿಲೇವಾರಿ ಕುರಿತ ಪೊಲೀಸ್ ರೆಕಾರ್ಡ್ ನತ್ತಲೂ ಎಸ್ಐಟಿ ಕಣ್ಣಿಡಲಿದೆ.
ಪೊಲೀಸ್ ನಿಯಮದಂತೆ ಕಾನೂನು ಬದ್ದವಾಗಿ ಮೃತದೇಹಗಳ ವಿಲೇವಾರಿ ಪ್ರಕ್ರಿಯೆ ನಡೆಸಿದ್ದಾರಾ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹವಾಗಲಿದೆ. ಎಲ್ಲವನ್ನೂ ಅಳೆದು ತೂಗಿ ಮುಂದಿನ ತನಿಖೆಗೆ ಎಸ್ಐಟಿ ಇಳಿಯಲಿದ. ಸ್ಥಳೀಯ ಗ್ರಾಮ ಪಂಚಾಯತ್, ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆಯುವ ಸಾಧ್ಯತೆ ಇದ್ದು, ಆ ಬಳಿಕವೇ ಎಲ್ಲರಿಗೂ ಮುಂದಿನ ವಿಚಾರಣೆ ವೇಳೆ ನೊಟೀಸ್ ನೀಡುವ ಸಾಧ್ಯತೆ ಇದೆ.
