ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ಪ್ರತಿಷ್ಠಾನದ ಗುರಿ: ಮಕ್ಕಳ ಕಲಿಕೆಗೆ ಅಗತ್ಯ ಸಲಕರಣೆಗಳ ವಿತರಣೆ
ಒಂದು ಸರ್ಕಾರಿ ಶಾಲೆಯ ವಾತಾವರಣ ಹಾಗೂ ವ್ಯವಸ್ಥೆ ಹೇಗಿರಬೇಕು ಎಂದು ತಿಳಿಯಲು ತಾಲೂಕಿನ ಗೌಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ.
ಕೆ.ವಿ.ಮನು
ಕನಕಪುರ (ಜೂ.17): ಒಂದು ಸರ್ಕಾರಿ ಶಾಲೆಯ ವಾತಾವರಣ ಹಾಗೂ ವ್ಯವಸ್ಥೆ ಹೇಗಿರಬೇಕು ಎಂದು ತಿಳಿಯಲು ತಾಲೂಕಿನ ಗೌಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ. ಶಿಥಿಲಾವಸ್ಥೆಯಲ್ಲಿದ್ದ ತಾಲೂಕಿನ ಕಸಬಾ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹೂವಿನ ಹೊಳೆ ಪ್ರತಿಷ್ಠಾನ ಸಂಸ್ಥೆಯು ಮೂರು ವರ್ಷಗಳ ಅವಧಿಗೆ ದತ್ತು ಪಡೆದಿರುವ ಬೆಂಗಳೂರಿನ ಟೆಕ್ ಸಿಸ್ಟಮ್ಸ್ ಮತ್ತು ಗ್ಲೋಬಲ್ ಸರ್ವಿಸಸ್ ಸಹಕಾರದೊಂದಿಗೆ ದತ್ತು ಪಡೆದು 15 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಸರ್ಕಾರಿ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ಪರಿವರ್ತಿಸಿ ಗ್ರಾಮೀಣ ಮಕ್ಕಳ ಬಾಳಿನಲ್ಲಿ ಸಂತೋಷ ತಂದಿರುವುದು ಹೆಮ್ಮೆಯ ವಿಷಯವಾಗಿದೆ.
ನಗರದ ಖಾಸಗಿ ಶಾಲೆಗಳ ಮಟ್ಟಕ್ಕೆ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಬೆಳಸಿ-ಉಳಿಸುವ ಉದ್ದೇಶದಿಂದ ಐಟಿ ಉದ್ಯಮದ ಟೆಕ್ ಸಿಸ್ಟಮ್ ಹಾಗೂ ಗ್ಲೋಬಲ್ ಸರ್ವಿಸಸ್ ಸಂಸ್ಥೆಯವರು ಗೌಡಹಳ್ಳಿ ಸರ್ಕಾರಿ ಶಾಲೆಯನ್ನು ಹೂವಿನಹೊಳೆ ಸಂಸ್ಥೆಯ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕೂಡಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಸುಸಜ್ಜಿತವಾದ ನೂತನವಾಗಿ ನಾಲ್ಕು ಕೊಠಡಿಯ ಕಟ್ಟಡವನ್ನು ನಿರ್ಮಿಸಿರುವುದಲ್ಲದೆ ಶಾಲಾ ಆವರಣದ ಸುತ್ತಲೂ 250 ಅಡಿ ಉದ್ದ ಹಾಗೂ ಅರವತ್ತು ಅಡಿ ಎತ್ತರದ ಕಾಂಪೌಂಡ್ ನಿರ್ಮಾಣ ಮಾಡಿ ಅದರ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ಸುಂದರ ವಾತಾವರಣ ಸೃಷ್ಟಿಸಿರುವುದು ಪ್ರಶಂಸನೀಯವಾದುದು.
ಬೇಡಿಕೆ ಕಳೆದುಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದಲಾದ ನಿಯಮದಿಂದಾಗಿ ಸೀಟು ಕೇಳುವವರೇ ಇಲ್ಲ!
ಶಾಲೆಯಲ್ಲಿ 35 ಹೆಣ್ಣು ಮಕ್ಕಳು ಹಾಗೂ 40 ಗಂಡು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಮಕ್ಕಳಿಗೆ ಅಗತ್ಯವಾದ ಸಮವಸ್ತ್ರ, ನೋಟ್ ಪುಸ್ತಕ ಸೇರಿದಂತೆ ಆಟದ ಸಾಮಗ್ರಿ, ಬ್ಯಾಂಡ್ ಸೆಚ್, ಯೋಗ ಮ್ಯಾಚ್ ಡೆಸ್ಕ್, ಟೇಬಲ್, ಕುರ್ಚಿ, ಗ್ರೀನ್ ಬೋರ್ಡ್ ಹಾಗೂ ಸಣ್ಣ ಮಕ್ಕಳ ಕಲಿಕೆಗೆ ಅಗತ್ಯವಾದ ಸಲಕರಣೆಗಳನ್ನು ನೀಡಿ ನಗರದ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನೀಡುವ ಮಟ್ಟದಲ್ಲಿ ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಮೂರು ಕಂಪ್ಯೂಟರ್, ಒಂದು ಲ್ಯಾಪ್‌ಟಾಪ್, ಪ್ರಿಂಟರ್, ಟಿವಿ, ಮೈಕ್‌ಸೆಚ್, ಯುಪಿಎಸ್ ಅಳವಡಿಸಿ ಮಕ್ಕಳ ಕಲಿಕೆ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯವಾಗಿದೆ.
ಕನ್ನಡ ಶಾಲೆಗಳನ್ನು ಉಳಿಸಿ-ಬೆಳಸಬೇಕಾದಂತಹ ಸರ್ಕಾರ ಕೆಲಸವನ್ನು ಒಂದು ಖಾಸಗಿ ಸಂಸ್ಥೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದ್ದು, ರಾಜ್ಯದಲ್ಲಿರುವ ಹಲವು ಕಂಪನಿಗಳು ಈ ರೀತಿಯ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದು ಕೊಂಡು ಅಭಿವೃದ್ಧಿ ಪಡಿಸಿದರೆ ನಮ್ಮ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಹಾಗೂ ಉನ್ನತ ವ್ಯಾಸಂಗ ಪಡೆಯಲು ಅನುಕೂಲವಾಗುತ್ತದೆ.
1966ರಲ್ಲಿ ಆರಂಭವಾದ ಈ ಶಾಲೆಯನ್ನು ಬೆಂಗಳೂರಿನ ಟೆಕ್ಸ್ ಸಿಸ್ಟಮ್ಸ್ ಹಾಗೂ ಗ್ಲೋಬಲ್ ಸರ್ವಿಸಸ್ ಸಂಸ್ಥೆ 12.25 ಲಕ್ಷ ಹಾಗೂ ಸ್ಥಳೀಯ ಗ್ರಾಪಂ ಸಹಕಾರದಿಂದ 15 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವುದು ಅಭಿನಂದನಾರ್ಹ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಶಾಲಾ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡವನ್ನ ನಿರ್ಮಿಸಿಕೊಟ್ಟಿರುವುದು ಸರ್ಕಾರಿ ಶಾಲೆಗಳು ಉಳಿದು-ಬೆಳೆಯಲು ಸಹಕಾರಿಯಾಗಲಿದೆ.
-ಶ್ರೀನಿವಾಸ್, ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಬೆಂಗಳೂರಿನ ಟೆಕ್ಸ್ ಸಿಸ್ಟಮ್ಸ್ ಹಾಗೂ ಗ್ಲೋಬಲ್ ಸರ್ವಿಸಸ್ ಸಂಸ್ಥೆ ಕನ್ನಡ ಶಾಲೆಗಳನ್ನು ಉಳಿಸಿ-ಬೆಳಸುವ ಉದ್ದೇಶದಿಂದ ರಾಜ್ಯಾದ್ಯಂತ 36 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದ್ದೇವೆ. ನಮ್ಮ ತಾಲೂಕಿನಲ್ಲಿ ಅಂಚಗುಳಿ, ಕಲ್ಲಹಳ್ಳಿ, ಗೌಡಹಳ್ಳಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದು ಮುಂದೆಯೂ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುವುದು.
-ನಂದಿ, ಅಧ್ಯಕ್ಷರು, ಹೂವಿನ ಹೊಳೆ ಪ್ರತಿಷ್ಠಾನ