ಕೊಡವ ಸ್ವಾಯತ್ತ ಲ್ಯಾಂಡ್ ಬೇಡಿಕೆಗೆ ಅಭಿವೃದ್ಧಿ ನಿಗಮ ಕೊಡುಗೆ
ಕೊಡವ ಅಭಿವೃದ್ಧಿ ನಿಗಮವನ್ನು ವಿರೋಧಿಸುತ್ತಿರುವವರದ್ದು ಕೂಡ ಚುನಾವಣೆ ಗಿಮಿಕ್ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಿನಲ್ಲಿ ಅಭಿವೃದ್ಧಿ ನಿಗಮ ಘೋಷಣೆಗೆ ಪರ ವಿರೋಧದ ಚರ್ಚೆಗಳು ಕೊಡಗಿನಲ್ಲಿ ತೀವ್ರವಾಗಿರುವುದಂತು ಸತ್ಯ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಮಾ.25): ದೇಶದಲ್ಲಿಯೇ ವಿಶೇಷ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿರುವ ಕೊಡವರ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸಿಎಂ ಬೊಮ್ಮಾಯಿ ಅವರು ಸ್ಪಂದಿಸಿ ನಿಗಮ ಘೋಷಣೆ ಮಾಡಿದ್ದಾರೆ. ಆದರೆ ಇದೆಲ್ಲವೂ ಚುನಾವಣೆಗಾಗಿ ಮಾಡಿರುವ ಗಿಮಿಕ್ ಎಂಬ ಗಂಭೀರ ಚರ್ಚೆ, ಆರೋಪ ಕೊಡಗು ಜಿಲ್ಲೆಯಲ್ಲಿ ತೀವ್ರವಾಗಿದೆ.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಆದರೆ ಸಾಕು ಎನ್ನುತ್ತಿದ್ದ ಕೊಡವರಲ್ಲಿ ಕೆಲವು ಸಂಘಟನೆಗಳು ಈಗ ಕೊಡವ ಅಭಿವೃದ್ಧಿ ನಿಗಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ. ಹೌದು ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಸಾಕಷ್ಟು ಹೋರಾಟಗಳನ್ನು ರೂಪಿಸಲಾಗಿತ್ತು. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಲವು ಬಾರಿ ಸಿಎಂ ಭೇಟಿಯಾಗಿದ್ದ ಕೊಡವ ಸಂಘಟನೆಗಳ ನಿಯೋಗಗಳು ಮನವಿ ಮಾಡಿ ಒತ್ತಾಯಿಸಿದ್ದವು. ಬಳಿಕ ಎರಡು ಬಜೆಟ್ನಲ್ಲಿಯೂ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಘೋಷಿಸಬಹುದು ಎಂಬ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಆದರೂ ಅದರ ಬಗ್ಗೆ ಚಕಾರ ಎತ್ತದ ಸಿಎಂ, ಚುನಾವಣಾ ಹೊಸ್ತಿಲಿನಲ್ಲಿ ಕೊಡವ ಕೌಟಂಬಿಕ ಹಾಕಿ ಉದ್ಘಾಟನೆಗೆ ಇದೇ ಮಾರ್ಚ್ 18 ರಂದು ಬಂದು ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿರುವುದು ಏಕೆ ಎಂಬ ಪ್ರಶ್ನೆ ಎತ್ತಿವೆ. ಇದೆಲ್ಲಾ ಚುನಾವಣಾ ಗಿಮಿಕ್, ಯಾವುದೇ ನೀತಿ ನಿಯಮವನ್ನು ರೂಪಿಸದೆ ಕೇವಲ ನಿಗಮ ಘೋಷಣೆ ಮಾಡಿದ್ದು ಏಕೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಪ್ರಶ್ನಿಸಿದೆ.
ಕೊಡಗು: ಬಾಂಗ್ಲಾ ಕಾರ್ಮಿಕರಿಂದ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ: ರಘು ಹೆಬ್ಬಾಲೆ
ನಮಗೆ ನಿಜಕ್ಕೂ ಬೇಕಾಗಿರುವುದು ಅಭಿವೃದ್ಧಿ ನಿಗಮವಲ್ಲ, ಬದಲಾಗಿ ಕೊಡವ ಸ್ವಾಯತ್ತ ಭೂಮಿ ಘೋಷಣೆ ಆಗಬೇಕು. ನಮ್ಮ ಕೋವಿಯ ಹಕ್ಕು ಅಬಾಧಿತವಾಗಿ ಮುಂದುವರೆಯಬೇಕು. ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು. ನಮನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿತ್ತು. ಇವುಗಳೆಲ್ಲಾ ಈಡೇರಬೇಕೆಂದರೆ ಮಿಜೋರಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಇರುವಂತೆ ಆಂತರಿಕ ಕಾನೂನಿಗೆ ಅವಕಾಶ ಬೇಕು ಎನ್ನುವುದು ನಮ್ಮ ಬೇಡಿಕೆ ಇತ್ತು. ಇದ್ಯಾವುದಕ್ಕೂ ಅವಕಾಶ ನೀಡದೆ, ಕೊಡವರನ್ನು ಅಲ್ಪತೃಪ್ತಿಗೊಳಿಸಬೇಕು ಎನ್ನುವ ಉದ್ದೇಶದಿಂದಲೇ ಕೊಡವ ಅಭಿವೃದ್ಧಿ ನಿಗಮವನ್ನು ಚುನಾವಣೆ ಹೊಸ್ತಿಲಲ್ಲಿ ಘೋಷಿಸಿ ಚುನಾವಣೆಗಾಗಿ ಗಿಮಿಕ್ ಘೋಷಣೆ ಮಾಡಲಾಗಿದೆ ಎಂದು ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡವ ಕುಲಶಾಸ್ತ್ರೀಯ ಅಧ್ಯಯನಕ್ಕೆ ಚಾಲನೆ ನೀಡಿದ್ದರೂ, ನಮ್ಮ ಜನಪ್ರತಿನಿಧಿಗಳೇ ಆ ಅಧ್ಯಯನಕ್ಕೆ ತಡೆಯೊಡ್ಡಿದರು.
ನಂತರ ಹೈಕೋರ್ಟ್ ಮೊರೆ ಹೋಗಿ ಮತ್ತೆ ಅಧ್ಯಯನಕ್ಕೆ ಅವಕಾಶ ನೀಡುವಂತೆ ಮಾಡಲಾಯಿತು. ಇದೆಲ್ಲಾ ಯಾರ ಕೈವಾಡ ಇದೆ ಎನ್ನುವುದು ಕೊಡವರಿಗೆ ಗೊತ್ತಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ನಮಗೆ ಯಾವುದೇ ತೊಂದರೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಇದೆಲ್ಲವನ್ನು ಮುಚ್ಚಿ ಹಾಕಲು ಈಗ ನಾಮಕಾವಸ್ಥೆಗೆ ಕೊಡವ ಅಭಿವೃದ್ಧಿ ನಿಗಮ ಘೋಷಿಸಲಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನಿಗಮಕ್ಕೆ ಒಂದು ವರ್ಷದಿಂದಲೂ ಬೇಡಿಕೆ ಇತ್ತು. ಬೆಳಗಾವಿಗೂ ಒಂದು ನಿಯೋಗ ಬಂದಿತ್ತು. ಆಗಲೂ ಸಿಎಂ ಆಗುವುದಿಲ್ಲ ಎಂದಿರಲಿಲ್ಲ, ಈಗ ಘೋಷಣೆ ಮಾಡಿದ್ದಾರೆ. ನಿಗಮ ಸ್ಥಾಪನೆ ಆಗದೆ ಯಾವುದೇ ನೀತಿ ನಿಯಮಗಳನ್ನು ರೂಪಿಸುವುದಕ್ಕೆ ಆಗುವುದಿಲ್ಲ. ಈಗ ನಿಗಮ ಸ್ಥಾಪನೆ ಆಗಿದ್ದು, ಮುಂದೆ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದಿದ್ದಾರೆ.
ಆದರೆ ಕೊಡವ ಅಭಿವೃದ್ಧಿ ನಿಗಮವನ್ನು ವಿರೋಧಿಸುತ್ತಿರುವವರದ್ದು ಕೂಡ ಚುನಾವಣೆ ಗಿಮಿಕ್ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಿನಲ್ಲಿ ಅಭಿವೃದ್ಧಿ ನಿಗಮ ಘೋಷಣೆಗೆ ಪರ ವಿರೋಧದ ಚರ್ಚೆಗಳು ಕೊಡಗಿನಲ್ಲಿ ತೀವ್ರವಾಗಿರುವುದಂತು ಸತ್ಯ.