ಸಂದೀಪ್ ವಾಗ್ಲೆ

ಮಂಗಳೂರು (ಆ.20): 
ಗೋವಾ ಅಂಚಿನಿಂದ ಕೇರಳ ಗಡಿ ಮಾನಂದವಾಡಿವರೆಗೆ ಸುಮಾರು 600 ಕಿ.ಮೀ.ಗೂ ಹೆಚ್ಚು ವಿಸ್ತಾರವಾಗಿ ಹರಡಿಕೊಂಡಿರುವ, ನೂರಾರು ನದಿಗಳು- ಉಪನದಿಗಳ ಮೂಲ, ಲಕ್ಷಾಂತರ ಜೀವಪ್ರಭೇದಗಳ ಆವಾಸ ಸ್ಥಾನವಾಗಿರುವ ರಾಜ್ಯದ ರಕ್ಷಣಾ ತಡೆಗೋಡೆ ಪಶ್ಚಿಮ ಘಟ್ಟಶ್ರೇಣಿಯಲ್ಲಿ ಭೂಕುಸಿತದ ಅವಾಂತರ 2ನೇ ವರ್ಷಕ್ಕೆ ಕಾಲಿರಿಸಿದ್ದು, ಈ ಅತಿಸೂಕ್ಷ್ಮ ಪ್ರದೇಶದ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯ ಕಾಲಘಟ್ಟಒದಗಿಬಂದಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಇಡೀ ರಾಜ್ಯವೇ ಬರದ ನಾಡಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾದ ಅಪಾಯದ ಬಗ್ಗೆ ಪರಿಸರವಾದಿಗಳು, ತಜ್ಞರು ಎಚ್ಚರಿಸಿದ್ದಾರೆ.

ಕಳೆದ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ಪಶ್ಚಿಮ ಘಟ್ಟಕ್ಕೆ ದೊಡ್ಡ ಕಂಟಕ ಬಂದೊದಗಿತ್ತು. ಬ್ರಹ್ಮಗಿರಿ ಬೆಟ್ಟಗಳಿಂದ ಶಿರಾಡಿವರೆಗೂ 600ಕ್ಕೂ ಅಧಿಕ ಕಡೆಗಳಲ್ಲಿ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ಬೃಹತ್‌ ಗುಡ್ಡಗಳೇ ಸ್ಫೋಟಗೊಂಡು ನೂರಾರು ಎಕರೆ ಜಾಗ ಸಂಪೂರ್ಣ ಕುಸಿದು ಎಚ್ಚರಿಕೆಯ ಕರೆಗಂಟೆ ಬಾರಿಸಿತ್ತು. ಒಂದೂವರೆ ತಿಂಗಳ ಕಾಲ ಸಂಚಾರ ವ್ಯವಸ್ಥೆಯೇ ಹದಗೆಟ್ಟು ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದರು. ಅದಾಗಿ ವರ್ಷದೊಳಗೆ ಇದೀಗ ಭೂಕುಸಿತದ ವ್ಯಾಪ್ತಿ ಕೇರಳದ ವಯನಾಡಿನಿಂದ ಚಾರ್ಮಾಡಿ ಬೆಟ್ಟಶ್ರೇಣಿವರೆಗೂ ವ್ಯಾಪಿಸಿದೆ. ಅತ್ತಕಡೆ ಮಲೆನಾಡು, ಉತ್ತರ ಕನ್ನಡ ವ್ಯಾಪ್ತಿಯಲ್ಲೂ ಭೂಕುಸಿತ ಆರಂಭವಾಗಿದೆ. ಜತೆಗೆ ಕಳೆದ ವರ್ಷ ಕುಸಿತದ ಜಾಗದಲ್ಲೇ ಮತ್ತೆ ಮತ್ತೆ ಕುಸಿತ ಸಂಭವಿಸುತ್ತಿದೆ.

ಭೂಕುಸಿತದ ವ್ಯಾಪ್ತಿ ಮುಂದುವರಿದು ಇಡೀ ಪಶ್ಚಿಮ ಘಟ್ಟವನ್ನು ಆವರಿಸುವ ಮೊದಲು ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪಶ್ಚಿಮ ಘಟ್ಟದಲ್ಲಿ ಮಾನವ ಹಸ್ತಕ್ಷೇಪವನ್ನು ತಡೆಗಟ್ಟಿ, ಅಲ್ಲಿರುವ ಅಪಾಯಕಾರಿ ಯೋಜನೆಗಳನ್ನು ತಡೆಗಟ್ಟದಿದ್ದರೆ ರಾಜ್ಯದ ನದಿಮೂಲಗಳೇ ಬತ್ತಿಹೋಗಿ ಇಡೀ ರಾಜ್ಯ ಸದಾ ಬರಪೀಡಿತವಾಗುವ ಅಪಾಯವಿದೆ.

ಗಡಿನಾಡ ಕನ್ನಡಿಗನಿಗೆ ಸಂದ ರಾಷ್ಟ್ರಪತಿ ಗೌರವ

ಬೆಳ್ತಂಗಡಿ ‘ಪ್ರಳಯ’ಕ್ಕೂ ಭೂಕುಸಿತ ಕಾರಣ: ಕಳೆದ ವರ್ಷ ಕೊಡಗು, ಜೋಡುಪಾಲದಲ್ಲಿ ವ್ಯಾಪಕ ಭೂಕುಸಿತವಾಗಿದ್ದಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ಪರಿಸರ ತಜ್ಞರು ಪುರಾವೆ ಸಹಿತ ಪರಿಸ್ಥಿತಿಯ ಕುರಿತು ಎಚ್ಚರಿಕೆ ನೀಡಿದ್ದರು. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಣಾಮವಾಗಿ ಇದೀಗ ಬೆಳ್ತಂಗಡಿ ತಾಲೂಕೇ ಆಹುತಿಯಾಗಿದೆ. ಚಾರ್ಮಾಡಿಯ ದೊಡ್ಡೇರಿಬೆಟ್ಟ, ಹೊಸಮನೆಗುಡ್ಡ, ಬಾಳೆಗುಡ್ಡ, ಮಲೆಮನೆ ಬೆಟ್ಟ, ರಾಮನ ಗುಡ್ಡ ಶ್ರೇಣಿಗಳಲ್ಲಿ ಜಲಸ್ಫೋಟವಾಗಿ ತಪ್ಪಲಿನ ಬೆಳ್ತಂಗಡಿ ತಾಲೂಕಿನ ನೂರಾರು ಎಕರೆ ಜಾಗ ಜಲಾವೃತವಾಗಿ ಹಿಂದೆಂದೂ ಕಂಡು ಕೇಳರಿಯದ ಮಹಾಪ್ರವಾಹ ಸಂಭವಿಸಿದೆ. ನೂರಾರು ಎಕರೆ ಇನ್ನೂ ಮನೆಗೆ ಹೋಗಲಾರದೆ ಗಂಜಿ ಕೇಂದ್ರಗಳಲ್ಲಿ ವಾಸಿಸುವಂತಾಗಿದೆ. ಪಶ್ಚಿಮ ಘಟ್ಟದ ರಕ್ಷಣೆಗೆ ಮುಂದಾಗದಿದ್ದರೆ ಮುಂದಿನ ವರ್ಷಗಳಲ್ಲಿ ರಾಜ್ಯಕ್ಕೇ ವಿಪತ್ತು ತರುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಅಕ್ರಮಗಳೇ ಕಾರಣ!:

‘ಪಶ್ಚಿಮ ಘಟ್ಟದುದ್ದಕ್ಕೂ 1500ಕ್ಕೂ ಅಧಿಕ ಅಕ್ರಮ ರೆಸಾರ್ಟ್‌ಗಳು ತಲೆಎತ್ತಿ ಘಟ್ಟದ ಬಲುಸೂಕ್ಷ್ಮ ಪ್ರದೇಶಗಳನ್ನು ಹಾನಿಗೆಡವುತ್ತಿವೆ. ಇಲ್ಲಿನ ರೆಸಾರ್ಟ್‌, ಹೋಮ್‌ಸ್ಟೇ ಮಾಫಿಯಾ ಆಡಳಿತವನ್ನೇ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವಷ್ಟು ಬಲಿಷ್ಠವಾಗಿ ಬೆಳೆದಿವೆ. ಘಟ್ಟಪ್ರದೇಶದಲ್ಲಿ ಪ್ರತಿವರ್ಷ ಗುಡ್ಡಗಳಿಗೆ ಬೆಂಕಿ ಹಚ್ಚಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿರುವ ಆರೋಪ ಈ ಮಾಫಿಯಾಗಳ ಮೇಲಿದೆ. ಇನ್ನು ಗಾಂಜಾ ಮಾಫಿಯಾ, ಟಿಂಬರ್‌ ಮಾಫಿಯಾ, ಖಾಸಗಿ ಎಸ್ಟೇಟ್‌ ಮಾಫಿಯಾಗಳು ಸಾವಿರಾರು ಎಕರೆ (ಒಬ್ಬೊಬ್ಬರ ಅಡಿಯಲ್ಲೂ ನೂರಾರು ಎಕರೆಯಿದೆ) ಜಾಗವನ್ನು ಕಬಳಿಸಿವೆ. ಎತ್ತಿನಹೊಳೆ, ಜಲವಿದ್ಯುತ್‌ನಂತರ ಯೋಜನೆಗಳು ಅಗಾಧ ಪ್ರಮಾಣದಲ್ಲಿ ಪಶ್ಚಿಮಘಟ್ಟವನ್ನು ಆಹುತಿ ತೆಗೆದುಕೊಳ್ಳುತ್ತಿವೆ’’ ಎಂದು ಪಶ್ಚಿಮ ಘಟ್ಟಕ್ಕೆ ದಶಕಗಳಿಂದ ಚಾರಣಕ್ಕೆ ತೆರಳುತ್ತ ಅಲ್ಲಿನ ಇಂಚಿಂಚೂ ಅರಿತಿರುವ ಪರಿಸರವಾದಿ ದಿನೇಶ್‌ ಹೊಳ್ಳ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

‘ಪಶ್ಚಿಮ ಘಟ್ಟದ ಅತಿಸೂಕ್ಷ್ಮ ಶೋಲಾರಣ್ಯದ ಒಳಪಪದರಗಳು ವರ್ಷವಿಡೀ ನದಿಗಳಿಗೆ ಹರಿಸುವಷ್ಟುನೀರನ್ನು ಸಂಗ್ರಹಿಸಿಟ್ಟಿರುತ್ತವೆ. ಘಟ್ಟದಲ್ಲಿ ತಲೆಎತ್ತಿರುವ ಮಾಫಿಯಾಗಳು ಶೋಲಾರಣ್ಯದ ಮೇಲ್ಪದರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡುತ್ತಲೇ ಇವೆ. ಇದರಿಂದ ಮಣ್ಣಿನ ಒಳಪದರದ ನೀರಿನ ಧಾರಣಾ ಸಾಮರ್ಥ್ಯ ದಿಢೀರ್‌ ತಗ್ಗಿ ಜಲಸ್ಫೋಟ ಸಂಭವಿಸುತ್ತದೆ. ಕಳೆದ ಬಾರಿ ಮತ್ತು ಈ ವರ್ಷ ಪಶ್ಚಿಮ ಘಟ್ಟದಲ್ಲಿ ಭೂಕುಸಿತವಾಗಿದ್ದಕ್ಕೆ ಮಾನವ ಹಸ್ತಕ್ಷೇಪವೇ ಕಾರಣ. ಇದನ್ನು ತಡೆಗಟ್ಟಿಘಟ್ಟವನ್ನು ಅದರಷ್ಟಕ್ಕೆ ಬಿಡಬೇಕು. ಅದಕ್ಕಾಗಿ ಕಠಿಣ ಯೋಜನೆ ಜಾರಿಗೊಳಿಸಬೇಕು’ ಎನ್ನುತ್ತಾರವರು.

ರಾಜ್ಯದ ಜಲಮೂಲಕ್ಕೇ ಪೆಟ್ಟು!

ರಾಜ್ಯದಲ್ಲಿ ಹುಟ್ಟುವ ಎಲ್ಲ ನದಿಗಳ ಮೂಲವೇ ಪಶ್ಚಿಮಘಟ್ಟ. ಕಾವೇರಿ, ಹೇಮಾವತಿ, ಅಘನಾಶಿನಿ, ಕಾಳಿ, ನೇತ್ರಾವತಿ, ಕುಮಾರಧಾರಾ, ತುಂಗಭದ್ರಾ, ಚಕ್ರಾ, ಶರಾವತಿಯಂತಹ ದೊಡ್ಡ ನದಿಗಳು ಸೇರಿ 300-400ರಷ್ಟುಉಪನದಿ- ಹೊಳೆಗಳು ಈ ಘಟ್ಟಶ್ರೇಣಿಯ ಕೂಸುಗಳೇ. ಈ ನದಿಗಳಿಂದಾಗಿಯೇ ರಾಜ್ಯ ಇಷ್ಟೊಂದು ಸಮೃದ್ಧವಾಗಿದೆ. ಪಶ್ಚಿಮ ಘಟ್ಟದಲ್ಲಿ ದುರಂತಗಳ ಓಘ ಹೆಚ್ಚಿದರೆ ಜಲಮೂಲಗಳಿಗೆ ಕೊಡಲಿಯೇಟು ಬಿದ್ದು ರಾಜ್ಯವೇ ಬರಡಾಗಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ವರ್ಷ ಭೂಕುಸಿತ ಸಂಭವಿಸಿದ ಒಂದೂವರೆ ತಿಂಗಳೊಳಗೇ ಪಶ್ಚಿಮಾಭಿಮುಖವಾಗಿ ಹರಿಯುವ ಬಹುತೇಕ ನದಿಗಳು ಬತ್ತಿಹೋಗಿದ್ದವು!

ಪಶ್ಚಿಮ ಘಟ್ಟದಲ್ಲಿ ಭೂಕುಸಿತದ ವ್ಯಾಪ್ತಿ ದಿಢೀರನೆ ಏರಿಕೆಯಾಗಿರುವುದು ರಾಜ್ಯದ ಮಟ್ಟಿಗೆ ಭಾರಿ ಅಪಾಯಕಾರಿ ಬೆಳವಣಿಗೆ. ಇದು ನಿಲ್ಲಬೇಕಾದರೆ ಘಟ್ಟದಲ್ಲಿ ತಲೆಎತ್ತಿರುವ ಅಕ್ರಮ ಮಾಫಿಯಾಗಳು, ಎತ್ತಿನಹೊಳೆಯಂಥ ಅವೈಜ್ಞಾನಿಕ ಯೋಜನೆಗಳಿಗೆ ಅವಕಾಶವೇ ನೀಡಬಾರದು. ಪಶ್ಚಿಮ ಘಟ್ಟಹಾಳಾಗಲು ರಾಜಕಾರಣಿಗಳ ದ್ವಂದ್ವ ನಿಲುವೇ ಕಾರಣ. ಇಂತಹ ಹಾನಿ ಸಂಭವಿಸಿದಾಗ ಪರಿಸರ ರಕ್ಷಣೆಯ ಬಗ್ಗೆ ಮಾತನಾಡುವ ಇದೇ ರಾಜಕಾರಣಿಗಳು ಇನ್ನೊಂದೆಡೆ ಗುಟ್ಟಾಗಿ ಪಶ್ಚಿಮ ಘಟ್ಟವನ್ನು ಕಬಳಿಸುವ ಮಾಫಿಯಾಗಳಿಗೆ ಸಹಾಯಕ್ಕೆ ನಿಲ್ಲುತ್ತಾರೆ. ಇದೇ ಎಲ್ಲ ದುರಂತಗಳಿಗೆ ನೇರ ಕಾರಣ.

- ದಿನೇಶ್‌ ಹೊಳ್ಳ, ಪರಿಸರವಾದಿ

 

ರಾಜ್ಯದ ಎಲ್ಲ ಉದ್ಯೋಗಕ್ಕೂ ಪರಭಾಷಿಗರ ಲಗ್ಗೆ