ಕಾಲುವೆ ರಹಸ್ಯ: ಕೊನೆಗೂ ಬಯಲಾಯ್ತು ಮೂಡಿಗೆರೆ ಭೂಕುಸಿತದ ಹಿಂದಿನ ಕಾರಣ!
ನೈಸರ್ಗಿಕ ಕಾಲುವೆ ಮುಚ್ಚಿದ್ದೇ ಮೂಡಿಗೆರೆ ಭೂಕುಸಿತಕ್ಕೆ ಕಾರಣ| ಭೂವಿಜ್ಞಾನಿಗಳಿಂದ ಜಿಲ್ಲಾಡಳಿತಕ್ಕೆ 200 ಪುಟ ವರದಿ| ಬೆಟ್ಟದ ತಪ್ಪಲು ಪ್ರದೇಶ ಸಮತಟ್ಟು ಮಾಡಿದ್ದರಿಂದಲೂ ಕುಸಿತ
ಚಿಕ್ಕಮಗಳೂರು[ನ.28]: ಕಳೆದ ಆಗಸ್ಟ್‌ನಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಉಂಟಾದ ಜಲಪ್ರಳಯಕ್ಕೆ ಪ್ರಕೃತಿ ನಾಶವೇ ಪ್ರಮುಖ ಕಾರಣ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. 14 ಗ್ರಾಮಗಳಲ್ಲಿ ಒಂದು ವಾರ ಸರ್ವೆ ನಡೆಸಿರುವ ತಜ್ಞರು, 200 ಪುಟಗಳ ಗ್ರಾಮವಾರು ವರದಿಯನ್ನು ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಸಲ್ಲಿಸಿದ್ದಾರೆ.
ಬೆಟ್ಟದ ಮಣ್ಣಿನ ಮೇಲ್ಪದರ ಗಟ್ಟಿಯಾಗಿ ಇರುವುದಿಲ್ಲ. ಅದು ಒಂದು ಕಡೆಯಲ್ಲಿ ಕುಸಿದರೆ, ಅದರ ಆಸುಪಾಸಿನಲ್ಲಿರುವ ಮಣ್ಣು ಕೂಡ ಜರಿಯುತ್ತದೆ. ಆದರೆ, ಭೂ ಕುಸಿತ ಉಂಟಾಗಿರುವ ಹಲವೆಡೆ ಕಂಡುಬಂದಿರುವ ಅಂಶಗಳಲ್ಲಿ ಪ್ರಮುಖವಾಗಿ ಬೆಟ್ಟದ ತಪ್ಪಲು ಪ್ರದೇಶ ಸಮತಟ್ಟು ಮಾಡಿ ಮನೆ, ತೋಟಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಲ್ಲಿ ಟ್ರಂಚ್ ಹೊಡೆಯಲಾಗಿದೆ. ಇದರಿಂದ ಮಣ್ಣು ಜರಿದಿದೆ ಎಂದು ವರದಿಯಲ್ಲಿ ತಜ್ಞರು ತಿಳಿಸಿದ್ದಾರೆ.
ಗಿರಿ ಹಾಗೂ ಅರಣ್ಯದೊಳಗೆ ನೈಸರ್ಗಿಕವಾಗಿ ಕಾಲುವೆಗಳು ಹರಿದು ಹೋಗಿರುತ್ತವೆ. ನೆರೆಪೀಡಿತ ಮೂಡಿಗೆರೆ ತಾಲೂಕಿನ ಕೆಲವೆಡೆ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿರುವುದು ಕಂಡುಬಂದಿದೆ. ಮತ್ತೆ ಕೆಲವು ಗ್ರಾಮಗಳಲ್ಲಿ ತಮಗೆ ಬೇಕಾದ ಅನುಕೂಲಕ್ಕೆ ತಕ್ಕಂತೆ ಕಾಲುವೆಗಳ ಪಥ ಬದಲಾವಣೆ ಮಾಡಿದ್ದಾರೆ. ಒಂದೆಡೆ ಕಾಲುವೆ ಮುಚ್ಚಿ, ಇನ್ನೊಂದೆಡೆ ಪಥ ಬದಲಾವಣೆ ಮಾಡಿದ್ದರಿಂದ ಮಳೆಯ ನೀರು ಸರಾಗವಾಗಿ ಮುಂದೆ ಹರಿದು ಹೋಗಲು ಅಡ್ಡಿ ಆಗಿದೆ. ಇದರಿಂದ ಭಾರೀ ಮಳೆಗೆ ತಗ್ಗಿನ ಪ್ರದೇಶಕ್ಕೆ ನೀರು ವಿಸ್ತಾರವಾಗಿ ಹರಿದು ಹೋಗಿದೆ. ಆ ವೇಳೆಯಲ್ಲಿ ಭೂ ಕುಸಿತ, ಭಾರೀ ಮಳೆಯ ನೀರು ಜನವಸತಿ ಪ್ರದೇಶದೊಳಗೆ ಬಂದಿದ್ದರಿಂದ ಅನಾಹುತವಾಗಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
12 ಮಂದಿ ಸಾವು:
ಆಗಸ್ಟ್ 2ರಿಂದ 12ರವರೆಗೆ ಜಿಲ್ಲೆಯ ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟಗಳ ತಪ್ಪಲು ಪ್ರದೇಶ ಕುಸಿದು ಹಲವು ಮನೆ, ತೋಟಗಳು ಕೊಚ್ಚಿಕೊಂಡು ಹೋಗಿ 12 ಮಂದಿ ಮೃತಪಟ್ಟಿದ್ದರು. ನದಿಗಳು ಅಪಾಯದ ಮಟ್ಟಮೀರಿ ಹರಿದು, 18 ಗ್ರಾಮಗಳು ಸಂಪರ್ಕ ಕಡಿದುಕೊಂಡು ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದರು. ಅನಾಹುತಕ್ಕೆ ವೈಜ್ಞಾನಿಕ ಕಾರಣವನ್ನು ಕಂಡುಹಿಡಿಯಲು ಆ.21ರಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳ ತಂಡ ಆಗಮಿಸಿತ್ತು.
ಕಪಿಲ್ ಸಿಂಗ್, ಕಮಲ್‌ಕುಮಾರ್, ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಮಹೇಶ್, ಭೂ ವಿಜ್ಞಾನಿ ದಯಾನಂದ್ ಹಾಗೂ ಎಂಜಿನಿಯರ್ ರಾಘವನ್ ನೇತೃತ್ವದ ತಂಡ ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ, ಮಲೆಮನೆ, ಕೆಳಗೂರು, ಬಲಿಗೆ, ದುರ್ಗದಹಳ್ಳಿ, ಮದುಗುಂಡಿ, ಬಲ್ಲಾಳರಾಯನ ದುರ್ಗಾ, ಮಲ್ಲೇಶನಗುಡ್ಡ, ಅಲೇಖಾನ್ ಹೊರಟ್ಟಿ, ದೇವಂಗುಲ ಗುಡ್ಡ, ಕಾರಗದ್ದೆ, ಕೋಟೆಮಕ್ಕಿ, ಕಸ್ಕೆಬೈಲು ಹಾಗೂ ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಗ್ರಾಮಗಳಿಗೆ ಭೇಟಿ ನೀಡಿ ಬೇರೆ ಬೇರೆ ಆಯಾಯಗಳಲ್ಲಿ ಪರಿಶೀಲಿಸಿ, ಅದರಂತೆ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.