ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ
- ಹಂದಿಗಳ ಹಾವಳಿಯಿಂದ ಮೆಕ್ಕೆಜೋಳ ಬೆಳೆ ನಾಶ
- ಆಕ್ರೋಶಗೊಂಡ ರೈತರಿಂದ ಹಿಡಿಶಾಪ
- ಬಹದ್ದೂರು ಬಂಡಿ ಗ್ರಾಮದ ರೈತರ ಗೋಳು
- ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ
ಸೋಮರಡ್ಡಿ ಅಳವಂಡಿ
ಕೊಪ್ಪಳ (ಅ.2) : ಹಂದಿಗಳ ಹಾವಳಿಗೆ ನಗರದಲ್ಲಿರುವ ಜನರಷ್ಟೇ ಅಲ್ಲ, ಈಗ ಸುತ್ತಮುತ್ತಲ ಪ್ರದೇಶದ ರೈತರು ತತ್ತರಿಸಿ ಹೋಗಿದ್ದಾರೆ. ಹೊಲಗಲಿಗೆ ನುಗ್ಗುವ ಹಂದಿಗಳು ಬೆಳೆಯನ್ನೆಲ್ಲಾ ಹಾಳು ಮಾಡುತ್ತಿವೆ. ಅದರಲ್ಲೂ ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಸಮೀಪವೇ ಇರುವ ಬಹದ್ದೂರುಬಂಡಿ ವ್ಯಾಪ್ತಿಯಲ್ಲಿ ರೈತರ ಹೊಲಗಳಿಗೆ ಹಂದಿಗಳು ನುಗ್ಗುತ್ತಿವೆ. ನೂರಾರು ಸಂಖ್ಯೆಯ ಹಂದಿಗಳು ರಾತ್ರಿಯ ವೇಳೆಯಲ್ಲಿ ನುಗ್ಗಿ, ಬೆಳೆ ಹಾಳು ಮಾಡುತ್ತಿವೆ.
ಬಾಬುಸಾಬ ಮರ್ದಾನಸಾಬ ಎನ್ನುವವರು ಎರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವೆನ್ನೆಲ್ಲ ಹಂದಿಗಳು ಹಾಳು ಮಾಡಿವೆ. ಬಹುತೇಕ ತೆನೆಗಳನ್ನು ತಿಂದಿರುವುದರಿಂದ ಬೆಳೆ ಇದ್ದರೂ ಇಲ್ಲದಂತಾಗಿದೆ. ಹೀಗಾಗಿ, ನಮ್ಮ ಬೆಳೆಗೆ ಸೂಕ್ತ ರಕ್ಷಣೆ ನೀಡಿ, ಈ ಹಂದಿಗಳ ಹಾವಳಿಯಿಂದ ನಮ್ಮನ್ನು ಕಾಪಾಡಿ. ಇಲ್ಲದಿದ್ದರೇ ನಾವು ಪ್ರತಿ ವರ್ಷ ಬೆಳೆ ಬೆಳೆದರೂ ಹಾಳಾಗಿ ಹೋಗುತ್ತವೆ. ಎರಡು ಎಕರೆಯಲ್ಲಿ ಬೆಳೆದಿದ್ದ ಬೆಳಿ ತಿಂದಿರುವುದರಿಂದ ನಮ್ಮ ಪಾಡು ಯಾರಿಗೆ ಹೇಳೋಣ. ಈ ಹಂದಿಗಳನ್ನು ಸಂಬಂಧಪಟ್ಟವರಿಗೆ ಹಿಡಿದುಕೊಂಡು ಹೋಗುವಂತೆ ಹೇಳಿ, ಇಲ್ಲದಿದ್ದರೇ ನಮಗೆ ವಿಷವನ್ನಾದರು ಕೊಟ್ಟುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು, ಕೇವಲ ಒಬ್ಬ ಬಾಬುಸಾಬ ಅವರ ಪ್ರಶ್ನೆಯಲ್ಲ. ಬಹದ್ದೂರುಬಂಡಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಹಂದಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಇದರಿಂದ ನಮ್ಮನ್ನು ಕಾಪಾಡಿ ಎಂದು ಗೋಳಿಡುತ್ತಿದ್ದಾರೆ. ಕಟಾವಿಗೆ ಬಂದಿರುವ ಬೆಳೆಗಳ ತೆನೆಗಳನ್ನೇ ಹಂದಿಗಳು ತಿಂದು ಹೋಗುತ್ತವೆ. ಇದರಿಂದ ಹೊಲದಲ್ಲಿ ಬೆಳೆ ಕಂಡರೂ ಅದು ಗೊಡ್ಡಬೆಳೆಯಂತಾಗಿರುತ್ತದೆ, ಫಲ ಬರುವುದಿಲ್ಲ ಎನ್ನುತ್ತಾರೆ ರೈತರು.
ನಗರದಲ್ಲಿಯೂ ಮಿತಿಮೀರಿದ ಹಾವಳಿ:
ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿಯೂ ಹಂದಿಗಳ ಹಾವಳಿ ಮಿತಿಮೀರಿದೆ. ಮನೆಯಿಂದ ಆಚೆ ಮಕ್ಕಳನ್ನು ಬಿಡುವಂತಿಲ್ಲ. ಅನೇಕ ಬಾರಿ ಮಕ್ಕಳ ಮೇಲೆಯೂ ಹಂದಿಗಳು ದಾಳಿ ಮಾಡಿವೆ. ಹೀಗೆ, ದಾಳಿಯಾದಗಲೆಲ್ಲಾ ಭಾಗ್ಯನಗರ ಪಪಂ ಅಧಿಕಾರಿಗಳು ಹಾಗೂ ಕೊಪ್ಪಳ ನಗರಸಭೆ ಅಧಿಕಾರಿಗಳು ಹಂದಿಗಳನ್ನು ಹೊರಸಾಗಿಸಲು ಗಡುವು ನೀಡಿ ಕೈತೊಳೆದುಕೊಳ್ಳುತ್ತಾರೆ. ಇಂಥ ಅದೆಷ್ಟೋ ಗಡುವು ನೀಡಿದ್ದರೂ ಇದುವರೆಗೂ ಕೊಪ್ಪಳ ಮತ್ತು ಭಾಗ್ಯನಗರದಿಂದ ಹಂದಿಗಳನ್ನು ಹೊರಸಾಗಿಸಿಲ್ಲ. ಇದರಿಂದ ಅನೇಕ ರೋಗಗಳಿಗೂ ದಾರಿಯಾಗುತ್ತದೆ. ಆದರೂ ಹಂದಿಗಳನ್ನು ಹೊರಸಾಗಿಸಬೇಕು ಎನ್ನುವ ಸಾರ್ವಜನಿಕರ ಆಗ್ರಹಕ್ಕೆ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ.
ಜನಪ್ರತಿನಿಧಿಗಳ ಮಧ್ಯೆ ಪ್ರವೇಶ
ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಂದಿಗಳನ್ನು ಹೊರಸಾಗಿಸಲು ಕಟ್ಟುನಿಟ್ಟಿನ ಕ್ರಮವಹಿಸಿದರೆ ಜನಪ್ರತಿನಿಧಿಗಳು ಮಧ್ಯೆ ಪ್ರವೇಶ ಮಾಡುತ್ತಾರೆ. ಹಂದಿಗಳನ್ನು ಹೊರಸಾಗಿಸುವ ಅಧಿಕಾರಿಗಳಿಗೆ ಇನ್ನಿಲ್ಲದ ಸಬೂಬು ಹೇಳಿ, ಅರ್ಧಕ್ಕೆ ಕೈಬಿಡುವಂತೆ ಮಾಡುತ್ತಾರೆ. ಹೀಗಾಗಿ, ಹಂದಿಗಳನ್ನು ಹೊರಸಾಗಿಸುವ ಯತ್ನ ಇದುವರೆಗೂ ಕೈಗೂಡಿಲ್ಲ.
ಹಂದಿಗಳ ಹಾವಳಿಯಿಂದ ರೈತರ ಬೆಳೆಗಳು ಹಾಳಾಗಿ ಹೋಗುತ್ತಿವೆ. ಕಷ್ಟುಪಟ್ಟು ಬೆಳೆದಿದ್ದ ಮೆಕ್ಕೆಜೋಳದ ತೆನೆಯೆನ್ನೆಲ್ಲಾ ತಿಂದು ಹೋಗುತ್ತಿರುವುದರಿಂದ ರೈತರು ನಷ್ಟಅನುಭವಿಸುತ್ತಾರೆ.
ಚಾಂದಸಾಬ ಕಿಲ್ಲೇದಾರ ಬಹದ್ದೂರುಬಂಡಿ ತಾಪಂ ಮಾಜಿ ಸದಸ್ಯರು