ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.03): ಕಲಬುರಗಿ 85 ನೇ ಅಭಾ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು ಎಲ್ಲಾ ಪ್ರಕಾರದ ಸಾಹಿತ್ಯದ ರಸದೌತಣ ಸವಿಯುವುದರ ಜೊತೆ ಜೊತೆಗೇ ಕಲಬುರಗಿ ದಾಲ್- ರೋಟಿ, ಶೇಂಗಾ ಹಿಂಡಿ, ಖಡಕ್ ರೊಟ್ಟಿಯ 'ದೇಶಿ ಊಟ'ವನ್ನು ಸವಿಯುವ ಅವಕಾಶ ಸ್ವಾಗತ ಸಮೀತಿಯವರು ಕಲ್ಪಿಸಿದ್ದಾರೆ.

ಇನ್ನೇನು ಸಮ್ಮೇಳನಕ್ಕೆ 2 ದಿನ ಮಾತ್ರ ಬಾಕಿ, ಇತ್ತ ದಿನಗಣನೆ ಶುರುವಾಗುತ್ತಿದ್ದಂತೆಯೇ ಅತ್ತ ಅಡುಗೆ ಮನೆಯಲ್ಲಿ ತರಹೇವಾರಿ ಸಿಹಿ ತಿನಿಸು, ದೇಶಿ ಅಡುಗೆ ಸಿದ್ಧತೆಯೂ ಭರದಿಂದ ಸಾಗಿದೆ.
ಜೋಳ/ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಮೈಸೂರು ಪಾಕ್, ಚಟ್ನಿಪುಡಿ, ಮೋತಿ ಚೂರು, ಪುಂಡಿಪಲ್ಲೆ, ಕಾಳುಪಲ್ಲೆ, ಬದನೆಕಾಯಿ ಎಣ್ಣೆಗಾಯಿ, ಶೇಂಗಾಚಟ್ನಿ' ಸಮ್ಮೇಳನದ 3 ದಿನಗಳ ಅತಿಥಿ ಅಭ್ಯಾತಗರಿಗಾಗಿ ಸಿದ್ಧಗೊಳ್ಳಲಿರುವ ತರಹೇವಾರಿ ಖಾದ್ಯಗಳ ಪಟ್ಟಿ ಇದು.

ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಸಭಾಂಗಣಕ್ಕೆ ಪಾರಂಪರಿಕ ಸ್ಪರ್ಶ

ಶ್ರೀ ವಿಜಯ ಪ್ರಧಾನ ವೇದಿಕೆಯಿಂದ 2 ಫರ್ಲಾಂಗ್ ದೂರದಲ್ಲೇ ವಿಶಾಲವಾದಂತಹ ಅಡುಗೆ ಮನೆ ನಿರ್ಮಾಣವಾಗಿದ್ದು ಅಲ್ಲೀಗ 3 ದಿನಗಳಲ್ಲಿ ಬಂದು ಹೋಗುವ 5 ರಿಂದ 6 ಲಕ್ಷ ಜನರಿಗಾಗಿ ಬೇಕಾಗುವ ದಿನಸಿ ಪದಾರ್ಥಗಳನ್ನೆಲ್ಲ ದಾಸ್ತಾನು ಮಾಡಲಾಗಿದೆ. ಅಡುಗೆಗೆ ಬೇಕಾಗುವ ಕಟ್ಟಿಗೆ, ಭಾರಿ ಗಾತ್ರದ ಒಲೆಗಳು, ಕಡಾಯಿಗಳನ್ನೂ ದಾಸ್ತಾನು ಇಡಲಾಗಿದೆ.

ಹಿಂದೆ ನಡೆದಿರುವ ಧಾರವಾಡ, ರಾಯಚೂರು, ಮಡಿಕೇರಿ ಸೇರಿ 4 ಸಾಹಿತ್ಯ ಸಮ್ಮೇಳನಗಳಲ್ಲಿ ಅಡುಗೆ ಮಾಡಿರುವ ಅನುಭವಿ ಹುಬ್ಬಳ್ಳಿಯ ಭೈರು ಕೇಟರರ್ಸ್‍ನ  1 500 ಸಿಬ್ಬಂದಿ ಅದಾಗಲೇ 4 ದಿನದಿಂದ ಜ್ಞಾನಗಂಗೆ ಆವರಣದ ಅಡುಗೆ ಮನೆಯಲ್ಲಿ ಸಿಹಿ ತಿನಿಸು ಸಿದ್ಧಪಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸಮ್ಮೇಳನದಲ್ಲಿ ಉಣಬಡಿಸುವ ಹುಗ್ಗಿಯಲ್ಲಿ ಸಕ್ಕರೆ ಬದಲಿಗೆ ಬೆಲ್ಲ ಬಳಸಲಾಗುತ್ತಿದೆ. ಅಡುಗೆಗೆ ಬೇಕಾದ ಹಿಟ್ಟು, ಬೆಲ್ಲ, ಸಕ್ಕರೆ, ಎಣ್ಣೆಯ ಡಬ್ಬ ಈಗಾಗಲೇ ಅಡುಗೆ ಕೋಣೆಯಲ್ಲಿ ದಾಸ್ತಾನು ಮಾಡಲಾಗಿದೆ.

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ಪ್ರತಿದಿನ ಲಕ್ಷಾಂತರ ಜನರಿಗೆ ಉಣಬಡಿಸುವ ಜವಾಬ್ದಾರಿ ನೀಡಿದ್ದರಿಂದ ಅತ್ಯಂತ ಅಚ್ಚುಕಟ್ಟಾಗಿ ಯಾವುದೇ ತೊಂದರೆಯಿಲ್ಲದೆ ಹುಬ್ಬಳ್ಳಿಯಿಂದಲೇ ಪರಿಣಿತ ಬಾಣಸಿಗರ ತಂಡ ಶೇಂಗಾ ಹೋಳಿಗೆ, ಮೋತಿ ಚೂರ್ ಲಡ್ಡು , ಮೈಸೂರ್ ಪಾಕ್ ತಯಾರಿ ನಡೆಸಿದ್ದಾರೆ. ಪ್ರತಿದಿನ ಒಂದೊಂದು ಸಿಹಿ ಪದಾರ್ಥ, ಮೈಸೂರ್ ಪಾಕ್, ಹೋಳಿಗೆ ಮತ್ತು ಮೋತಿ ಚೂರ್ ಲಡ್ಡು ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲದಂತೆ ಕೆಲಸ ಸಾಗಿದೆ ಎಂದು 85 ನೇ ಸಾಹಿತ್ಯ ಸಮ್ಮೇಳನದ ಸಮನ್ವಯಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಬಿ. ಶರತ್ ಅವರು ಹೇಳಿದ್ದಾರೆ 

ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾವೇ ಊಟದ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿಭಾಯಿಸಿದ್ದೇವೆ. ಯಾವುದೇ ತೊಂದರೆಯಿಲ್ಲದೆ ಪ್ರತ್ಯೇಕವಾಗಿ ಉಣಬಡಿಸಲು ಒಂದು ತಂಡವಿದೆ. ಅಡಿಗೆ ಮಾಡುವವರೇ ಬೇರೆ ಊಟ ಬಡಿಸುವವರೇ ಬೇರೆ, ರುಚಿ, ಶುದ್ಧತೆಯಲ್ಲಿ ಯಾವುದಕ್ಕೂ ರಾಜೀ ಇಲ್ಲದಂತೆ ಎಲ್ಲವೂ ಸುಸೂತ್ರವಾಗಿ ನಡೆಸುತ್ತೇವೆ. ಖಡಕ್ಕಾಗಿರುವ ಜೋಳ/ ಸಜ್ಜೆ ರೊಟ್ಟಿ ಸಿದ್ಧವಾಗಿಟ್ಟಿದ್ದೇವೆ. ತಾಜಾ ತರಕಾರಿ, ಅನ್ನಸಾಂಬಾರ್, ಉಪಾಹಾರ ಬಿಸಿಬಿಸಿ ಮಾಡಿ ಉಣ ಬಡಿಸುತ್ತೇವೆ ಎಂದು ಹುಬ್ಬಳ್ಳಿ ಭೈರು ಕೇಟರರ್ಸ್, ಬಾಬುಲಾಲ್/ ಹಸ್ತಿಮಾಲ್ ಭೈರು ಅವರು ಹೇಳಿದ್ದಾರೆ.

ಕಲಬುರಗಿ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಮೆರವಣಿಗೆ ದಾರಿ ಯಾವುದಯ್ಯ?

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲಾ ಸಾರ್ವಜನಿಕರು, ವಿಶೇಷ ಆಹ್ವಾನಿತರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಈಗಾಗಲೇ ಸ್ವಚ್ಛತಾ ಸಮಿತಿ ಉಸ್ತುವಾರಿ ನಡೆಸಲಿದೆ. ಕುಡಿಯಲು ಮತ್ತು ಕೈತೊಳೆದುಕೊಳ್ಳಲು ಪ್ರತ್ಯೇಕ ನೀರಿನ ವ್ಯವಸ್ಥೆ ಇರಲಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಹಾಗೂ ಸಮ್ಮೇಳನ ಆಹಾರ ಸಮಿತಿ ಅಧ್ಯಕ್ಷ ಬಸವರಾಜ ಮತ್ತಿಮೂಡ್ ಅವರು ಹೇಳಿದ್ದಾರೆ.

ಸಾಹಿತ್ಯ ಸಮ್ಮೇಳನದ 3 ದಿನಗಳ ಊಟೋಪಚಾರದ ಮೆನ್ಯೂ

ಫೆಬ್ರವರಿ 5:

ಬೆಳಗ್ಗೆ  ಉಪಹಾರ- ಶಿರಾ, ಉಪ್ಪಿಟ್ಟು, ಚಹಾ.
ಮಧ್ಯಾಹ್ನ ಊಟ- ಸಜ್ಜೆ / ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಮಡಿಕೆ ಕಾಳು, ಚಟ್ನಿಪುಡಿ, ಅನ್ನ-ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಮೋತಿ ಚೂರು ಲಡ್ಡು.
ರಾತ್ರಿ ಊಟ- ವಾಂಗಿಬಾತ್, ಅನ್ನ-ರಸಂ, ಉಪ್ಪಿನಕಾಯಿ, ಶಾವಿಗೆ ಪಾಯಸ.

ಫೆಬ್ರವರಿ 6:

ಬೆಳಗ್ಗೆ  ಉಪಹಾರ- ಮಂಡಳ ಸುಸಲಾ, ಮಿರ್ಚಿಭಜ್ಜಿ, ಮೈಸೂರು ಪಾಕ್, ಚಹಾ,
ಮಧ್ಯಾಹ್ನ ಊಟ- ಸಜ್ಜೆ/ ಜೋಳದ ರೊಟ್ಟಿ, ಚಪಾತಿ, ಪುಂಡಿ ಪಲ್ಯ, ಡೊಣ್ಣಗಾಯಿ ಪಲ್ಯ, ಚಟ್ನಿಪುಡಿ, ಅನ್ನ- ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಶೇಂಗಾ ಹೋಳಿಗೆ.
ರಾತ್ರಿ ಊಟ- ಬಿಸಿಬೇಳೆಬಾತ್, ಮೊಸರನ್ನ, ಉಪ್ಪಿನಕಾಯಿ, ರವಾ ಪಾಯಸ.

ಫೆಬ್ರವರಿ 7:

ಬೆಳಗ್ಗಿನ ಉಪಾಹಾರ- ಜವಿಗೋಧಿ ಉಪ್ಪಿಟ್ಟು/ ಗೋದಿ ಹುಗ್ಗಿ, ಶೇಂಗಾಚಟ್ನಿ, ಮೊಸರುಭಜ್ಜಿ, ಚಹಾ, ಬೇಸನ್ ಉಂಡಿ.
ಮಧ್ಯಾಹ್ನದ ಊಟ- ಸಜ್ಜೆ/ ಜೋಳದ ರೊಟ್ಟಿ, ಚಪಾತಿ, ಹೆಸರುಕಾಳು ಪಲ್ಯ ,ಮಿಕ್ಸ್ ತರಕಾರಿ ಪಲ್ಯ, ಚಟ್ನಿಪುಡಿ, ಅನ್ನ-ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಗೋಧಿ ಹುಗ್ಗಿ.
ರಾತ್ರಿ ಊಟ- ಅನ್ನ- ಸಾಂಬಾರ್, ಪಕೋಡ, ಚಟ್ನಿ ಪುಡಿ, ಜಿಲೇಬಿ, ಗಟ್ಟಿಬೇಳೆ, ತರಕಾರಿ ಪಲ್ಲೆ, ಕಾಳು ಪಲ್ಲೆ, ಜೋಳ, ಸಜ್ಜಿ ರೋಟ್ಟಿ, ಚಪಾತಿ, ಪುಂಡಿ ಪಲ್ಲೆ, ಮಜ್ಜಿಗೆ

1) 3 ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಉಪಾಹಾರ, ಊಟಕ್ಕಾಗಿ 150 ಕೌಂಟರ್
2) ದೇಶಿ/ ಜವಾರಿ ಆಹಾರ ಪದಾರ್ಥಕ್ಕೇ ಹೆಚ್ಚಿನ ಒತ್ತು
3) ರುಚಿ ಊಟ, ಶುದ್ಧ ಕುಡಿಯುವ ನೀರು
4) ಊಟದ ಕೌಟರ್‍ನಲ್ಲಿ ನೂಕುನುಗ್ಗಲು ತಪ್ಪಿಸಲು ಧ್ವನಿವರ್ಧಕ ಬಳಕೆÉ
5) ಕೌಂಟರ್ ಸ್ಥಾಪಿಸಿ ಟೋಕನ್ ನಂಬರ್, ಪಾಸ್ ವಿತರಣೆ
6) ಕುಡಿಯುವ ಹಾಗೂ ಕೈತೊಳೆಯುವ ನೀರಿಗಾಗಿ ಪ್ರತ್ಯೇಕ 70 ಕೌಂಟರ್