ಮಂಡ್ಯ:(ಸೆ.21) ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಕಲಂ 370ರ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರದ ಬಿಜೆಪಿ ಸರ್ಕಾರ ಭಾರತದ ಐಕ್ಯತೆಯನ್ನು ಕಾಪಾಡಿದೆ. ಆದರೆ, ಕೆಲ ವ್ಯಕ್ತಿಗಳು ಹಾಗೂ ಪಕ್ಷಗಳು ಪಾಕಿಸ್ತಾನಿಯರಂತೆ ನಡೆದುಕೊಂಡಿರುವುದು ವಿಷಾದನೀಯ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ವಿಷಾದಿಸಿದರು.


ಶುಕ್ರವಾರ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಐಕ್ಯತಾ ಅಭಿಯಾನದಡಿ ಆಯೋಜಿಸಿದ್ದ ಒಂದು ದೇಶ, ಒಂದು ಸಂವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವೊಂದೆ ಕಾನೂನು ಒಂದೆ ಎಂಬುದು ಅನುಷ್ಠಾನಗೊಂಡಾಗ ದೇಶದ ಹಿತರಕ್ಷಣೆ ಸಾಧ್ಯ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಳೆದ ನಿರ್ಧಾರ ಮತ್ತು ನಿಲುವುಗಳಿಂದ ಜಮ್ಮು ಮತ್ತು  ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಧಿಸಿ ತೋರಿಸಿದಂತಾಗಿದೆ. ಆದರೆ, ಕಳೆದ 70 ವರ್ಷಗಳಿಂದ ಕುತಂತ್ರಿ ಪಾಕಿಸ್ತಾನ ಜಮ್ಮು- ಕಾಶ್ಮೀರದಲ್ಲಿ ಯುವ ಸಮೂಹವನ್ನು ಎತ್ತಿಕಟ್ಟಿ ಭಯೋತ್ಪಾದನೆಗೆ ಬೆಂಬಲಿಸುತ್ತಾ ಬಂದಿದ್ದನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ಅವರು ಜಂಟಿಯಾಗಿ ಕೈಗೊಂಡ ನಿರ್ಧಾರದಿಂದ ಭಾರತ ಬಲ ಸಾಧಿಸಿದೆ ಎಂದು ತಿಳಿಸಿದರು.

ಜಮ್ಮು -ಕಾಶ್ಮೀರದಲ್ಲಿ ಕಲಂ 370 ಅನ್ನು ರದ್ದು ಮಾಡಿದ ಮೇಲೆ ಕಾನೂನು ವ್ಯವಸ್ಥೆ ಸರಿಯಾಗಿದೆ. ಜನರು ನೆಮ್ಮದಿಯಾಗಿದ್ದಾರೆ. ಕಲ್ಲು ತೂರಾಟಗಳು ನಿಂತಿವೆ. ಸದ್ಯದಲ್ಲೇ ಭಯೋತ್ಪಾದನೆಗೆ ಪೂರ್ಣ ವಿರಾಮ ಹೇಳುವ ಕಾಲ ಬಂದಿದೆ. ಅಮೆರಿಕವೂ ಸೇರಿದಂತೆ ಬಹುತೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕುವಂತೆ ಭಾರತ ಮಾಡಿದೆ ಎಂದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಐಕ್ಯತಾ ಅಭಿಯಾನದ ಮಹತ್ವ ಹಾಗೂ ಒಂದು ದೇಶ, ಒಂದು ಸಂವಿಧಾನ ಎಂಬುದನ್ನು ತಿಳಿಸುವ ಕೆಲಸ ಮಾಡಬೇಕು. ಕಾರ್ಯಕರ್ತರು ಮನೆಮನೆಗೆ ತೆರಳಿ 370ರ ವಿಧಿ ಬಗ್ಗೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸ ತಿಳಿಸುವ ಕೆಲಸವನ್ನುಮಾಡಬೇಕು ಎಂದು ಕರೆ ನೀಡಿದರು.

ಈ ವೇಳೆ ಮಾಜಿ ಸಚಿವ ಬಿ.ಸೋಮಶೇಖರ್‌, ಮಾಜಿ ಸಂಸದೆ ತೇಜಸ್ವಿನಿ ರಮೇಶ್‌, ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ನಗರಸಭೆ ಸದಸ್ಯ ಅರುಣ್‌ಕುಮಾರ್‌, ಮುಖಂಡರಾದ ಡಾ.ಸಿದ್ದರಾಮಯ್ಯ, ಎಚ್‌.ಆರ್‌.ಅರವಿಂದ, ಪಣಕನಹಳ್ಳಿ ಸುರೇಶ್‌, ಮಲ್ಲಿಕಾರ್ಜುನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.