ಬ್ಯಾಂಕುಗಳ ಶಾಖೆಗಳಿಗೆ ಕನ್ನಡ ಭಾಷೆ ಗೊತ್ತಿರುವ ಸಿಬ್ಬಂದಿಯನ್ನು ನಿಯೋಜಿಸಿ
ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಿಗೆ ಕನ್ನಡ ಭಾಷೆ ಗೊತ್ತಿರುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ನಿಯೋಜಿಸುವಂತೆ ಬ್ಯಾಂಕುಗಳ ಆಡಳಿತ ಮಂಡಳಿಗಳಿಗೆ ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಒತ್ತಾಯಿಸಿದ್ದಾರೆ.
ತುಮಕೂರು : ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಿಗೆ ಕನ್ನಡ ಭಾಷೆ ಗೊತ್ತಿರುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ನಿಯೋಜಿಸುವಂತೆ ಬ್ಯಾಂಕುಗಳ ಆಡಳಿತ ಮಂಡಳಿಗಳಿಗೆ ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಒತ್ತಾಯಿಸಿದ್ದಾರೆ.
ತುಮಕೂರು ಗ್ರಾಮಾಂತರ ಹೊನ್ನುಡಿಕೆ ಗ್ರಾಮದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಹಲವಾರು ರಾಷ್ಟ್ರಿಕೃತ ಬ್ಯಾಂಕುಗಳ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕನ್ನಡವೇ ಬಾರದು. ರೈತರು ಕೇಳುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರವೇ ಇಲ್ಲ. ಇಂತಹವರ ಬಳಿ ರೈತರು ವ್ಯವಹಾರ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರಗಳು ಯೋಜನೆ, ಕಾರ್ಯಕ್ರಮಗಳು ಜಾರಿಗೆ ತಂದರೂ, ಅವುಗಳನ್ನು ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಕರ್ತವ್ಯ. ಹಾಗಾಗಿ, ಸರಕಾರದ ಆಶಯಕ್ಕೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ.೮ ತಾಲೂಕುಗಳಲ್ಲಿ ರೈತರೊಂದಿಗೆ ನಾವು ಕಾರ್ಯಕ್ರಮ ಆಯೋಜಿಸಿದ್ದು, ರೈತರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಅಧಿಕಾರಿಗಳು ಸಹ ಕೊಟ್ಟ ಮಾತಿನಂತೆ ನಿಗಧಿತ ಅವಧಿಯೊಳಗೆ ರೈತರ ಜಮೀನುಗಳಿಗೆ ಹೋಗಿ ಅವರ ಕಾರ್ಯ ಮಾಡಿಕೊಡುತ್ತಿದ್ದಾರೆ. ಹಾಗಾಗಿ, ಜಿಲ್ಲಾಡಳಿತಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಮುರುಳೀಧರ್ ಹಾಲಪ್ಪ ತಿಳಿಸಿದರು.
ಸರಕಾರ ಸಂಕಷ್ಟದಲ್ಲಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅರಿವಿನ ಕೊರತೆಯಿಂದಾಗಿ ಬಹುತೇಕ ಕಾರ್ಯಕ್ರಮಗಳು ಉಳ್ಳವರ ಪಾಲಾಗುತ್ತಿವೆ. ಆರ್ಹರಿಗೆ ತಲುಬೇಕೆಂಬ ಕಾರಣಕೋಸ್ಕರವೇ ನಾವು "ರೈತರೊಂದಿಗೆ ನಾವು" ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಆಯೋಜಿಸುತ್ತಾ ಬಂದಿದ್ದೇವೆ. ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ೪೯೮೨ ಪಶು ಸಖಿಯರನ್ನು ಸರಕಾರ ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಂಡಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಸೇರಿದಂತೆ ಎಲ್ಲರೂ ಇಲ್ಲಿ ಭಾಗವಹಿಸಿದ್ದಾರೆ. ಬರದಿಂದ ಇಡೀ ಜಿಲ್ಲೆ ತತ್ತರಿಸಿದೆ. ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಬರಪೀಡಿತವೆಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಜನರು ಕಚೇರಿಗಳಿಗೆ ಅಲೆಯುವ ಬದಲು, ಸರಕಾರವೇ ಜನರ ಬಳಿಗೆ ಹೋಗಬೇಕೆಂಬ ಸದುದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜನರು ಇದರ ಲಾಭ ಪಡೆದುಕೊಂಡು, ತಮ್ಮ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಮುಖಂಡರಾದ ಷಣ್ಮುಖಪ್ಪ, ಸೂರ್ಯ ಮುಕುಂದರಾಜ್, ನರಸಿಂಹರಾಜು, ಹೊಯ್ಸಳ ಪ್ರತಿಷ್ಠಾನದ ಅಧ್ಯಕ್ಷರಾದ ನರಗನಹಳ್ಳಿ ಮುನಿರಾಜು,ಸುದರ್ಶನ ಹೊನ್ನುಡಿಕೆ, ಪುರುಷೋತ್ತಮ್, ಬಾಲಾಜಿ, ಕೃಷಿ ಅಧಿಕಾರಿ ಶೋಭಾ,ತೋಟಗಾರಿಕೆ ಇಲಾಖೆಯ ಕವಿತಾ, ಪುಶುಪಾಲನಾ ಇಲಾಖೆಯ ಡಾ. ಮಹೇಶ್, ರೇಷ್ಮೆ ಇಲಾಖೆಯ ಡಾ.ವೈ.ಕೆ.ಬಾಲಕೃಷ್ಣಪ್ಪ, ಎಸ್.ಬಿ.ಐ ಹೊನ್ನುಡಿಕೆಯ ಮ್ಯಾನೇಜರ್ ಗಾಯಿತ್ರಿ ನಾಯಕ್ ಭಾಗವಹಿಸಿದ್ದರು.