Asianet Suvarna News Asianet Suvarna News

ಬೆಂಗ್ಳೂರಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ

*  ಮಳೆ ಜತೆ ಚಳಿಗಾಳಿಯಿಂದ ಹೈರಾಣಾದ ಜನತೆ
* ಸಿಲಿಕಾನ್‌ ಸಿಟಿಯಲ್ಲಿ ಭೂಮಿ ತಬ್ಬಿದ್‌ ಮೋಡ
* ಭಾರೀ ಮಳೆಗೆ ಮರ ಬಿದ್ದು 3 ಕಾರು, 5 ಬೈಕ್‌ ಜಖಂ

Dense Cloud in Bengaluru on Nov 12th grg
Author
Bengaluru, First Published Nov 13, 2021, 7:02 AM IST

ಬೆಂಗಳೂರು(ನ.13):  ಬೆಂಗಳೂರು(Bengaluru) ನಗರ ಸತತ ಎರಡನೇ ದಿನ ಜಿಟಿಜಿಟಿ ಮಳೆ, ಚಳಿ, ದಟ್ಟಮೋಡ ಕವಿದ ಮತ್ತು ಮಂಜು ತುಂಬಿದ ವಾತಾವರಣ ಅನುಭವಿಸಿತು.

ಬುಧವಾರ ರಾತ್ರಿ ಆರಂಭಗೊಂಡಿರುವ ತುಂತುರು ಮಳೆ(Rain) ಗುರುವಾರ ದಿನವಿಡೀ ಸುರಿದು ಶುಕ್ರವಾರವೂ ಮುಂದುವರಿದಿದೆ. ಆದರೆ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಮಳೆ ಮತ್ತು ಚಳಿ(Cold) ತುಸು ಕಡಿಮೆಯಿತ್ತು.
ಬೆಳಗ್ಗೆಯಿಂದಲೇ ಮಳೆ ಇದ್ದುದ್ದರಿಂದ ಜನ ವಾಯುವಿಹಾರಕ್ಕೆ ತೆರಳಲು ಹಿಂದೇಟು ಹಾಕಿದರು. ಇದರಿಂದ ಬೆಳಗ್ಗೆ ಗಿಜಿಗುಡುತ್ತಿದ್ದ ಪಾರ್ಕ್‌ಗಳು ಶುಕ್ರವಾರ ಬಿಕೋ ಎನ್ನುತ್ತಿದ್ದವು. ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಜನರು ರೈನ್‌ಕೋಟ್‌, ಕೊಡೆ, ಸ್ವೇಟರ್‌, ದಪ್ಪನೆಯ ಉಡುಗೆ ತೊಟ್ಟು ಮನೆಯಿಂದ ಹೊರಬಂದರು. ಒಟ್ಟಾರೆ ನಗರದ ಜನಸಂಚಾರ ಕಡಿಮೆಯಿತ್ತು.

ಶುಕ್ರವಾರ ಶೀತಗಾಳಿಯ(Cold Air) ಅಬ್ಬರ ತುಸು ಕಡಿಮೆ ಇದ್ದ ಕಾರಣ ಮೈ ಕೊರೆಯುವ ಚಳಿಯಿರಲಿಲ್ಲ. ಆದರೆ ಹಿತವಾದ ಚಳಿಯ ಅನುಭವವನ್ನು ಐಟಿ ಸಿಟಿ ಮಂದಿ ಪಡೆದರು. ಹಲವರು ಬೆಚ್ಚನೆಯ ಚಹಾ, ಕಾಫಿ, ಕುರುಕಲು ತಿಂಡಿಯನ್ನು ಸೇವಿಸಿ ಚಳಿಯನ್ನು ಆಸ್ವಾದಿಸಿದರು.

Bengaluru| ಮಳೆ-ಚಳಿ ಜುಗಲ್‌ ಬಂಧಿ, ಐಟಿ ಸಿಟೀಲಿ ಮಲ್ನಾಡ್‌ ಹವೆ..!

ಹವಾಮಾನ ಇಲಾಖೆಯ(Department of Meteorology) ಮಾಪನ ಕೇಂದ್ರಗಳಲ್ಲಿ ಗುರುವಾರ ನಗರದಲ್ಲಿ ಎಲ್ಲೂ 20 ಡಿಗ್ರಿಗಿಂತ ಹೆಚ್ಚು ಉಷ್ಣತೆ(Temperature) ದಾಖಲಾಗಿರಲಿಲ್ಲ. ಆದರೆ ಶುಕ್ರವಾರ ನಗರದಲ್ಲಿ 21.8 ಡಿಗ್ರಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Bengaluru International Airport) 21.3 ಡಿಗ್ರಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ(HAL Airport) 22.5 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿತ್ತು. ಆದರೆ ಕನಿಷ್ಠ ಉಷ್ಣಾಂಶ ಗುರುವಾರಕ್ಕಿಂತ ಕಡಿಮೆಯಾಗಿದ್ದು, ನಗರದಲ್ಲಿ 16.8 ಡಿಗ್ರಿ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 15.7 ಡಿಗ್ರಿ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 15.2 ಡಿಗ್ರಿ ಸೆಲ್ಸಿಯಷ್‌ ಉಷ್ಣತೆ ವರದಿಯಾಗಿದೆ. ಗುರುವಾರ ಎಚ್‌ಎಎಲ್‌ ನಿಲ್ದಾಣದಲ್ಲಿ 16.7 ಡಿಗ್ರಿ ಉಷ್ಣಾಂಶ ದಾಖಲಾಗಿದ್ದೆ ಕನಿಷ್ಠ ಉಷ್ಣಾಂಶವಾಗಿತ್ತು. ಚೌಡೇಶ್ವರಿ ವಾರ್ಡ್‌, ವಿದ್ಯಾರಣ್ಯಪುರದಲ್ಲಿ ತಲಾ 1.2 ಸೆಂ.ಮೀ., ಅತ್ತೂರು 1.15ಸೆಂ.ಮೀ. ಮಳೆಯಾಗಿದೆ. ಉಳಿದಂತೆ ನಗರದೆಲ್ಲೆಡೆ ತುಂತುರು ಮಳೆ ಸುರಿದಿದೆ.

ತಮಿಳುನಾಡಿನಲ್ಲಿನ(Tamil Nadu) ವಾಯುಭಾರ ಕುಸಿತದ ಪ್ರದೇಶವು ಬೆಂಗಳೂರಿಗೆ ಸಮೀಪದಲ್ಲಿದೆ. ಹಾಗಾಗಿ, ನವೆಂಬರ್‌ 15ರವರೆಗೆ ಇದೇ ವಾತಾವರಣ(Weather)ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಗೆ ಮರ ಬಿದ್ದು 3 ಕಾರು, 5 ಬೈಕ್‌ ಜಖಂ

ಬಂಗಾಳಕೊಲ್ಲಿಯಲ್ಲಿ(Bay of Bengal) ವಾಯುಭಾರ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಹಳೆ ಮೈಸೂರು(Mysuru) ಭಾಗದ ಬಹುತೇಕ ಕಡೆಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು ಚಳಿಯ ವಾತಾವರಣ ಸೃಷ್ಟಿಯಾಗಿದೆ. ಮೈಸೂರು ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಶ್ರೀಹರ್ಷ ರಸ್ತೆಯಲ್ಲಿ ಬೃಹತ್‌ ಗಾತ್ರದ ಮರ ಉರುಳಿಬಿದ್ದ ಪರಿಣಾಮ 3 ಕಾರು, 5 ಬೈಕ್‌ಗಳು ಜಖಂಗೊಂಡಿವೆ.

ಚಾಮರಾಜನಗರ(Chamarajanagara) ಜಿಲ್ಲೆಯ ಚಿಂಚಳ್ಳಿ ಗ್ರಾಮದಲ್ಲಿ ತಡರಾತ್ರಿ ಸುರಿದ ಗಾಳಿ ಸಹಿತ ಜೋರು ಮಳೆಗೆ ಮನೆಯ ಚಾವಣಿ ಹಾಗೂ ಗೋಡೆ ಕುಸಿದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದಂತೆ ಚಾಮರಾಜನಗರ, ಕೋಲಾರ(Kolar), ಚಿಕ್ಕಬಳ್ಳಾಪುರ(Chikkaballapur), ತುಮಕೂರು(Tumakuru), ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.

4 ದಿನ ಭಾರೀ ಮಳೆ ಸಂಭವ : ಯೆಲ್ಲೋ ಅಲರ್ಟ್‌

ಸತತ ಮಳೆಗೆ ಗುಡಿಬಂಡೆ ಜನತೆ ತತ್ತರ

ಗುಡಿಬಂಡೆ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಗುಡಿಬಂಡೆಯಲ್ಲೂ ಸಹ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಇದರ ಜೊತೆಗೆ ಮೈ ಕೊರೆಯುವ ಚಳಿ ಜನತೆಯನ್ನು ಹಾರಾಣಾಗಿಸಿದೆ.

ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣದ ಜೊತೆಗೆ ಜಿಟಿಜಿಟಿ ಮಳೆಯಾಗುತ್ತಿದೆ. ಬೆಳಗಿನಿಂದ ಮೋಡದ ವಾತವಾರಣವಿದ್ದು, ಮಧ್ಯಾಹ್ನದ ಬಳಿಕ ಪ್ರಾರಂಭವಾದ ಮಳೆ ರಾತ್ರಿಯಿಡಿ ಸುರಿಯುತ್ತಿದೆ. ಇದಲ್ಲದೇ ಮಳೆಯ ಜೊತೆಗೆ ಮೈಕೊರೆಯುವ ಚಳಿ. ಚಳಿಯಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಲ್ಲದೆ ಇಲ್ಲಿಯ ಅಮಾನಿಬೈರಸಾಗರ ಸತತ ಒಂದು ತಿಂಗಳಿನಿಂದ ಕೋಡಿ ಹೋಗುತ್ತಿದೆ. ತಾಲೂಕಿನಾದ್ಯಂತ ಬಹುತೇಕ ಬೋರ್‌ ವೆಲ್‌ಗಳು ತುಂಬಿವೆ. ಇನ್ನೂ ಮೂರು ದಿನಗಳ ಮಳೆಯಾಗುವುದಾಗಿ ಸೂಚನೆಯಿದೆ.

ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಕೃಷಿ(Agriculture) ಸೇರಿದಂತೆ ತೋಟಗಾರಿಕಾ ಬೆಳೆಗಳು ನಷ್ಟವಾಗಿದೆ. ಕಟಾವು ಹಂತಕ್ಕೆ ಬಂದಿರುವ ರಾಗಿ ಹೊಲದಲ್ಲಿಯೇ ಮೊಳಕೆ ಬರುವ ಸ್ಥಿತಿಯಲ್ಲಿದೆ. ಶೇಂಗಾ ಶೇ.60 ರಷ್ಟುಕಟಾವು ಆಗಿದ್ದು, ಉಳಿದ ಬೆಳೆ ಬೂಜು ಹಿಡಿಯುವ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಜೋಳದ ಬೆಳೆಯಂತೂ ಮಳೆಯಿಲ್ಲದೇ ಫಸಲು ಬಂದೆ ಇರಲಿಲ್ಲ. ಇದೀಗ ಮಳೆಯಿಂದಾಗಿ ಅದೂ ಸಹ ಕೈಗೆ ಸಿಗದಂತಾಗಿದೆ. ಇನ್ನೂ ಆಲೂಗಡ್ಡೆ ಟಮೋಟ ಬೆಳೆಗಳಂತೂ ನಾಶವಾಗಿದೆ. ಕೂಡಲೇ ಸರ್ಕಾರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios