ಶಿರಸಿ(ಫೆ.24):  ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಹೋರಾಟದ ಕಾವು ತೀವ್ರಗೊಳ್ಳುತ್ತಿದೆ. ಇದುವರೆಗೂ ಮನವಿಗಳು, ಆಗ್ರಹಕ್ಕೆ ಮಾತ್ರ ಸೀಮಿತವಾಗುತ್ತಿದ್ದ ಹೋರಾಟ ಈಗ ಶಿರಸಿ ಇಂದು ಶಿರಸಿ ಬಂದ್‌ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ.

ಹೌದು, ಜಿಲ್ಲಾ ಕೇಂದ್ರ ಕಾರವಾರ ಘಟ್ಟದ ಮೇಲಿನ ತಾಲೂಕುಗಳಿಗೆ ದೂರ. ಜಿಲ್ಲಾ ಕೇಂದ್ರಕ್ಕೆ ತೆರಳಿ ಸರ್ಕಾರಿ ಕೆಲಸಗಳನ್ನು ಪೂರೈಸಿ ಬರಲು ಘಟ್ಟದ ಮೇಲಿನ ತಾಲೂಕುಗಳಾದ ಸಿದ್ದಾಪುರ, ಯಲ್ಲಾಪುರ ಶಿರಸಿ ಮುಂಡಗೋಡ ಜನತೆ ಸಂಪೂರ್ಣ ಒಂದು ದಿನವನ್ನೇ ಮೀಸಲಿಡಬೇಕಾಗುತ್ತದೆ. ಹೋದಾಗ ಅಧಿಕಾರಿಗಳು ಸಿಕ್ಕಿಲ್ಲ, ಕೆಲಸ ಆಗಿಲ್ಲ ಅಂದರೆ ಮತ್ತೆ ಮಾರನೇ ದಿನ ತೆರಳುವ ಸ್ಥಿತಿ. ಶ್ರಮ ಒಂದೆಡೆಯಾದರೆ, ದಾರಿಯ ಖರ್ಚು ನಿಭಾಯಿಸುವುದೂ ದುಸ್ತರ. ಬ್ರಿಟಿಷ್‌ ಆಡಳಿತದ ವ್ಯವಸ್ಥೆಯಲ್ಲಿ ಕಾರವಾರದಲ್ಲಿ ಬಂದರು ಇದೆ ಎಂಬ ಕಾರಣಕ್ಕೆ ಮತ್ತು ಅವರ ಆಡಳಿತಕ್ಕೆ ಸೂಕ್ತ ಎಂಬ ಕಾರಣದಿಂದ ಕಾರವಾರವನ್ನು ಜಿಲ್ಲಾ ಕೇಂದ್ರವಾಗಿಸಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಶಿರಸಿ ವಾಣಿಜ್ಯೀಕವಾಗಿ ಬೆಳವಣಿಗೆ ಹೊಂದಿ ಕಾರವಾರಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಿದರೆ ಇಲ್ಲಿಯ ಜನತೆಗೂ ಅನುಕೂಲ ಎಂಬ ಕಾರಣದಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಹುಟ್ಟಿಕೊಂಡಿದೆ.

ಫೆ. 24ರಂದು ಮೀನುಗಾರಿಕೆ ಬಂದ್ ...

ಪ್ರತ್ಯೇಕ ಜಿಲ್ಲೆಯ ಧ್ವನಿ ಕಳೆದ ಎರಡು ದಶಕಗಳಿಂದ ಕೇಳಿಬರುತ್ತಿದ್ದರೂ ದಶಕದ ಹಿಂದೆ ಜಿಲ್ಲೆಗೆ ಮಂಜೂರಾದ ವೈದ್ಯಕೀಯ ಕಾಲೇಜ್‌ ಪಡೆದುಕೊಳ್ಳಲು ಕಾರವಾರ ಮತ್ತು ಶಿರಸಿ ಜನತೆ ನಡುವೆ ಹಗ್ಗ ಜಗ್ಗಾಟ ನಡೆದಿತ್ತು. ಎಲ್ಲ ಸೌಲಭ್ಯಗಳೂ ಕಾರವಾರಕ್ಕೇ ಸಿಗುವುದಾದರೆ, ಶಿರಸಿ ಪ್ರತ್ಯೇಕ ಜಿಲ್ಲೆಯೇ ಆಗಿಬಿಡಲಿ ಎಂದು ಘಟ್ಟದ ಮೇಲಿನ ಜನತೆ ಆಗ್ರಹಿಸಿದ್ದರು. ಉತ್ತರ ಕನ್ನಡ ಜಿಲ್ಲೆ ವಿಸ್ತಾರವೂ ಜಾಸ್ತಿ ಇದೆ. ಶಿರಸಿ ಪ್ರತ್ಯೇಕ ಜಿಲ್ಲೆಯಾದರೆ ಇದನ್ನು ಗುಡ್ಡಗಾಡು ಜಿಲ್ಲೆ ಎಂದು ಘೋಷಣೆ ಮಾಡಬಹುದು. ಇದರಿಂದ ಅಭಿವೃದ್ಧಿಗೆ ಪ್ರತ್ಯೇಕ ಅನುದಾನವನ್ನೂ ಬಿಡುಗಡೆ ಮಾಡಿಸಿಕೊಳ್ಳಬಹುದು ಎಂದು ಚಿಂತಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಜೊತೆಯೇ ಶಿರಸಿ ತಾಲೂಕಿನ ಬನವಾಸಿಯನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡಬೇಕು. ಕದಂಬರು ಆಳಿ, ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆ ಬನವಾಸಿಗಿದ್ದರೂ ಅಭಿವೃದ್ಧಿ ಮಾತ್ರ ಇಲ್ಲಿ ನಗಣ್ಯವಾಗಿದೆ. ಹೀಗಾಗಿ, ಬನವಾಸಿ ಪ್ರತ್ಯೇಕ ತಾಲೂಕಾಗಿಸಿ, ಶಿರಸಿ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು ಎಂಬ ಆಗ್ರಹ ಕೂಡ ವ್ಯಕ್ತವಾಗಿದೆ.

ಈಗ ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟ ಇನ್ನಷ್ಟುತೀವ್ರಗೊಂಡಿದ್ದು, ಮೊದಲ ಬಾರಿ ಶಿರಸಿ ಬಂದ್‌ ಗೆ ಕರೆ ನೀಡಲಾಗಿದೆ. ಫೆ. 24ರಂದು ನಡೆಯಲಿರುವ ಶಿರಸಿ ಬಂದ್‌ಗೆ ಸಂಘ ಸಂಸ್ಥೆಗಳೂ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುವ ಎಲ್ಲ ಲಕ್ಷಣಗಳೂ ಗೋಚರವಾಗಿವೆ.