ಸೋತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿಯಲ್ಲಿ ಹೆಚ್ಚಿದ ಒತ್ತಡ
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ
- ಆದರೀಗ ಬಂಡಾಯವೆದ್ದು ಸೋತವರ ಮರು ಸೇರ್ಪಡೆಗೂ ಪಕ್ಷದಲ್ಲಿ ಒತ್ತಡ
ವರದಿ : ಶಿವಾನಂದ ಗೊಂಬಿ
ಹುಬ್ಬಳ್ಳಿ (ಸೆ.14): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ. ಇದೀಗ ಮೇಯರ್-ಉಪಮೇಯರ್ ಚುನಾವಣೆಗೆ ಪಕ್ಷಗಳು ಸಿದ್ಧತೆ ನಡೆಸಿವೆ. ಪಕ್ಷೇತರ ಅಭ್ಯರ್ಥಿಗಳನ್ನು ಆಯಾ ಪಕ್ಷಗಳು ಸೆಳೆಯುತ್ತಾ ಬರಮಾಡಿಕೊಳ್ಳುತ್ತಿವೆ. ಆದರೆ ಬಂಡಾಯ ಎದ್ದು ಸೋತು ಮನೆ ಸೇರಿರುವವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂಬ ಬೇಡಿಕೆ ಇದೀಗ ಕೇಳಿ ಬಂದಿದೆ.
ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದೇ ಬಿಜೆಪಿಯಲ್ಲಿ ಎಂಟ್ಹತ್ತು ಜನ ಹಾಗೂ ಕಾಂಗ್ರೆಸ್‌ನಲ್ಲಿ ಎಂಟ್ಹತ್ತು ಜನ ಕಣದಲ್ಲಿ ಉಳಿದಿದ್ದರು. ಹೀಗಾಗಿ ಎರಡೂ ಪಕ್ಷಗಳು ಹೀಗೆ ಬಂಡಾಯ ನಿಂತವರನ್ನು ಹಾಗೂ ಬಂಡಾಯ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿರುವ ಪಕ್ಷದ ಮುಖಂಡರನ್ನು ಉಚ್ಚಾಟಿಸಿದ್ದವು. ಬಿಜೆಪಿ ಒಟ್ಟು 23 ಜನರನ್ನು ಉಚ್ಚಾಟಿಸಿದ್ದರೆ, ಕಾಂಗ್ರೆಸ್‌ನಲ್ಲಿ 34 ಮುಖಂಡರನ್ನು ಉಚ್ಚಾಟಿಸಿದೆ.
ಆಗ ಬಂಡಾಯ ಎದ್ದು ಗೆದ್ದು ಬಂದವರು ಬರೋಬ್ಬರಿ 6 ಜನ. ಇವರಲ್ಲಿ ಮೂವರು ಬಿಜೆಪಿಗರಾದರೆ, ಮೂವರು ಕಾಂಗ್ರೆಸಿಗರು. ಹೀಗೆ ಗೆದ್ದು ಬಂದವರನ್ನು ಮತ್ತೆ ಪಕ್ಷಕ್ಕೆ ಅದ್ಧೂರಿಯಿಂದಲೇ ಸ್ವಾಗತಿಸಲಾಗುತ್ತಿದೆ. ಬಿಜೆಪಿಯಲ್ಲಿ ದುರ್ಗಮ್ಮ ಶಶಿಕಾಂತ ಬಿಜವಾಡ ಅವರನ್ನು ಈಗಾಗಲೇ ಬರಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ನಲ್ಲೂ ಗೆದ್ದವರನ್ನು ಸೆಳೆದುಕೊಳ್ಳುವ ಪ್ರಯತ್ನಗಳು ಸಾಗಿವೆ. ಈಗಾಗಲೇ ಚೇತನ ಹಿರೇಕೆರೂರು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಜೆಪಿ -ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು : ಅಧಿಕಾರಕ್ಕೆ ಬರುವ ವಿಶ್ವಾಸ
ಸೋತವರ ಪರ ವಕಾಲತ್ತು: ಗೆದ್ದವರನ್ನೇನೋ ರೆಡ್ ಕಾರ್ಪೆಟ್ ಹಾಸಿ ಕರೆದುಕೊಳ್ಳಲಾಗುತ್ತಿದೆ. ಆದರೆ ಇದೇ ರೀತಿ ಬಂಡಾಯ ನಿಂತು ಸೋತು ಮನೆ ಸೇರಿರುವವರನ್ನು ಪಕ್ಷಕ್ಕೆ ಕರೆದುಕೊಳ್ಳಿ. ಇಲ್ಲವೇ ಗೆದ್ದವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಡಿ ಎಂಬ ಒತ್ತಡ ಪಕ್ಷಗಳಲ್ಲಿ ಕೇಳಿ ಬಂದಿದೆ. ಗೆದ್ದವರು ಕೂಡ ಪಕ್ಷ ವಿರೋಧಿಗಳೇ ಆಗಿದ್ದಾರೆ. ಹೀಗಾಗಿಯೇ ಅವರನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ. ಗೆದ್ದವರ ಉಚ್ಚಾಟನೆಯನ್ನು ಹಿಂಪಡೆದು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾದರೆ ಸೋತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು? ಸೋತವರು ಕೂಡ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈಗ ಸೋತರೂ ಮತದಾರರ ಬೆಂಬಲವನ್ನು ಸಾಕಷ್ಟುಹೊಂದಿರುವುದುಂಟು. ಈಗ ಸೋತಿದ್ದಾರೆ ಎಂದು ನಿರ್ಲಕ್ಷ್ಯ ಮಾಡಿದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಸೋತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಡ ಕೆಲ ಮುಖಂಡರದ್ದು.
ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸದ್ಯ ಗೆದ್ದವರನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ಸೋತ ಅಭ್ಯರ್ಥಿಗಳು ಮತ್ತೆ ಪಕ್ಷಕ್ಕೆ ಆಗಮಿಸುವ ಇಂಗಿತ ವ್ಯಕ್ತಪಡಿಸಿದರೆ, ಆ ವಾರ್ಡ್‌ನ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಚುನಾವಣೆಯಲ್ಲಿ ಬಂಡಾಯ ಎದ್ದವರನ್ನೆಲ್ಲ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ. ಅವರನ್ನು ಪಕ್ಷಕ್ಕೆ ಮತ್ತೆ ಬರಮಾಡಿಕೊಳ್ಳುವ ಕುರಿತು ಕೆಪಿಸಿಸಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
ಅಲ್ತಾಫ್ ಹಳ್ಳೂರು, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಮತ್ತೆ ಪಕ್ಷಕ್ಕೆ ಬನ್ನಿ ಎಂದು ಕರೆದರೆ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ. ಆ ಬಗ್ಗೆ ಇನ್ನೂ ಯೋಚಿಸಿಲ್ಲ. ನಮ್ಮ ಅಗತ್ಯ ಪಕ್ಷಕ್ಕೆ ಇದ್ದರೆ ಕರೆಯಬಹುದು.
ಲಕ್ಷ್ಮಣ ಉಪ್ಪಾರ, ಬಿಜೆಪಿ ಉಚ್ಚಾಟಿತ ಮುಖಂಡರು
ಪಕ್ಷಕ್ಕಾಗಿ ದುಡಿದರೂ ಟಿಕೆಟ್ ವಂಚಿತನಾದೆ. ಹೀಗಾಗಿ ನನ್ನ ಪತ್ನಿ ಬಂಡಾಯ ಅಭ್ಯರ್ಥಿಯಾಗಿದ್ದಳು. ಸದ್ಯ ನನ್ನನ್ನು ಪಕ್ಷದ ಮುಖಂಡರು ಉಚ್ಚಾಟಿಸಿದ್ದಾರೆ. ನನಗೆ ಮತ್ತೆ ಪಕ್ಷಕ್ಕೆ ಬನ್ನಿ ಎಂದು ಈ ವರೆಗೂ ಯಾರು ಕರೆದಿಲ್ಲ. ಕರೆದರೆ ವಾರ್ಡ್‌ನ ಕಾರ್ಯಕರ್ತರು, ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.
ಲಕ್ಷ್ಮಣ ಗಂಡಗಾಳೇಕರ್, ಬಿಜೆಪಿ ಉಚ್ಚಾಟಿತ ಮುಖಂಡರು
ಟಿಕೆಟ್ ನೀಡುವಲ್ಲಿ ನಮಗೆ ಮೋಸವಾಯಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಚುನಾವಣೆಯಲ್ಲಿ ಸೋತಿದ್ದೇನೆ. ಈ ವರೆಗೂ ಪಕ್ಷದಿಂದ ಯಾವ ಕರೆಯೂ ಬಂದಿಲ್ಲ. ಒಂದು ವೇಳೆ ಆಹ್ವಾನ ಬಂದರೆ ಬೆಂಬಲಿಗರ ತೀರ್ಮಾನವೇ ಅಂತಿಮ.
ಪ್ರಕಾಶ ಘಾಟಗೆ, ಕಾಂಗ್ರೆಸ್ ಉಚ್ಚಾಟಿತ ಮುಖಂಡರು