ನರಸಿಂಹರಾಜಪುರ [ಜ.24]:  ಭತ್ತದ ಬೆಲೆ ಕುಸಿತದಿಂದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವು 1 ಕ್ವಿಂಟಲ್‌ ಬತ್ತಕ್ಕೆ ಕನಿಷ್ಠ 4000 ದಿಂದ 5000 ರು. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್‌. ಸದಾಶಿವ ಆಗ್ರಹಿಸಿದರು.

ಮಂಗಳವಾರ ಕೃಷಿ ಇಲಾಖೆ ಆವರಣದಲ್ಲಿ ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಹವಮಾನ ವೈಪರೀತ್ಯ, ಭತ್ತದ ಬೆಲೆ ಕುಸಿತ, ಕೂಲಿ ಕಾರ್ಮಿಕರ ವೇತನ ಹೆಚ್ಚಳ, ರಾಸಾಯನಿಕ ಗೊಬ್ಬರದ ಬೆಲೆ ಹೆಚ್ಚಳದಿಂದ ಕಂಗಾಲಾದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ. ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರು ಆರ್ಥಿಕವಾಗಿ ಮೇಲೆ ಬರಬೇಕಾದರೆ ಸಾಧ್ಯವಾದಷ್ಟುವಾಣಿಜ್ಯ ಬೆಳೆ ಬೆಳೆಯುವುದನ್ನು ಪ್ರಾರಂಭಿಸಬೇಕು. ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್‌ ಕೃಷಿ ಹಸ್ತಪ್ರತಿ ಬಿಡುಗಡೆಗೊಳಿಸಿ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಸರ್ಕಾರವು ಹಲವು ಸೌಲಭ್ಯ ನೀಡುತ್ತಿದ್ದರೂ ಇನ್ನೂ ರೈತರು ಸಾಲ ಮುಕ್ತವಾಗಿಲ್ಲ. ಕೃಷಿ ಇಲಾಖೆಯ ಹೊಸ ಕಟ್ಟಡ ಸಿದ್ಧವಾಗಿದೆ. ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರು.

ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ.!...

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌. ನಾಗೇಶ್‌ ಮಾತನಾಡಿ, ರೈತರಿಗೆ ಸರ್ಕಾರ ಸಹಾಯಧನದಲ್ಲಿ ನೀಡುವ ಯಂತ್ರಗಳು ಗುಣಮಟ್ಟದಿಂದ ಕೂಡಿರಬೇಕು. ಅತಿವೃಷ್ಠಿಯಿಂದ ಇನ್ನೂ ಹಲವು ರೈತರಿಗೆ ಪರಿಹಾರ ಬಂದಿಲ್ಲ. ರೈತರಿಗೆ ಸಾಲಕ್ಕಾಗಿ ಬ್ಯಾಂಕ್‌ನವರು ನೋಟಿಸ್‌ ನೀಡಿದರೆ ಹೆದರಬಾರದು. ನಿಮ್ಮೊಂದಿಗೆ ಹೋರಾಟಕ್ಕೆ ಇಳಿಯಲು ನಾನು ಸಿದ್ಧ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್‌ ಮಾತನಾಡಿ, ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯನ್ನು ನ.ರಾ.ಪುರ ತಾಲೂಕಿನ ರೈತರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಶೃಂಗೇರಿ ತಾಲೂಕಿನಲ್ಲಿ ಫಸಲ್‌ ವಿಮಾ ಯೋಜನೆಯಡಿ 20 ಕೋಟಿ ರು. ಹಾಗೂ ಕೊಪ್ಪ ತಾಲೂಕಿನಲ್ಲಿ 10 ಕೋಟಿ ರು. ಪರಿಹಾರ ರೈತರಿಗೆ ಬಂದಿದೆ. ಆದರೆ, ನ.ರಾ.ಪುರ ತಾಲೂಕಿನ ರೈತರಿಗೆ ಕೇವಲ 2.75 ಕೋಟಿ ರು. ಪರಿಹಾರ ಮಾತ್ರ ಬಂದಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕಿ ಅರ್ಪಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ತಾಪಂ ಸದಸ್ಯೆ ಮೀನಾಕ್ಷಿ, ತಾಲೂಕು ಕೃಷಿಕ ಸಮಾಜದ ಗೌರವ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ, ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಎಚ್‌.ಎಂ. ಮನು, ಪಿ.ಸಿ.ಎ.ಆರ್‌.ಡಿ. ಬ್ಯಾಂಕಿನ ಅಧ್ಯಕ್ಷ ಬಿ.ವಿ. ಉಪೇಂದ್ರ, ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಟಿ. ಸತೀಶ್‌, ಪಿ.ಕೆ. ಬಸವರಾಜ್‌, ಬಿ.ಕೆ. ಜಾನಕಿರಾಂ, ಎಚ್‌.ಟಿ. ವಿನಯ, ಕೃಷ್ಣಮೂರ್ತಿ, ಮೀನಾಗಾರಿಕೆ ಇಲಾಖೆ ಅಧಿಕಾರಿ ಉಪಸ್ಥಿತರಿದ್ದರು.

ಭತ್ತದ ಬೆಳೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿ.ಡಿ.ಜಾರ್ಜ್, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಟಿ.ಆರ್‌.ಅನ್ನಪೂರ್ಣ, ದ್ವಿತೀಯ ಸ್ಥಾನ ಪಡೆದ ಎಚ್‌.ಕೆ. ಸುಂದರೇಶ್‌, ತೃತೀಯ ಸ್ಥಾನ ಪಡೆದ ವಿ.ಆರ್‌. ಉಪೇಂದ್ರ ಅವರಿಗೆ ಕೃಷಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕೃಷಿ ಅಧಿಕಾರಿ ಸುಭಾಷ್‌ ಸ್ವಾಗತಿಸಿ, ಎ.ಎಸ್‌.ವೆಂಕಟರಮಣ ರೈತ ಗೀತೆ ಹಾಡಿದರು. ಸಂದೀಪ್‌ ಕಾರ್ಯಕ್ರಮ ನಿರೂಪಿಸಿದರು. ಮೇಘನ ವಂದಿಸಿದರು.

ತಾಂತ್ರಿಕ ಮಾಹಿತಿ ಕಾರ್ಯಕ್ರಮದಲ್ಲಿ ಶೃಂಗೇರಿ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ರವಿಕುಮಾರ್‌ ಅಡಕೆ ಕೃಷಿ ಬಗ್ಗೆ ಹಾಗೂ ರಾಣೇಬೆನ್ನೂರಿನ ಪ್ರಗತಿಪರ ಕೃಷಿಕ ಸಚ್ಚಿನ್‌ ಕಬ್ಬೂರ್‌ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಭಾರತ್‌ ಪುಸ್ತಕ ಮಳಿಗೆ ಹಾಗೂ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಪಶು ಇಲಾಖೆಗಳ ಮಳಿಗೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು