ಸೊಗಡು ಶಿವಣ್ಣನಿಗೆ ಟಿಕೆಟ್ ನೀಡುವಂತೆ ಹೆಚ್ಚಿದ ಆಗ್ರಹ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯವಾದಿ, ಹಿರಿಯ ಮುಖಂಡ, ಮೀಸಾಬಂದಿ, ಕರಸೇವಕ, ಹಿಂದೂ ಫೈರ್ ಬ್ರಾಂಡ್, ಅಜಾತಶತ್ರು , ಜನಪರ ಹೋರಾಟಗಾರ ಸೊಗಡು ಶಿವಣ್ಣನವರಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ತೀರ್ಮಾನಿಸಬೇಕೆಂದು ಸೊಗಡು ಶಿವಣ್ಣನವರ ಅಭಿಮಾನಿಗಳು ಮತ್ತು ಸ್ವಾಭಿಮಾನಿ ಸಮಾನ ಮನಸುಳ್ಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ತುಮಕೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯವಾದಿ, ಹಿರಿಯ ಮುಖಂಡ, ಮೀಸಾಬಂದಿ, ಕರಸೇವಕ, ಹಿಂದೂ ಫೈರ್ ಬ್ರಾಂಡ್, ಅಜಾತಶತ್ರು , ಜನಪರ ಹೋರಾಟಗಾರ ಸೊಗಡು ಶಿವಣ್ಣನವರಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ತೀರ್ಮಾನಿಸಬೇಕೆಂದು ಸೊಗಡು ಶಿವಣ್ಣನವರ ಅಭಿಮಾನಿಗಳು ಮತ್ತು ಸ್ವಾಭಿಮಾನಿ ಸಮಾನ ಮನಸುಳ್ಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ತುಮಕೂರಿನ ಸಮೃದ್ಧಿ ಗ್ರಾಂಡ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ನಂತರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಸೊಗಡುಶಿವಣ್ಣ ಅವರ ಬೆಂಬಲಿಗರ ಸಭೆಯಲ್ಲಿ, ಬಿಜೆಪಿಯಿಂದ ತುಮಕೂರು ಲೋಕಸಭಾ ಟಿಕೆಟ್ ನೀಡುವಂತೆ ಒಕ್ಕೊರಲಿನಿಂದ ಆಗ್ರಹ ಕೇಳಿ ಬಂತು.
ಕುಣಿಗಲ್ ನ ಹಿರಿಯ ಕಾರ್ಯಕರ್ತ ಮತ್ತು ಪ್ರಬುದ್ಧ ಪ್ರಕೋಷ್ಠದ ತುಮಕೂರು ಜಿಲ್ಲಾ ಸಂಚಾಲಕ ನಟರಾಜ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿರುವ ಸೊಗಡು ಶಿವಣ್ಣ ಅವರು ಜಿಲ್ಲೆಯ ಒಂದು ಶಕ್ತಿ ಕೇಂದ್ರವಾಗಿದ್ದಾರೆ. ಅವರ ಮೌನವನ್ನು ಅವರ ದೌರ್ಬಲ್ಯ ಎಂದು ಭಾವಿಸಬೇಡಿ, ಅವರು ಬಹಳ ಸಮರ್ಥರಿದ್ದಾರೆ ಎಂದರು.
ಹಿಂದುತ್ವದ ಬಲವಾದ ಪ್ರತಿಪಾದಕರು ಜೊತೆಗೆ ತುಮಕೂರು ಜಿಲ್ಲೆಯ ಜನತೆ ಹಿಂದೂ - ಮುಸ್ಲಿಂ ಗಲಾಟೆ ಇಲ್ಲದೆ ನೆಮ್ಮದಿಯಿಂದಿರಲು ಶಿವಣ್ಣ ಅವರ ಕೊಡುಗೆ ಅಪಾರವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪಕ್ಷಕ್ಕೆ ಇದೊಂದು ಅವಕಾಶ ಇದೆ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಶಿವಣ್ಣನವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಮಧುಗಿರಿ ಪಿ.ಎನ್. ನರಸಿಂಹಮೂರ್ತಿ ಮಾತನಾಡಿ, ಸೊಗಡು ಶಿವಣ್ಣ ಅವರು ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದರು.
ಹಿಂದುಳಿದ ಒಕ್ಕೂಟದ ಪ್ರಮುಖ ಧನಿಯಕುಮಾರ್ ಮಾತನಾಡಿ, ಪಕ್ಷದ ಸಿದ್ಧಾಂತವನ್ನು ಹೊಂದಿರುವ ಸಮರ್ಥ ನಾಯಕ ಶಿವಣ್ಣ. ಹಾಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರಿಗೆ ಒತ್ತಾಯಿಸಿದರು.
ಬೆಳಗುಂಬ ಪ್ರಭಾಕರ್ ಮಾತನಾಡಿ, ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕನೆಂದರೆ ಅದು ಸೊಗಡು ಶಿವಣ್ಣ ಮಾತ್ರ ಎಂದ ಅವರು, ಅವರಿಗೆ ಟಿಕೆಟ್ ನೀಡಿದರೆ 2 ಲಕ್ಷ ಮತಗಳ ಅಂತರದಲ್ಲಿ ಸೊಗಡು ಶಿವಣ್ಣ ಗೆಲ್ಲುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವಕುಮಾರ್, ಸೊಗಡು ವೆಂಕಟೇಶ್, ಬಡ್ಡಿಹಳ್ಳಿ ಚಂದ್ರಣ್ಣ , ಬೆಸ್ಟ್ ರಾಮರಾಜು, ಗೋಕುಲ್ ಮಂಜುನಾಥ್, ಗುಬ್ಬಿ ಪ್ರಮೋದ್, ರೈತ ಮುಖಂಡ ಸುರೇಶ್ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲೆಯಿಂದ ಬಂದಂತಹ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
ಸಂತಾಪ: ಈ ಕಾರ‍್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಚಿಕ್ಕನಾಯಕನಹಳ್ಳಿ ಮೇರುನಾಥ್, ತುಮಕೂರು ವೀರಶೈವ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ವಿ.ಮಂಜುನಾಥ್ , ಗಂಗಸಂದ್ರ ಗುರುಸಿದ್ದೇಗೌಡ, ಬ್ಯಾಂಕ್ ಚಂದ್ರಶೇಖರ್, ಜಯಸಿಂಹರಾವ್, ಎಸ್.ಎಲ್.ಎನ್.ಟಿ. ಅಶೋಕ್ ಕುಮಾರ್ ರವರಿಗೆ ಸಂತಾಪ ವ್ಯಕ್ತಪಡಿಸಲಾಯಿತು.
ವೇದಿಕೆಯಲ್ಲಿ ಹಿರಿಯರು , ಪ್ರಮುಖರಾದ ಕಾಂಡಿಮೆಂಟ್ ಶಿವಣ್ಣ, ಸತ್ಯಮಂಗಲ ಕೆ.ಎಸ್.ಸದಾಶಿವಯ್ಯ, ಗರುಡಯ್ಯ, ಕುಣಿಗಲ್ ನಟರಾಜ್, ಧನಿಯ ಕುಮಾರ್, ಕೆ.ಪಿ. ಮಹೇಶ ಉಪಸ್ಥಿತರಿದ್ದರು.
ತುಮಕೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ ಪ್ರಾಸ್ತಾವಿಕ ನುಡಿಗಳನ್ನಾಡಿ, ನಿರೂಪಿಸಿದರು. ರಾಜಕುಮಾರ್ ಗುಪ್ತ ಸ್ವಾಗತಿಸಿದರೆ , ಗೋಕುಲ್ ಮಂಜುನಾಥ್ ವಂದಿಸಿದರು.