Asianet Suvarna News Asianet Suvarna News

ಸೌಕರ‍್ಯವಿಲ್ಲದ ಕೆಂಪೇಗೌಡ ಲೇಔಟ್‌ನಲ್ಲಿ ಮನೆ ಕಟ್ಟುವ ಷರತ್ತು ಸಡಿಲಿಕೆಗೆ ಆಗ್ರಹ

  • ಸೌಕರ‍್ಯವಿಲ್ಲದ ಕೆಂಪೇಗೌಡ ಲೇಔಟ್‌ನಲ್ಲಿ ಮನೆ ಕಟ್ಟುವ ಷರತ್ತನ್ನು ಸಡಿಲಿಸಲು ಒತ್ತಾಯ
  •  5 ವರ್ಷದೊಳಗೆ ಮನೆ ಕಟ್ಟಬೇಕೆಂಬ ನಿಯಮ ಪರಿಷ್ಕರಿಸಲು ಒತ್ತಾಯ
Demand for relaxing  construction clause in Kempegowda Layout site gow
Author
Bengaluru, First Published Jul 13, 2022, 6:31 AM IST

ಬೆಂಗಳೂರು (ಜು.13): ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಎಲ್‌) ನಿವೇಶನ ನೋಂದಣಿಯಾಗಿ ಐದು ವರ್ಷದೊಳಗೆ ಮನೆ ನಿರ್ಮಾಣ ಮಾಡಬೇಕೆಂಬ ಷರತ್ತನ್ನು ಬದಲಿಸುವಂತೆ ಬಡಾವಣೆಯ ನಿವೇಶನದಾರರು ಒತ್ತಾಯಿಸಿದ್ದಾರೆ. ಮೂಲಸೌಕರ್ಯ ಕಲ್ಪಿಸಿದ ದಿನದಿಂದ ಐದು ವರ್ಷದೊಳಗೆ ಮನೆ ಕಟ್ಟಬೇಕೆಂಬುದಾಗಿ ಪರಿಷ್ಕರಿಸುವಂತೆ ಆಗ್ರಹಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಈ ಕುರಿತು ಬಿಡಿಎ ಅಧ್ಯಕ್ಷರು, ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದೆ. ಮೂಲ ಸೌಕರ್ಯ ಒದಗಿಸಿದ ದಿನದಿಂದ 5 ವರ್ಷದೊಳಗೆ ಮನೆ, ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕೆಂಬ ಷರತ್ತನ್ನು ಪರಿಷ್ಕರಿಸುವಂತೆ ಆಗ್ರಹಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನೋಂದಣಿಯಾಗಿ ಐದು ವರ್ಷದೊಳಗೆ ಮನೆ ನಿರ್ಮಾಣ ಮಾಡಬೇಕೆಂಬ ಷರತ್ತು ಗುತ್ತಿಗೆ ಕರಾರಿನಲ್ಲಿ ನಮೂದಿಸಲಾಗಿದೆ. ಜೊತೆಗೆ 2020 ನವೆಂಬರ್‌ನಲ್ಲಿ ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಖಾಲಿ ನಿವೇಶನಗಳಿಗೆ ಪರಿಷ್ಕೃತ ದಂಡ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಬಡಾವಣೆಯ ನಿವೇಶನದಾರರಿಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಕೂಡಲೇ ಷರತ್ತನ್ನು ‘ಬಡಾವಣೆಗೆ ಮೂಲ ಸೌಕರ್ಯ ಒದಗಿಸಿದ ದಿನದಿಂದ’ ಎಂದು ಪರಿಷ್ಕರಿಸಬೇಕೆಂದು ಆಗ್ರಹಿಸಿದೆ.

ಅಕ್ರಮವಾಗಿ ವಶಪಡಿಸಿಕೊಂಡಿದ್ದ ಆಸ್ತಿ ಮರಳಿ ಪಡೆದ ಬಿಡಿಎ

ದಂಡ ಹಾಕುವುದು ಸರಿಯಲ್ಲ: ನಿಯಮದ ಪ್ರಕಾರ 2016ರಲ್ಲಿ ನಿವೇಶನ ಪಡೆದವರು 5 ವರ್ಷಗಳ ಒಳಗೆ ಮನೆ ಕಟ್ಟಬೇಕಾಗಿತ್ತು. 2018ರಲ್ಲಿ ನಿವೇಶನ ಪಡೆದವರು 2023ರೊಳಗೆ ಮನೆ ಕಟ್ಟಬೇಕಾಗಿದೆ. ಆದರೆ, ಬಡಾವಣೆಯ ಯಾವುದೇ ನಿವೇಶನದಲ್ಲಿ ಮನೆ ಕಟ್ಟುವ ಪರಿಸ್ಥಿತಿಯೇ ಇಲ್ಲ. ನಿಯಮಾವಳಿ ಪ್ರಕಾರ 2016ರಲ್ಲಿ ನಿವೇಶನ ಪಡೆದವರು ದಂಡದ ವ್ಯಾಪ್ತಿಗೆ ಈಗಾಗಲೇ ಬಂದಿದ್ದಾರೆ. 2018ರಲ್ಲಿ ನಿವೇಶನ ಪಡೆದವರು 2022ರಿಂದ ದಂಡದ ವ್ಯಾಪ್ತಿಗೆ ಒಳಪಡಲಿದ್ದಾರೆ. ಪ್ರಾಧಿಕಾರ ಸರಿಯಾದ ಸಮಯದಲ್ಲಿ ಮೂಲ ಸೌಕರ್ಯದ ಕೆಲಸವನ್ನು ಮುಗಿಸದೆ ಇರುವುದರಿಂದ ನಿವೇಶನದಾರರು ಮನೆ ಕಟ್ಟಲು ಸಾಧ್ಯವಾಗಿಲ್ಲ. ಆದ್ದರಿಂದ ನಿಯಮದಂತೆ ನಿವೇಶನದ ಮಾಲಿಕರ ಮೇಲೆ ದಂಡ ಹಾಕುವುದು ಸರಿಯಲ್ಲ ಎಂದು ವೇದಿಕೆ ಆಕ್ಷೇಪಿಸಿದೆ.

ಕನಿಷ್ಠ 5 ವರ್ಷ ಅವಕಾಶ ನೀಡಿ: ನಿವೇಶನಗಳನ್ನು 2016ರಿಂದ ಮೂಲ ಸೌಲಭ್ಯಗಳಿಲ್ಲದೆ ಹಂಚಿಕೆ ಮಾಡಲಾಗಿದೆ. ಬಡಾವಣೆಯಲ್ಲಿ ಇಂದಿಗೂ ಮೂಲ ಸೌಲಭ್ಯ ಒದಗಿಸಿಲ್ಲ. ಮೂಲ ಸೌಲಭ್ಯಗಳಿಲ್ಲದ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ದಂಡದ ವ್ಯಾಪ್ತಿಗೆ ತಂದಿರುವುದು ದುರಾದೃಷ್ಟಕರ. ಪ್ರಾಧಿಕಾರ ನಿವೇಶನ ಹಂಚುವ ಮೊದಲೇ ಮೂಲಸೌಲಭ್ಯ ಕಲ್ಪಿಸದೆ ನಿವೇಶನ ಹಂಚಿ ಐದು ವರ್ಷ ಕಳೆದರೂ ಸಾಕಷ್ಟುಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ನಿವೇಶನದಾರರಿಗೆ ಮನೆ ಕಟ್ಟಲು ಮೂಲಸೌಕರ್ಯ ಕಲ್ಪಿಸಿದ ದಿನದಿಂದ ಸಾಕಷ್ಟುಕಾಲಾವಕಾಶವನ್ನು ಮಾಡಿಕೊಡಬೇಕು. ಕನಿಷ್ಠ 5 ವರ್ಷ ಸಮಯಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

ಬಿಡಿಎ ಜಾಗದಲ್ಲಿ ನಿವೇಶನ ಮಾಡಿ ಮಾರಾಟ; 100 ಕೋಟಿ ರೂಪಾಯಿ ವಂಚನೆ

ಅಭಿವೃದ್ಧಿ ಮಾಡದ ಬಿಡಿಎ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(Bengaluru Development Authority) ಇನ್ನೂ ಅಭಿವೃದ್ಧಿಯೇ ಕಾಣದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಒದಗಿಸಲು ಈವರೆಗೆ 2,539.67 ಕೋಟಿ ವೆಚ್ಚ ಮಾಡಿದ್ದರೂ ಯಾವುದೇ ಕಾಮಗಾರಿ ಪೂರ್ಣಗೊಳಿಸದೇ ಇರುವುದಕ್ಕೆ ನಿವೇಶನದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಂಪೇಗೌಡ ಬಡಾವಣೆಯಲ್ಲಿ(Kempegowda Layout) 2,635.37 ಎಕರೆ ಜಾಗದಲ್ಲಿ ನಿವೇಶನಗಳನ್ನು(Sites) ನಿರ್ಮಿಸಲಾಗುತ್ತಿದೆ. 2015-16ರಿಂದ ಈವರೆಗೆ ನಿವೇಶನಗಳ ಹಂಚಿಕೆಯಿಂದ 2,053.16 ಕೋಟಿ ಸಂಗ್ರಹಿಸಲಾಗಿದೆ. ಆದರೆ, ಸ್ವಾಧೀನ ಪಡಿಸಿಕೊಂಡ ಭೂಮಿಗೆ(Land) 685.17 ಕೋಟಿ ಪರಿಹಾರ ಮತ್ತು ಮೂಲಸೌಕರ್ಯ(Infrastructure) ಒದಗಿಸಲು 1,854.50 ಕೋಟಿ ಸೇರಿದಂತೆ .2,539.67 ಕೋಟಿ ಖರ್ಚು ಮಾಡಲಾಗಿದೆ ಎಂದು ಬಿಡಿಎ(BDA) ಅಧಿಕೃತವಾಗಿ ಮಾಹಿತಿ ನೀಡಿದೆ.

ಆದರೆ, ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಿಸಲು ಅಗತ್ಯವಾದ ಕನಿಷ್ಠ ಸೌಕರ್ಯಗಳೂ ಇಲ್ಲ. ವಿದ್ಯುತ್‌(Electricity), ನೀರು(Water), ರಸ್ತೆ(Road), ಚರಂಡಿ, ಮಳೆ ನೀರು ಕಾಲುವೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸೇರಿದಂತೆ ಯಾವುದೇ ಸೌಲಭ್ಯವನ್ನು ಬಿಡಿಎ ಪೂರ್ಣಗೊಳಿಸಿ ಕೊಟ್ಟಿಲ್ಲ. 

Follow Us:
Download App:
  • android
  • ios