* ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗ* ಬಿಡಿಎ ಜಾಗದಲ್ಲಿ ನಿವೇಶನ ಮಾಡಿ ಮಾರಾಟ* 100 ಕೋಟಿ ರೂಪಾಯಿ ವಂಚನೆ -
ಬೆಂಗಳೂರು(ಜು.03): ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗ ಪಡೆದು ಮಾರಾಟ ಮಾಡಿ ಬಿಡಿಎಗೆ ಬರೋಬ್ಬರಿ .100 ಕೋಟಿ ನಷ್ಟವುಂಟು ಮಾಡಿರುವ ನಾಗರಾಜು ಎಂಬ ವ್ಯಕ್ತಿ ಮತ್ತು ಬಿಡಿಎ ಅಧಿಕಾರಿ, ಸಿಬ್ಬಂದಿ ವಿರುದ್ಧ ಬಿಎಂಟಿಎಫ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎನ್‌ಜಿಇಎಫ್ ಪೂರ್ವ ಬಡಾವಣೆ ನಿರ್ಮಾಣಕ್ಕಾಗಿ ಈರಣ್ಣ ಎಂಬುವರಿಗೆ ಸೇರಿದಂತೆ ಬೆಂಗಳೂರು ಪೂರ್ವ ತಾಲೂಕಿನ ಬಾಣಸವಾಡಿ ಗ್ರಾಮದ ಸರ್ವೆ ಸಂಖ್ಯೆ 73ರಲ್ಲಿದ್ದ 4.13 ಎಕರೆ ಜಮೀನನ್ನು 1986ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡು ಪರಿಹಾರದ ಹಣವನ್ನು ಸಿವಿಲ್ ಕೋರ್ಚ್‌ನಲ್ಲಿ ಠೇವಣಿ ಇಟ್ಟಿತ್ತು. ಆದರೆ, ಈರಣ್ಣ ಬಳಿ ನಾಗರಾಜ್ ಎಂಬ ವ್ಯಕ್ತಿ ಜಿಪಿಎ ಬರೆಯಿಸಿಕೊಂಡು ಜಮೀನು ತನ್ನದೆಂದು ಪ್ರತಿಪಾದಿಸಿ, ನಿವೇಶನಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು.
ಬಿಡಿಎ ಸ್ವಾಧೀನದ ಭೂಮಿಯನ್ನು ವಶಕ್ಕೆ ಪಡೆದಾಗ ನಿವೇಶನದಾರರು ಬದಲಿ ನಿವೇಶನಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಚ್ ಬಿಡಿಎ ನಿಯಮಾನುಸಾರ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿತ್ತು. ಈ ಮಧ್ಯೆ ಆರೋಪಿ ನಾಗರಾಜು ಎಲ್ಲಾ ರೆವಿನ್ಯೂ ನಿವೇಶನದಾರರಿಂದ ಸದರಿ ನಿವೇಶನಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು, ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಎರಡು ಬಾರಿ ಚರ್ಚಿಸಿದ್ದ ಬಿಡಿಎ ನಿಯಮಾವಳಿಗಳ ಪ್ರಕಾರ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ನಾಗರಾಜ್ ಮನವಿಯನ್ನು ತಿರಸ್ಕರಿಸಿತ್ತು.
ಕಾನೂನು ಬಾಹಿರವಾಗಿ ಭೂಮಿ ಮಂಜೂರು:
2012ರಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ನಾಗರಾಜ್‌ಗೆ ಅರ್ಕಾವತಿ ಬಡಾವಣೆಯ ವಿವಿಧ ಸರ್ವೆ ನಂಬರ್‌ಗಳಲ್ಲಿ 4.13 ಎಕರೆ ಜಮೀನನ್ನು ಬದಲಿಯಾಗಿ ನೀಡಲಾಗಿತ್ತು. ಆದರೆ ಹೀಗೆ ಮಂಜೂರಾದ ಕೆಲವು ಜಾಗಗಳು ಬಫರ್ ವಲಯದಲ್ಲಿದ್ದು ಮನೆ ನಿರ್ಮಾಣಕ್ಕೆ ಸಾಧ್ಯವಿಲ್ಲ ಎಂಬ ಕಾರಣ ಹೇಳಿ ಮತ್ತೊಮ್ಮೆ ನಾಗರಾಜ್ ಬದಲಿ ನಿವೇಶನ ಕೊಡುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದನು. ಮನವಿ ಪುರಸ್ಕರಿಸಿದ್ದ ಬಿಡಿಎ ಅಧಿಕಾರಿಗಳು 2014ರಲ್ಲಿ ಥಣಿಸಂದ್ರ ಸೇರಿದಂತೆ ವಿವಿಧ ಕಡೆಗಳ ಪ್ರಮುಖ ಸ್ಥಳಗಳಲ್ಲಿ ಜಿಪಿಎದಾರನಾಗಿದ್ದ ನಾಗರಾಜ್ ಹೆಸರಿಗೆ ಮಂಜೂರು ಮಾಡಿ, ನೋಂದಣಿಯನ್ನೂ ಮಾಡಿಸಿ ಸ್ವಾಧೀನಪತ್ರಗಳನ್ನೂ ಕೊಟ್ಟಿದ್ದಾರೆ.
ತನಿಖೆಗೆ ಆದೇಶ:
ನಾಗರಾಜ್ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಿಡಿಎ ಕಾರ್ಯಪಡೆಯ ಡಿವೈಎಸ್‌ಪಿ ರವಿಕುಮಾರ್ ತಂಡಕ್ಕೆ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆದೇಶ ನೀಡಿದ್ದರು. ಡಿವೈಎಸ್‌ಪಿ ರವಿಕುಮಾರ್, ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಪ್ರಕರಣದ ತನಿಖೆ ನಡೆಸಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ವರದಿ ನೀಡಿದ್ದರು.
ಈ ವರದಿ ಆಧರಿಸಿ ದೂರು ದಾಖಲಿಸುವಂತೆ ಪ್ರಾಧಿಕಾರ ಸೂಚಿಸಿದ್ದರಿಂದ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಬಿಎಂಟಿಎಫ್‌ನಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಬಿಎಂಟಿಎಫ್ ಇನ್ಸ್‌ಪೆಕ್ಟರ್ ಬೇಬಿ ವಾಲಿಕರ್ ಅವರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಬಿಡಿಎ ತಿಳಿಸಿದೆ.
