ಪಿಎಸ್ಸೈ ಪರೀಕ್ಷೆ: ಬ್ಲೂಟೂತ್ ಅಕ್ರಮದ ತನಿಖೆ ಆಗ್ರಹ
* ಹಿಂದೆ ಕಾನ್ಸ್‌ಟೆಬಲ್ ನೇಮಕ ಪರೀಕ್ಷೆಯಲ್ಲೂ ‘ಹೈಟೆಕ್’ ಅಕ್ರಮ
* ಬನಿಯನ್, ಮಾಸ್ಕ್‌ನೊಳಗೂ ಪತ್ತೆಯಾಗಿತ್ತು ಬ್ಲೂಟೂತ್, ಇತರೆ ಸಾಧನ
* ಪಿಎಸ್ಸೈ ಪರೀಕ್ಷೆಯಲ್ಲೂ ಇಂಥ ಅಕ್ರಮ ಕುರಿತು ಅಭ್ಯರ್ಥಿಗಳಿಗಿದೆ ಶಂಕೆ
ಆನಂದ್ ಎಂ. ಸೌದಿ
ಯಾದಗಿರಿ(ಏ.21): ರಾಜ್ಯಾದ್ಯಂತ(Karnataka) ಸದ್ದು ಮಾಡಿರುವ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ(PSI Recruitment Scam) ಓಎಂಆರ್ ಶೀಟ್ ತಿದ್ದುವಿಕೆ ಆರೋಪಕ್ಕೆ ಸಂಬಂಧಿಸಿ ಮಾತ್ರ ಈಗ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ಈ ಹಿಂದೆ ಕಾನ್ಸ್‌ಟೆಬಲ್ ಪರೀಕ್ಷೆಯಲ್ಲಿ ನಡೆದಂತೆ ಪಿಎಸ್ಐ ಪರೀಕ್ಷೆಯಲ್ಲೂ ಬ್ಲೂಟೂತ್ ಮತ್ತಿತರೆ ಹೈಟೆಕ್ ತಂತ್ರಜ್ಞಾನ ಬಳಸಿ ಅಕ್ರಮ ಆಗಿರುವ ಸಾಧ್ಯತೆ ಕುರಿತು ಶಂಕೆಯಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯಬೇಕೆಂಬ ಆಗ್ರಹ ಇದೀಗ ಕೇಳಿಬರುತ್ತಿದೆ.
ಅ.24, 2021 ರಂದು ನಡೆದ ಕಾನ್ಸ್‌ಟೆಬಲ್ ನೇಮಕ ಪರೀಕ್ಷೆ ವೇಳೆ, ಕಲಬುರಗಿಯ(Kalaburgi) ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿದ್ದ ಸೆನ್ ಪೊಲೀಸರು(Police), 9 ಮಂದಿಯನ್ನು ಬಂಧಿಸಿ, ಬ್ಲೂಟೂತ್(Bluetooth) ಅಳವಡಿಸಿದ್ದ ಬನಿಯನ್ ಸೇರಿ ಅತ್ಯಾಧುನಿಕ ಉಪಕರಣಗಳನ್ನು ಜಪ್ತಿ ಮಾಡಿದ್ದರು. ಬೆಳಗಾವಿ ವಿಭಾಗದಲ್ಲೂ ದಾಳಿ ನಡೆದು, 14 ಮಂದಿಯನ್ನು ಬಂಧಿಸಿ(Arrest), ಅನೇಕ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಭ್ಯರ್ಥಿಗಳ ಜೊತೆಗೆ ಕೋಚಿಂಗ್ ಸೆಂಟರ್‌ಗಳ ಮುಖ್ಯಸ್ಥರು, ಸರ್ಕಾರಿ ನೌಕರನನ್ನೂ ಆಗ ಬಂಧಿಸಲಾಗಿತ್ತು. (ಪ್ರಕರಣ ಸಂಖ್ಯೆ 23/2021) ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.
ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ
ಹಾಗೆಯೇ, ನ.22, 2021 ರಂದು ನಡೆದ ಕೆಎಸ್ಆರ್ಪಿ(KSRP ಹಾಗೂ ಐಆರ್‌ಬಿ(IRB) ಪರೀಕ್ಷೆಗಳ ಸಂದರ್ಭದಲ್ಲೂ ಬೆಂಗಳೂರು, ಕಲಬುರಗಿ, ಜೇವರ್ಗಿ, ಅಫಜಲ್ಪೂರ, ಆಳಂದ, ಬೆಳಗಾವಿ, ಗೋಕಾಕ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗದಲ್ಲಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದು ಸೇರಿ ಅನೇಕ ಅಕ್ರಮಗಳು ಪತ್ತೆಯಾಗಿದ್ದವು. ಅಭ್ಯರ್ಥಿಯೊಬ್ಬ ಮಾಸ್‌್ಕನಲ್ಲಿ ಬ್ಲೂಟೂತ್ ಉಪಕರಣ ಅಳವಡಿಸಿಕೊಂಡು ನಕಲಿಗೆ ಮುಂದಾಗಿದ್ದ ಘಟನೆ ಬಾಗಲಕೋಟೆಯಲ್ಲಿ ಪತ್ತೆಯಾಗಿತ್ತು. ಪರೀಕ್ಷೆ ಅಕ್ರಮಕ್ಕೆ ‘ಬ್ಲೂಟೂತ್‘ ಹಾವಳಿ ಎಲ್ಲೆ ಮೀರಿತ್ತು ಎನ್ನುವುದಕ್ಕೆ ಸಾಕ್ಷಿ ಸಮೇತ ಪೊಲೀಸರಿಗೆ ಪುರಾವೆ ಸಿಕ್ಕಿತ್ತು.
Yadgir: ಎಸ್‌ಐ ಪರೀಕ್ಷೆ ಗೋಲ್‌ಮಾಲ್: ಮತ್ತೆ 6 ಆರೋಪಿಗಳ ಸೆರೆ
ಅದೇ ರೀತಿ ಪಿಎಸ್ಐ ಪರೀಕ್ಷೆಯಲ್ಲೂ ಬ್ಲೂಟೂತ್ ಸೇರಿ ಇತರೆ ವಿಧಾನಗಳ ಮೂಲಕ ಅಕ್ರಮ ನಡೆದಿರಬಹುದು. ಬ್ಲೂಟೂತ್ ಮೂಲಕ ಅಕ್ರಮ ನಡೆದ ಘಟನೆ ಪತ್ತೆಯಾದಾಗ ಕಾನ್ಸ್‌ಟೆಬಲ್ ಪರೀಕ್ಷೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಅದೇ ರೀತಿ ಪಿಎಸೈ ಪರೀಕ್ಷೆಗೆ ವಿಚಾರದಲ್ಲೂ ಕೇವಲ ಒಎಂಆರ್‌ಶೀಟ್ ತಿದ್ದುವಿಕೆಗೆ ಸೀಮಿತವಾಗದೆ ಬ್ಲೂಟೂತ್ ಸೇರಿ ಇತರೆ ರೀತಿಯ ಅಕ್ರಮದ ಕುರಿತೂ ತನಿಖೆ ನಡೆಯಬೇಕು ಎಂಬುದು ನೊಂದ ಅಭ್ಯರ್ಥಿಗಳ ಅಭಿಪ್ರಾಯ.
ಕಳೆದ ಅಕ್ಟೋಬರ್‌ನಲ್ಲಿ ಕಾನ್ಸ್‌ಟೆಬಲ್ ಪರೀಕ್ಷೆ(Exam) ವೇಳೆ ನಡೆದ ಅಕ್ರಮದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಅದೇ ರೀತಿ, ಪಿಎಸೈ ಪರೀಕ್ಷೆಯ ತನಿಖೆ ನಡೆಸಿದರೆ, ಬ್ಲೂಟೂತ್ ಅಕ್ರಮವೂ ಬೆಳಕಿಗೆ ಬರುವ ಸಾಧ್ಯತೆಯಿದೆ ಅಂತ ನೊಂದ ಅಭ್ಯರ್ಥಿ ರವಿಶಂಕರ್ ಪಾಟೀಲ್ ತಿಳಿಸಿದ್ದಾರೆ.