Asianet Suvarna News Asianet Suvarna News

ಬೆಳೆಗಳಿಗೆ ನೀರು ಹರಿಸುವಂತೆ ಒತ್ತಾಯ

ಓನರ್ ಐಲ್ಯಾಂಡ್ ಎನ್.ಆರ್.ಬಿ.ಸಿ ಕಾಲುವೆಯಿಂದ ಹುಲ್ಲಹಳ್ಳಿ ಭಾಗದ ಜಮೀನುಗಳಿಗೆ ನೀರು ಹರಿಸಿ ಭತ್ತದ ಫಸಲನ್ನು ರಕ್ಷಿಸುವಂತೆ ಒತ್ತಾಯಿಸಿ ರೈತರು ಕಾವೇರಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Demand For Cauvery water to Paddy Crops snr
Author
First Published Nov 22, 2023, 8:56 AM IST

  ಹುಲ್ಲಹಳ್ಳಿ :  ಓನರ್ ಐಲ್ಯಾಂಡ್ ಎನ್.ಆರ್.ಬಿ.ಸಿ ಕಾಲುವೆಯಿಂದ ಹುಲ್ಲಹಳ್ಳಿ ಭಾಗದ ಜಮೀನುಗಳಿಗೆ ನೀರು ಹರಿಸಿ ಭತ್ತದ ಫಸಲನ್ನು ರಕ್ಷಿಸುವಂತೆ ಒತ್ತಾಯಿಸಿ ರೈತರು ಕಾವೇರಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಎನ್.ಆರ್.ಬಿ.ಸಿ ಕಾಲುವೆ ಅಣೆಕಟ್ಟೆ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಭೂ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದ್ದು, ಭತ್ತವು ವಡಗಡೆಯುವ ಸಮಯದಲ್ಲಿ ನಾಲೆಯಲ್ಲಿ ನೀರು ಹರಿಯದಿರುವುದರಿಂದ ಭತ್ತದ ಫಸಲು ಕೈಗೆ ಸಿಗದಂತಾಗಿದೆ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರೈತರು ಬೇಸಾಯ ಮಾಡಿದ್ದು, ಭತ್ತದ ಫಸಲು ಗರ್ಭಕಟ್ಟಿ ಕಾಳಾಗುವ ಸಂದರ್ಭದಲ್ಲಿ ನೀರು ಹರಿಸದೆ ಭತ್ತದ ಬೆಳೆ ಒಣಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ದೂರಿದರು.

ಈ ಬಗ್ಗೆ ನೀರಾವರಿ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಲೆಯಲ್ಲಿ ಬೆಳೆದಿರುವ ಜೋಂಡುಗಳನ್ನು ನಾವೇ ಸೇರಿ ತೆಗೆಸಿದ್ದೇವೇ. ಕೆಲವು ಭಾಗದ ರೈತರು ಎರಡು ಫಸಲು ಬೆಳೆಯುತ್ತಿದ್ದು, ನಾವುಗಳು ಒಂದು ಫಸಲನ್ನು ಸರಿಯಾಗಿ ಬೆಳೆಯಲು ನೀರು ನೀಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಲಾದರೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಂಡು ಒಣಗುತ್ತಿರುವ ಭತ್ತದ ಬೆಳೆಯನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ ಮಾತನಾಡಿ, ಈಗ ಮಳೆ ಸರಿಯಾಗಿ ಇಲ್ಲದ ಕಾರಣ ಮೂರು ದಿನ ಹುಲ್ಲಹಳ್ಳಿ ನಾಲೆಗೆ ಮೂರು ದಿನ ಮಾದನಹಳ್ಳಿ ಗ್ರಾಮಕ್ಕೂ ನೀರು ಹರಿಸಿಯುತ್ತಿರುವುದರಿಂದ ಸಮಸ್ಯೆಯಾಗಿದೆ. ಆದರೂ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಭತ್ತದ ಬೆಳೆಗಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಕುಮಾರ್, ಮಹೇಶ್, ಪ್ರಕಾಶ್, ಸಾಗರ್, ಸಿದ್ದಲಿಂಗಪ್ಪ, ಶಂಭುಲಿಂಗಪ್ಪ, ಮಹೇಶ್, ಅಣ್ಣಪ್ಪ, ಮಂಜು, ಗುಂಡಣ್ಣ, ಕಾಂತ ಮೊದಲಾದವರು ಇದ್ದರು.

500 ಎಕರೆ ಭತ್ತ ನಾಶ

ಸುರಪುರ(ನ.10): ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಸುರಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ 500 ಎಕರೆಗೂ ಹೆಚ್ಚು ಭತ್ತ ಧರೆಗುರುಳಿ ಅನ್ನದಾತರಿಗೆ ಅಪಾರ ನಷ್ಟ ಉಂಟಾಗಿದೆ.

ಅತಿ ಹೆಚ್ಚು ಭಾಗ ನೀರಾವರಿಗೆ ಒಳಪಟ್ಟಿದ್ದರಿಂದ ತಾಲೂಕಿನ ಸುರಪುರದಲ್ಲಿ 9900 ಹೆಕ್ಟೇರ್, ಕೆಂಭಾವಿ-7850 ಹೆಕ್ಟೇರ್, ಕಕ್ಕೇರಾ-10,500 ಹೆಕ್ಟೇರ್ ಸೇರಿ ಒಟ್ಟು ಮುಂಗಾರಿನಲ್ಲಿ 28.84 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ದೀಪಾವಳಿ ಹಬ್ಬವಾದ ನಂತರ ಭತ್ತ ಕಟಾವು ಆಸೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ನ.6ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ 500ಕ್ಕೂ ಎಕರೆ ಭತ್ತ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ ಎಂದು ವಾಗಣಗೇರಾ ರೈತ ಬೈಯಲಪ್ಪಗೌಡ ನಾಯಕ ತಿಳಿಸಿದ್ದಾರೆ.

ಯಾದಗಿರಿ: ಸ್ಟೀಯರಿಂಗ್‌ ಕಿತ್ತು ಹಳ್ಳಕ್ಕೆ ಬಿದ್ದ ಸಾರಿಗೆ ಸಂಸ್ಥೆ ಬಸ್‌, ತಪ್ಪಿದ ಭಾರೀ ದುರಂತ

ಕೆಂಭಾವಿ ಹೋಬಳಿಯ ಯಾಳಗಿ-59, ಕೆಂಭಾವಿ-100, ಗೌಡಗೇರಾ-50, ಮುರಕನಾಳು-50, ಸುರಪುರ ಹೋಬಳಿಯ ವಾಗಣಗೇರಾ-80, ತಳವಾರಗೇರಾ-40, ದೇವಾಪುರ-100, ಅರಳಹಳ್ಳಿ-40, ಆಲ್ದಾಳ-70 ಸೇರಿ ಅಂದಾಜು 500ಕ್ಕೂ ಎಕರೆ ಆರ್‌ಎನ್ಆರ್ ತಳಿ ಭತ್ತ ನೆಲಕ್ಕುರುಳಿದೆ.

ಎಕರೆಗೆ 35ರಿಂದ 40 ಚೀಲ ಇಳುವರಿ ನಿರೀಕ್ಷಿಸಲಾಗಿದ್ದು, ಇನ್ನೊಂದು ವಾರದ ನಂತರ ಭತ್ತ ಕಟಾವು ಮಾಡಲಿದ್ದೇವು. ಎಕರೆಗೆ 30 ಸಾವಿರಕ್ಕೂ ಅಧಿಕ ಖರ್ಚು ಮಾಡಿದ್ದೇವೆ. ಉತ್ತಮ ಬೆಲೆಯಿದ್ದ ಕಾರಣ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದೇವು. ಧಾರಾಕಾರವಾಗಿ ಸುರಿದ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ,. ಕೂಡಲೇ ಎಕರೆಗೆ 20 ಸಾವಿರ ರು. ಪರಿಹಾರ ಘೋಷಿಸಬೇಕು ಎಂದು ರೈತ ಮುಖಂಡ ಹಣಮಂತ್ರಾಯ ಮಡಿವಾಳ ಒತ್ತಾಯಿಸಿದ್ದಾರೆ.
ಭತ್ತ ಕಟಾವು ಸಮಯದಲ್ಲಿ ಮಳೆ ಬಂದಿರುವುದು ಆಕಾಶವೇ ತಲೆಯ ಮೇಲೆ ಬಿಂದತ್ತಾಗಿದೆ. ಕಟಾವು ಮಾಡಿ ರಾಶಿ ಹಾಕುವ ಸಂದರ್ಭದಲ್ಲಿ ವರುಣ ನಮ್ಮ ಮೇಲೆ ಮುನಿಸಿಕೊಂಡಿದ್ದೇನೆ. ರೈತನ ಬದಕು ಮಳೆಯೊಂದಿಗೆ ಜೂಜಾಟ ಎನ್ನುವ ಹಿರಿಯರ ಮಾತು ಅನುಭವಕ್ಕೆ ಬಂದಿದೆ ಎಂದು ನೊಂದ ರೈತ ತಳವಾರಗೇರಿ ಗುಡದಪ್ಪ ಹುಜರತಿ ತಿಳಿಸುತ್ತಾರೆ.

ನ.6 ರಂದು ಶನಿವಾರ ಸಂಜೆ ಸುಮಾರು 5ರಿಂದ 7.30 ರವರೆಗೆ ಬಿರುಗಾಳಿ ಸಹಿತ ಮಳೆ 42.2 ಮಿ.ಮೀ. ಆಗಿದೆ. ಇದರಿಂದ ಕೆಂಭಾವಿ ಹೋಬಳಿ ಭಾಗದಲ್ಲಿ 200ಕ್ಕೂ ಹೆಚ್ಚು ಎಕರೆ ಭತ್ತ ನಾಶವಾಗಿದೆ.

ಕೃಷಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಬೆಳೆ ನಾಶ ಪರಿಶೀಲಿಸುತ್ತಿದ್ದೇವೆ ಎಂದು ಕಂದಾಯ ನಿರೀಕ್ಷಕ ರಾಜಾಸಾಬ್ ತಿಳಿಸಿದ್ದಾರೆ.

Follow Us:
Download App:
  • android
  • ios