ದೆಹಲಿ-ಬೆಳಗಾವಿ ಮಧ್ಯೆ ವಿಮಾನ ಶುರು
* ಆ. 13ರಿಂದ ವಾರದಲ್ಲಿ ಎರಡು ದಿನ ವಿಮಾನ ಸೇವೆ ನೀಡಲು ತಯಾರಿ
* ರಾಜ್ಯದ ಗಮನ ಸೆಳೆಯುವಂತೆ ಮಾಡಿದ ಬೆಳಗಾವಿ ವಿಮಾನ ನಿಲ್ದಾಣ
* ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾದ ಬೆಳಗಾವಿ
ಜಗದೀಶ ವಿರಕ್ತಮಠ
ಬೆಳಗಾವಿ(ಆ.09): ದೇಶದ ವಿವಿಧ ನಗರಗಳಿಗೆ ವಿಮಾನ ಹಾರಾಟ ಹೆಚ್ಚುವ ಮೂಲಕ ಗಮನ ಸೆಳೆದಿದ್ದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ, ಇದೀಗ ಮತ್ತೊಮ್ಮೆ ಗಮನ ಸೆಳೆಯಲು ಮುಂದಾಗಿದೆ. ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಹಾರಾಟ ನಡೆಸಲು ದಿನಗಣನೆ ಆರಂಭವಾಗಿದೆ.
ಬೆಳಗಾವಿ ನಗರ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಬೆಳಗಾವಿಯಿಂದ ಪುಣೆ, ಚೆನ್ನೈ, ಹೈದ್ರಾಬಾದ್, ಬೆಂಗಳೂರು, ತಿರುಪತಿ, ಕಡಪಾ, ಇಂದೋರ್, ಮೈಸೂರು, ಮುಂಬೈ, ಅಹಮದಾಬಾದ, ನಾಸಿಕ್, ಸೂರತ್ ಹಾಗೂ ಜೋದಪುರ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ವಿಮಾನಯಾಣ ಪ್ರಯಾಣಿಕರಿಗೆ ಅತ್ಯಂತ ಹತ್ತಿರವಾಗಿತ್ತು.
ಇದೀಗ ದೆಹಲಿ ಹಾಗೂ ಬೆಳಗಾವಿ ಮಧ್ಯೆ ನೇರವಾಗಿ ವಿಮಾನ ಹಾರಾಟ ನಡೆಸಲಿದೆ. ಈಗಾಗಲೇ ರಾಜ್ಯ ಹಾಗೂ ದೇಶದ ವಿವಿಧ ನಗರಗಳು ಸೇರಿದಂತೆ 12 ಪ್ರಮುಖ ನಗರಗಳಿಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರ ವಿಮಾನಯಾನ ಸೇವೆ ಈಗಾಗಲೇ ಇದೆ. ಇದೀಗ ಆ. 13ರಿಂದ ವಾರದಲ್ಲಿ ಎರಡು ದಿನ ದೆಹಲಿ ಹಾಗೂ ಬೆಳಗಾವಿ ವಿಮಾನ ಸೇವೆ ನಡೆಸಲು ವಿಮಾನ ಯಾನ ಇಲಾಖೆ ಮುಂದಾಗಿದ್ದು, ಸ್ಪೈಸ್ ಜೆಟ್ ವಿಮಾನ ಕಂಪನಿಯು ಕೂಡ ಮುಂದೆ ಬಂದಿದೆ. ವಾರದಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ವಿಮಾನ ಹಾರಾಟ ಮಾಡಲಿದೆ.
ಇಂಡಿಗೋ 15ನೇ ವರ್ಷದ ಸಂಭ್ರಮ; ಕೇವಲ 915 ರೂಪಾಯಿಗೆ ವಿಮಾನ ಟಿಕೆಟ್ ಆಫರ್!
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ ಹಾಗೂ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ, ಚಂದಡಗ ಸೇರಿದಂತೆ ಇನ್ನಿತರ ನಗರಗಳ ಪ್ರಯಾಣಿಕರು ಈ ಮೊದಲು, ಮುಂಬೈ ಅಥವಾ ಬೆಂಗಳೂರಿಗೆ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಇದೀಗ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಹಾರಾಟ ನಡೆಸುತ್ತಿರುವುದು ಪ್ರಯಾಣಿಕರ ಹೆಚ್ಚಳಕ್ಕೆ ಉತ್ತೇಜನ ನೀಡುವುದರ ಜತೆಗೆ ಅನುಕೂಲವನ್ನೂ ಕಲ್ಪಿಸಿದೆ.
ಪುಣೆ ವಿಮಾನ ನಿಲ್ದಾಣಕ್ಕಿಂತಲೂ ಬೆಳಗಾವಿ ಸಮೀಪವಾಗುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಭಾಗದ ಜನರು, ಉದ್ಯಮಿಗಳು, ನೌಕರರು ಬೆಳಗಾವಿ ನಿಲ್ದಾಣದ ಮೂಲಕವೇ ಪ್ರಯಾಣಿಸಲು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ವಾಯುಸೇನೆ, ಭೂಸೇನೆ, ಐಟಿಬಿಪಿ ಅಧಿಕಾರಿಗಳು, ಎಕಸ್ ಕಂಪನಿ, ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.
ಹೀಗಿದೆ ವಿಮಾನ ಟೈಮ್‌ಲೈನ್
ಪ್ರತಿ ಸೋಮವಾರ ಹಾಗೂ ಶುಕ್ರವಾರ ಹಾರಾಟ ನಡೆಸಲಿರುವ ವಿಮಾನ ದೆಹಲಿ ಸಮೀಪದ ಲೆಹದಿಂದ ಬೆಳಗ್ಗೆ 11.30 ಗಂಟೆಗೆ ಹೊರಟು ಮಧ್ಯಾಹ್ನ 1 ಗಂಟೆಗೆ ದೆಹಲಿ ತಲುಪಲಿದೆ. ನಂತರ ಮಧ್ಯಾಹ್ನ 2.30 ಗಂಟೆಗೆ ದೆಹಲಿಯಿಂದ ಹೊರಟು ಸಂಜೆ 4.45 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ. ಸಂಜೆ 5.05 ಗಂಟೆಗೆ ಬೆಳಗಾವಿಯಿಂದ ಹೊರಟು 7.25 ಗಂಟೆಗೆ ದೆಹಲಿ ತಲುಪಲಿದೆ.