ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಗಲಭೆಗೆ ಬಿಜೆಪಿಗರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. 


ರಾಮನಗರ [ಫೆ.28]:  ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ​ರು. ಬಿಜೆಪಿ ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಾರ​ತ ಹಿಂದೂರಾಷ್ಟ್ರವೇ, ಬಿಜೆಪಿಯವರು ಹೊಸದಾಗಿ ಏನೂ ಘೋಷಣೆ ಮಾಡಬೇಕಿಲ್ಲ. ಹಿಂದೂ ರಾಷ್ಟ್ರದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ದೇಶದ ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ದೆಹಲಿ ಗಲಭೆ ಸಂಪೂರ್ಣವಾಗಿ ಬಿಜೆಪಿ ನಾಯಕರಿಂದ ನಡೆದ ಗಲಭೆಯಾಗಿದೆ. ಒಂದು ಕಡೆ ಟ್ರಂಪ್‌ ಕರೆದು ಗುಜರಾತ್‌ನಲ್ಲಿ ಮೆರವಣಿಗೆ ಮಾಡುತ್ತಾರೆ. ಮತ್ತೊಂದು ಕಡೆ ದೆಹಲಿಯಲ್ಲಿ ಗಲಾಟೆ ನಡೆಯುತ್ತದೆ. ಈ ಘಟನೆಯಿಂದ ನಮ್ಮ ದೇಶದ ಬಗ್ಗೆ ಅವರಿಗೆ ಯಾವ ಮಟ್ಟದ ಗೌರವ ಬರಬಹುದು ಎಂದು ಪ್ರಶ್ನಿಸಿದರು.

2023ರಲ್ಲಿ ಅಧಿಕಾರ ಹಿಡಿಯಲು ಚುನಾವಣಾ ತಂತ್ರಜ್ಞನ ಮೊರೆ ಹೋದ ಜೆಡಿಎಸ್...

ದೆಹಲಿಯಲ್ಲಿ ಗಲಭೆ ನಡೆದು ಅಮಾಯಕರು ಬಲಿಯಾದರು. ಈ ಬಗ್ಗೆ ನ್ಯಾಯಾಧೀಶರು ಕೇಂದ್ರ ಸರ್ಕಾರ ವಿರುದ್ಧ ಪ್ರತಿಕ್ರಿಯೆ ನೀಡಿದರೆ ಅವರನ್ನೇ ವರ್ಗಾವಣೆ ಮಾಡಿದ್ದಾರೆ. ಈ ದೇಶದಲ್ಲಿ ಈಗ ಇದೇ ನಡೆಯುತ್ತಿದೆ. ಇವರ ಆಟ ಹೆಚ್ಚು ದಿನ ನಡೆಯುವುದಿಲ್ಲ. ಕಾಲಚಕ್ರ ಬದಲಾದಂತೆ ಜನ ಅರ್ಥ ಮಾಡಿಕೊಳ್ಳುತ್ತಾರೆ. ಇವರ ಎಲ್ಲಾ ಆಟಕ್ಕೂ ಸದ್ಯದಲ್ಲೇ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ದೊಡ್ಡದಾ.., ಮಹಾರಾಷ್ಟ್ರ ದೊಡ್ಡದಾ ?

ಸಚಿವ ನಾರಾಯಣಗೌಡ ಮಂಡ್ಯ ತಾಕತ್ತಿನ ಬಗ್ಗೆ ಹೇಳಿದ್ದರೆ ಒಪ್ಪಬಹುದಿತ್ತು. ಅವರು ಮಹಾರಾಷ್ಟ್ರಕ್ಕೆ ಜೈ ಎನ್ನುತ್ತಾರೆ. ಮಂಡ್ಯ ಮತ್ತು ಕೆ.ಆರ್‌. ಪೇಟೆ ಜನರಿಗೆ ಜೈಕಾರ ಇಲ್ಲ, ಮಂಡ್ಯದ ತಾಕತ್ತು ದೊಡ್ಡದ, ಮಹಾರಾಷ್ಟ್ರದ ತಾಕತ್ತು ದೊಡ್ಡದ ಎಂದು ಮುಂದಿನ ಚುನಾವಣೆಯಲ್ಲಿ ಅಲ್ಲಿನ ಜನರೇ ತಿಳಿಸಿಕೊಡಲಿದ್ದಾರೆ ಎಂದು ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ತಿಲಕ ಫಲಕ ಹಾಕೊಂಡು ಆಟಾಡ್‌ ತಾವೆ:

ದೊರೆಸ್ವಾಮಿ ಅವರು ಹೋರಾಟ ಮಾಡುವಾಗ ಇವರು ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಅವರ ಹೋರಾಟದ ಫಲ ಇವಕ್ಕೇನು ಗೊತ್ತು. ತಿಲಕ ಫಲಕ ಹಾಕೊಂಡು ಬಂದವೆ, ಆಡ್ತಾವೆ, ಆಡ್ಲಿ ಬನ್ನಿ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ವಿರುದ್ಧ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಇವರನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಕಿಲ್ಲ. ಹಿಂದೆ ಅವರದೇ ಪಕ್ಷದ ಸಿಎಂ ಬಗ್ಗೆ ಏನೇನು ಹೇಳಿದ್ದಾರೆ ಎಂಬುದನ್ನು ನೋಡಿ. ಇವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈ ಮನುಷ್ಯನಿಗೆ ಸ್ವಾತಂತ್ರ ್ಯ ಹೋರಾಟಗಾರರ ಬೆಲೆ ಏನು ಗೊತ್ತು ಎಂದು ಪ್ರಶ್ನಿಸಿದರು.