ಮನೋರಂಜನ್ ಸ್ನೇಹಿತ ಸೂರಪ್ಪ 12 ಗಂಟೆ ವಿಚಾರಿಸಿದ ದೆಹಲಿ ಪೊಲೀಸರು
ಸಂಸತ್ತಿನಲ್ಲಿ ಹೊಗೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಸ್ನೇಹಿತ ಸೂರಪ್ಪನನ್ನು ದೆಹಲಿ ಪೊಲೀಸರು ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಮೈಸೂರು : ಸಂಸತ್ತಿನಲ್ಲಿ ಹೊಗೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಸ್ನೇಹಿತ ಸೂರಪ್ಪನನ್ನು ದೆಹಲಿ ಪೊಲೀಸರು ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ವಿಜಯನಗರದಲ್ಲಿ ಸಲೂನ್ ಶಾಪ್ ಮಾಲೀಕರಾದ ಸೂರಪ್ಪ, ಆರೋಪಿ ಮನೋರಂಜನ್ ಜೊತೆಗೆ ಸಾಕಷ್ಟು ಹಣಕಾಸು ವರ್ಗಾವಣೆ ಮಾಡಿದ್ದಾರೆ. ಹೀಗಾಗಿ, ದೆಹಲಿ ಪೊಲೀಸರು ಗುರುವಾರ ಸೂರಪ್ಪನನ್ನು ವಿಚಾರಿಸಿ, ಹಲವು ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ.
ಮೊದಲಿಗೆ ಸೂರಪ್ಪ ಯಾರು ಎಂದು ಗೊತ್ತೆ ಇಲ್ಲ ಎಂದು ಹೇಳಿದ್ದ ಮನೋರಂಜನ್ ಕುಟುಂಬಸ್ಥರು, ಸೂರಪ್ಪ ಜೊತೆ ಹಣದ ವ್ಯವಹಾರ, ಮೊಬೈಲ್ ಸಂಭಾಷಣೆ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ದರು. ಈ ವೇಳೆ ಸೂರಪ್ಪ ಪರಿಚಯ ಇದೆ ಎಂದು ಮನೋರಂಜನ್ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ.
ವಿಚಾರಣೆ ವೇಳೆ ಹಲವು ಮಾಹಿತಿಯನ್ನ ಸೂರಪ್ಪ ಹಂಚಿಕೊಂಡಿದ್ದು, ಮತ್ತೊಬ್ಬ ಸ್ನೇಹಿತನ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈಕಾರಣದಿಂದ ಶುಕ್ರವಾರ ಮತ್ತೊಬ್ಬ ಸ್ನೇಹಿತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶೂನಲ್ಲಿ ಕುಳಿ ಮಾಡಿಸಿದ್ದರು
ನವದೆಹಲಿ (ಡಿಸೆಂಬರ್ 16, 2023): ಬಿಗಿಭದ್ರತೆಯನ್ನು ಭೇದಿಸಿ ಸಂಸತ್ತಿನೊಳಗೆ ಬಣ್ಣಮಿಶ್ರಿತ ಹೊಗೆಯನ್ನು ಪಸರಿಸುವ ಮೂಲಕ ಆತಂಕ ಮೂಡಿಸಿದ್ದ ಆರೋಪಿಗಳು ಈ ದಾಳಿಗಾಗಿ ಸರ್ವಸಿದ್ಧತೆಯೊಂದಿಗೆ ಬಂದಿದ್ದರು. ಸಂಸತ್ ಭವನದಲ್ಲಿ ಸಂದರ್ಶಕರ ತಪಾಸಣೆ ಕಟ್ಟುನಿಟ್ಟಾಗಿರುವ ಹಿನ್ನೆಲೆಯಲ್ಲಿ ಬಣ್ಣ ಉಗುಳುವ ಡಬ್ಬಿ(ಕ್ಯಾನಿಸ್ಟರ್)ಗಳನ್ನು ಬಚ್ಚಿಡಲು ತಮ್ಮ ಶೂನಲ್ಲಿ ಕುಳಿಗಳನ್ನು ಮಾಡಿದ್ದರು. ಆ ಕುಳಿಯೊಳಗೆ ಕ್ಯಾನಿಸ್ಟರ್ ಇಟ್ಟು, ಅದರ ಮೇಲೆ ದಪ್ಪದಾದ ರಬ್ಬರ್ ಪದರವನ್ನು ಅಂಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳು ಬಳಸಿರುವ ಕ್ಯಾನಿಸ್ಟರ್‌ಗಳು ಚೀನಾ ನಿರ್ಮಿತ. ಅವನ್ನು ಕನ್ನಡಕ ಹಾಗೂ ಕೈಗವಸು ಧರಿಸಿಯೇ ಬಳಸಬೇಕು. ಒಳಾಂಗಣ ಅಥವಾ ಮುಚ್ಚಿದ ಸ್ಥಳಗಳಲ್ಲಿ ಬಳಸುವಂತಿಲ್ಲ ಎಂಬ ಸಂದೇಶ ಕ್ಯಾನಿಸ್ಟರ್ ಮೇಲಿತ್ತು ಎಂದು ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ಮಾಹಿತಿ ಇದೆ.
ಇದನ್ನು ಓದಿ: ‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್? ಸಂಸತ್ ದಾಳಿಗೆ ಪ್ಲ್ಯಾನ್ ಬಿ ಸಹ ಯೋಜಿಸಿದ್ದ ದಾಳಿಕೋರರು!
ಲೋಕಸಭೆಯ ಒಳಗೆ ಕ್ಯಾನಿಸ್ಟರ್‌ಗಳನ್ನು ತೆರೆಯುವ ಸಲುವಾಗಿ ಆರೋಪಿಗಳಾದ ಸಾಗರ್ ಶರ್ಮಾ ಹಾಗೂ ಮನೋರಂಜನ್ ತಮ್ಮ ಶೂಗಳಲ್ಲಿ ವಿಶೇಷ ವಿನ್ಯಾಸ ಮಾಡಿದ್ದರು. ಸಾಗರ್ ಶರ್ಮಾ ತನ್ನ ಎಡಗಾಲಿನ ಎಲ್‌ಸಿಆರ್ ಕಂಪನಿ ನಿರ್ಮಿತ ಬೂದುಬಣ್ಣದ ಸ್ಪೋಟ್ಸ್ ಶೂನಲ್ಲಿ ಕುಳಿಯನ್ನು ನಿರ್ಮಿಸಿದ್ದ. ಹೆಚ್ಚುವರಿ ರಬ್ಬರ್ ಬಳಸಿ ಅದರ ದಪ್ಪವನ್ನು ಹೆಚ್ಚು ಮಾಡಿದ್ದ. ಮನೋರಂಜನ್‌ನ ಎಡಗಾಲಿನ ಶೂನಲ್ಲೂ ಇದೇ ರೀತಿ ಕುಳಿ ಇತ್ತು ಎಂಬ ಮಾಹಿತಿ ಪೊಲೀಸ್ ಸಿಬ್ಬಂದಿಯೊಬ್ಬರ ಮಾಹಿತಿ ಆಧರಿಸಿ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿದೆ. ಈ ಕುಳಿಯ ಒಳಗೆ ಆರೋಪಿಗಳು ಲೋಕಸಭೆಯೊಳಗೆ ಬಣ್ಣ ಉಗುಳುವ ಕ್ಯಾನಿಸ್ಟರ್ ತಂದಿದ್ದರು.
ಈ ನಡುವೆ ಕ್ಯಾನಿಸ್ಟರ್ ಖರೀದಿಸಿದ್ದು ಮಹಾರಾಷ್ಟ್ರದ ಲಾತೂರ್‌ನ ಆರೋಪಿ ಅಮೋಲ್ ಶಿಂಧೆ. ಆತ 1200 ರೂ. ಕೊಟ್ಟು ಮುಂಬೈನಿಂದ 4 ಕ್ಯಾನಿಸ್ಟರ್ ತಂದಿದ್ದ ಎಂದು ಗೊತ್ತಾಗಿದೆ.
ಇದನ್ನು ಓದಿ: ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್ ಶಾ ಮೊದಲ ಪ್ರತಿಕ್ರಿಯೆ