Asianet Suvarna News Asianet Suvarna News

ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಭದ್ರತಾ ಲೋಪವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರತಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ. ಭದ್ರತಾ ಲೋಪದ ಕುರಿತಂತೆ ಅತ್ಯುನ್ನತ ಸಮಿತಿ 15 ರಿಂದ 20 ದಿನಗಳಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ವರದಿಯನ್ನು ಸಲ್ಲಿಸಲಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

union home minister amit shah first reaction on parliament security breach ash
Author
First Published Dec 16, 2023, 9:24 AM IST

ನವದೆಹಲಿ (ಡಿಸೆಂಬರ್ 16, 2023): ಸಂಸತ್ತಿನಲ್ಲಿ ನಡೆದ ‘ಹೊಗೆಬಾಂಬ್‌’ ದಾಳಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿರುವಾಗಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೊದಲ ಬಾರಿ ಮೌನ ಮುರಿದಿದ್ದು, ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಸುಮಾರು 40 ಬಾರಿ ಸಂಸತ್ತಿನಲ್ಲಿ ಭದ್ರತಾ ಲೋಪಗಳು ಆಗಿವೆ. ಪಿಸ್ತೂಲ್‌ ಅನ್ನು ಸದನಕ್ಕೆ ತಂದ, ಸದನದೊಳಗೆ ಜಿಗಿದ, ಕಾಗದಪತ್ರಗಳನ್ನು ತೂರಿದ, ಘೋಷಣೆಗಳನ್ನು ಕೂಗಿದ ಘಟನೆಗಳು ಆಗಿವೆ. ಆಗೆಲ್ಲಾ ಸಂಬಂಧಿಸಿದ ಸ್ಪೀಕರ್‌ ಅವರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಬಾರಿಯೂ ಭದ್ರತಾ ಲೋಪವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರತಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ. ಭದ್ರತಾ ಲೋಪದ ಕುರಿತಂತೆ ಅತ್ಯುನ್ನತ ಸಮಿತಿ 15 ರಿಂದ 20 ದಿನಗಳಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ವರದಿಯನ್ನು ಸಲ್ಲಿಸಲಿದೆ ಎಂದು ಟಿವಿ ಸಂವಾದವೊಂದರಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್:ಪ್ರತಾಪ ಸಿಂಹ, ಅಮಿತ್ ಶಾ ವಿರುದ್ಧ ಆಪ್ ಪ್ರತಿಭಟನೆ

ಹಲವಾರು ಬಾರಿ ದಾಳಿಕೋರರು ಭದ್ರತೆಯನ್ನು ಭೇದಿಸಲು ಹೊಸ ದಾರಿಗಳನ್ನು ಹುಡುಕುತ್ತಾರೆ. ಲೋಪಗಳನ್ನು ಪತ್ತೆಹಚ್ಚುತ್ತಾರೆ. ಇಂತಹ ಯಾವುದೇ ಲೋಪಗಳು ಇರಬಾರದು ಎನ್ನುವುದು ಸರಿ. ಆದರೆ ಅವರು ಅದನ್ನು ಪತ್ತೆ ಹಚ್ಚಿದಾಗ ಅದನ್ನು ಮುಚ್ಚುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ವಿಷಯವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಹೊಗೆ ಬಾಂಬ್‌: ಶಾ ರಾಜೀನಾಮೆಗೆ ವಿಪಕ್ಷ ಆಗ್ರಹ, ಮತ್ತೆ ಕಲಾಪ ಬಲಿ: ದಾಳಿ ಬಗ್ಗೆ ಅಮಿತ್‌ ಶಾ ಹೇಳಿಕೆ, ಸದನದಲ್ಲಿ ಚರ್ಚೆಗೆ ಒತ್ತಾಯ
ಸಂದರ್ಶಕರ ಸೋಗಿನಲ್ಲಿ ಬಂದ ದಾಳಿಕೋರರು ಲೋಕಸಭೆಯಲ್ಲಿ ಹೊಗೆ ಬಾಂಬ್‌ ಸಿಡಿಸಿದ ಭದ್ರತಾ ವೈಫಲ್ಯದ ಕುರಿತು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕು, ಈ ಬಗ್ಗೆ ಉಭಯ ಸದನಗಳಲ್ಲಿ ವಿವರವಾದ ಚರ್ಚೆಯಾಗಬೇಕು ಹಾಗೂ ವೈಫಲ್ಯದ ಹೊಣೆ ಹೊತ್ತು ಅಮಿತ್‌ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಳು ಶುಕ್ರವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದವು.

ಸಂಸತ್‌ ಸ್ಮೋಕ್‌ ಬಾಂಬ್ ದಾಳಿ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಅರೆಸ್ಟ್‌

ಹೀಗಾಗಿ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆಯದೆ ಕಲಾಪವನ್ನು ದಿನದ ಮಟ್ಟಿಗೆ ಮತ್ತೆ ಮುಂದೂಡಲಾಯಿತು. ಗುರುವಾರವೂ ವಿಪಕ್ಷಗಳ ಇದೇ ಪ್ರತಿಭಟನೆಗೆ ಯಾವುದೇ ಕಲಾಪ ನಡೆದಿರಲಿಲ್ಲ.

ಮುಂಜಾನೆ 11 ಗಂಟೆಗೆ ಲೋಕಸಭೆ ಸದನ ಸಭೆ ಸೇರಿದ ಕೂಡಲೇ ಸಂಸತ್ತಿನ ದಾಳಿ ಕುರಿತು ಸರ್ಕಾರದ ವಿರುದ್ಧ ವಿಪಕ್ಷಗಳ ನಾಯಕರು ಜೋರಾಗಿ ಘೋಷಣೆ ಕೂಗತೊಡಗಿದರು. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಸ್ಪೀಕರ್‌ ಕಿರಿತ್‌ ಸೋಲಂಕಿ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಮಧ್ಯಾಹ್ನ ಸಭೆ ಸೇರಿದಾಗಲೂ ವಿಪಕ್ಷಗಳು ಅಮಿತ್‌ ಶಾ ಅವರು ಲೋಕಸಭೆಗೆ ಬರಬೇಕೆಂದು ಒತ್ತಾಯಿಸಿ ವಿಪಕ್ಷಗಳು ಗದ್ದಲ ನಡೆಸಿದವು. ಆಗ ಸೋಲಂಕಿ ಮತ್ತೆ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.

ಸಂಸತ್‌ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?

ಇನ್ನು ಬುಧವಾರ ನಡೆದ ಭದ್ರತಾ ಲೋಪದ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿ ರಾಜ್ಯಸಭೆಯ ವಿಪಕ್ಷ ನಾಯಕರೂ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸ್ಪೀಕರ್‌ ಜಗದೀಪ್‌ ಧನ್‌ಕರ್‌ ಮಧ್ಯಾಹ್ನ 2 ಗಂಟೆಗೆ ಸದನವನ್ನು ಮುಂದೂಡಿದರು. ಮಧ್ಯಾಹ್ನವೂ ವಿಪಕ್ಷಗಳು ಮತ್ತದೇ ಬೇಡಿಕೆಗೆ ಒತ್ತಾಯಿಸಿ ಶಾ ರಾಜೀನಾಮೆಗೆ ಆಗ್ರಹಿಸಿದವು. ಆ ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಇನ್ನು ಭದ್ರತಾ ಲೋಪದ ಕುರಿತು ಚರ್ಚಿಸುವಂತೆ ಸಲ್ಲಿಸಲಾಗಿದ್ದ 23 ನೋಟಿಸ್‌ಗಳನ್ನು ಸ್ಪೀಕರ್‌ ಸ್ವೀಕರಿಸಿಲ್ಲ. ಇದಕ್ಕೆ ವಿರೋಧವಾಗಿ ಆಪ್ ಸಂಸದ ರಾಘವ್‌ ಛಡ್ಡಾ ಮಾಡಿದ ಕೈ ಸನ್ನೆ ವಿರೋಧಿಸಿದ ಧನ್‌ಕರ್‌ ‘ಹೀಗೆ ಮಾಡಬೇಡಿ. ನಿಮ್ಮ ನಾಲಗೆ ಬಳಸಿ’ ಎಂದು ಕಿಡಿಕಾರಿದರು.

Follow Us:
Download App:
  • android
  • ios