Asianet Suvarna News Asianet Suvarna News

Haveri| ನಿರಂತರ ಅಕಾಲಿಕ ಮಳೆ, ಹಿಂಗಾರು ಬಿತ್ತನೆ ವಿಳಂಬ

*  ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಿತ್ಯವೂ ಮಳೆ
*  ಮುಂಗಾರು ಬೆಳೆ ಕಟಾವಿಗೂ ತೊಂದರೆ
*  ಮಳೆಗೆ ಸಿಲುಕಿ ನೆಲಕಚ್ಚಿರುವ ಭತ್ತದ ಪೈರು
 

Delay Sowing Due to Continuous Premature Rain in Haveri grg
Author
Bengaluru, First Published Nov 18, 2021, 2:46 PM IST
  • Facebook
  • Twitter
  • Whatsapp

ನಾರಾಯಣ ಹೆಗಡೆ

ಹಾವೇರಿ(ನ.18):  ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ(Premature Rain) ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ(Sowing) ವಿಳಂಬವಾಗುತ್ತಿದೆ. ಜತೆಗೆ, ಬೆಳೆ ಕಟಾವಿಗೂ ಸಮಸ್ಯೆಯಾಗಿದ್ದು, ಭತ್ತದ ಪೈರು ನೆಲಕಚ್ಚಿ ರೈತರು ನಷ್ಟ ಅನುಭವಿಸುವಂತಾಗಿದೆ.

ದೀಪಾವಳಿ(Deepavali) ಕಳೆದರೂ ಈ ಸಲ ಮಳೆಗಾಲ(Monsoon) ನಿಲ್ಲುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದಿಂದ ನಿತ್ಯವೂ ಮಳೆಯಾಗುತ್ತಿದೆ. ಕೆಲವು ಭಾಗಗಗಳಲ್ಲಿ ಜೋರಾಗಿ, ಇನ್ನು ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಜತೆಗೆ, ನಿತ್ಯವೂ ಮೋಡ ಮುಸುಕಿದ ವಾತಾವರಣ(Cloudy) ಜಿಲ್ಲಾದ್ಯಂತ ಕಂಡುಬರುತ್ತಿದೆ. ತೇವಾಂಶ ಅಧಿಕಗೊಂಡು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ನೆರೆಯಿಂದ ಜಿಲ್ಲೆಯ ರೈತರು(Farmers) ಸಂಕಷ್ಟ ಎದುರಿಸಿದ್ದರು. ಬಳಿಕ ಚೆನ್ನಾಗಿ ಬೆಳೆ(Crop) ಬಂದರೂ ಕಟಾವಿನ ಹಂತದಲ್ಲಿರುವ ಅನೇಕ ಬೆಳೆಗಳು ರೈತರ ಕೈಗೆ ಸಿಗದಂತಾಗಿದೆ. ಹಿಂಗಾರು ಬಿತ್ತನೆ ಈ ವೇಳೆಗಾಗಲೇ ಅರ್ಧ ಮುಗಿಯಬೇಕಿತ್ತು. ಆದರೆ, ಕೆಲವು ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವುದರಿಂದ ರೈತರ ಕೈ ಕಟ್ಟಿ ಹಾಕಿದಂತಾಗಿದೆ.

Karnataka| ಭಾರೀ ಮಳೆಗೆ 7.31 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಬಿತ್ತನೆಗೆ ವಿಳಂಬ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರಿ ಜೋಳ ಬೆಳೆಯುತ್ತಿದ್ದರು. ಅಲ್ಲದೇ ಸೂರ್ಯಕಾಂತಿ, ಶೇಂಗಾ, ಕಡಲೆ, ಹೆಸರು, ಹತ್ತಿ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ನವೆಂಬರ್‌ ತಿಂಗಳಲ್ಲಿ ಹಿಂಗಾರು ಬಿತ್ತನೆ ಕಾರ್ಯ ಅರ್ಧ ಮುಗಿದಿರುತ್ತಿತ್ತು. ಈ ಸಲ ಮಳೆಗಾಲವೇ ಬಿಡುತ್ತಿಲ್ಲ. ಒಂದೆರಡು ದಿನ ಚಳಿಯ ವಾತಾವರಣ ಬಂದು ಮತ್ತೆ ಮಳೆ ಶುರುವಾಗಿದೆ. ಅದರಲ್ಲೂ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ ಕಟಾವು ಮಾಡಿ ರೈತರು ಒಣ ಹಾಕಿದ್ದು, ಕಾಳು ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಹತ್ತಿ ಬಿಡಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಮಳೆಗೆ ಸಿಲುಕಿ ಹತ್ತಿ ಬೆಳೆ ನಾಶವಾಗುತ್ತಿದೆ. ಸದ್ಯ ಸೂರ್ಯಕಾಂತಿ ಬಿತ್ತನೆ ಮಾತ್ರ ಜಿಲ್ಲೆಯಲ್ಲಿ ಆಗಿದೆ.  ರೈತರು ಹಿಂಗಾರಿ ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಯಾವಾಗ ಮಳೆಗಾಲ ಮುಗಿಯುತ್ತದೆ ಎಂದು ಕಾಯುತ್ತ ಕೂತಿದ್ದಾರೆ.

Dharwad| ಅನ್ನದಾತನಿಗೆ ಪೆಟ್ಟಿನ ಮೇಲೆ ಪೆಟ್ಟು, ಬತ್ತದ ಕಣ್ಣೀರು..!

ಭತ್ತ ಬೆಳೆ ಹಾನಿ:

ಜಿಲ್ಲೆಯ ನದಿ ತೀರದ(Bank of River) ಪ್ರದೇಶ ಹಾಗೂ ತುಂಗಾ ಮೇಲ್ದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಕಟಾವಿಗೆ ಬಂದಿದೆ. ಆದರೆ, ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಭತ್ತದ(Paddy) ಪೈರು ನೆಲಕಚ್ಚಿವೆ. ರಾಣಿಬೆನ್ನೂರು ತಾಲೂಕಿನಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ಶಿಗ್ಗಾಂವಿ, ಹಾನಗಲ್ಲ ತಾಲೂಕಿನಲ್ಲೂ ಭತ್ತ ಬೆಳೆ ಹಾನಿಯಾಗಿದೆ. ಕೆಲವು ಕಡೆ ಭತ್ತ ಕಟಾವು ಮಾಡಿದ್ದು, ಬಣವೆ ಹಾಕಲು ಸಾಧ್ಯವಾಗದೇ ಹೊಲದಲ್ಲೇ ಕೊಳೆಯುವಂತಾಗಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರನ್ನು ಹೈರಾಣಾಗಿಸಿದೆ.

ಇನ್ನು ಜಿಲ್ಲೆಯಲ್ಲಿ ತರಕಾರಿ ಬೆಳೆಯನ್ನೂ(Vegetable Crop) ಸಾಕಷ್ಟು ರೈತರು ಬೆಳೆಯುತ್ತಿದ್ದಾರೆ. ಮಳೆಗೆ ಸಿಲುಕಿ ಪುಂಡಿ, ಪಾಲಕ್‌, ಕೊತ್ತಂಬರಿ ಸೊಪ್ಪು ಇನ್ನಿತರ ಬೆಳೆ ಹಾನಿಯಾಗಿದೆ. ಮೆಣಸಿನಕಾಯಿಗೆ ಕೀಟ ಬಾಧೆ ಅಂಟಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ(Agriculture) ಬೆಳೆಗೆ ಸಮಸ್ಯೆಯಾಗಿದೆ. ಅದರಲ್ಲೂ ಹಿಂಗಾರು ಬಿತ್ತನೆಗೆ ವಿಳಂಬವಾಗುತ್ತಿದೆ. ಈಗಾಗಲೇ ಹಿಂಗಾರಿ ಜೋಳ ಬಿತ್ತನೆ ಆಗಬೇಕಿತ್ತು. ರಾಣಿಬೆನ್ನೂರಿನಲ್ಲಿ ಭತ್ತ ಹಾನಿಯಾಗಿರುವ ಕುರಿತು ಮಾಹಿತಿ ಬಂದಿದೆ. ಶೀಘ್ರದಲ್ಲಿ ಹಾನಿ ಸಮೀಕ್ಷೆ ನಡೆಸಲಾಗುವುದು ಎಂದು ಹಾವೇರಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.
 

Follow Us:
Download App:
  • android
  • ios