ಮಡಿಕೇರಿ(ಫೆ.27): ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ಆಗಸ್ಟ್‌ನಲ್ಲಿ ತುಂಬಿ ಹರಿದು ಪ್ರವಾಹ ಸೃಷ್ಟಿ​ಸಿದ ಕಾವೇರಿ ನದಿಯಲ್ಲಿ ಇದೀಗ ನೀರಿನ ಬದಲು ಬಂಡೆ ಕಲ್ಲುಗಳು ಗೋಚರಿಸುತ್ತಿವೆ.

ಕುಶಾಲನಗರ ಸೇರಿದಂತೆ ನದಿ ತಟದ ಹಲವು ಗ್ರಾಮಗಳಿಗೆ ಪ್ರಮುಖವಾಗಿ ಕುಡಿಯುವ ನೀರು ಒದಗಿಸುವ ಕಾವೇರಿಯಲ್ಲಿ ನೀರಿನ ಹರಿವು ಫೆಬ್ರವರಿ ಅಂತ್ಯದಲ್ಲಿಯೇ ತಳಮಟ್ಟಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಅಧಿಕ ಎನ್ನಬಹುದು.

KSRTC ದುಬಾರಿ: ಮಂಗಳೂರಿಂದ ಎಲ್ಲೆಲ್ಲಿಗೆ, ಎಷ್ಟೆಷ್ಟು ದರ..?

ನದಿ ತಟದಲ್ಲಿರುವ ಜಮೀನಿನಲ್ಲಿ ಬಹುತೇಕ ಪಂಪ್‌ಸೆಟ್‌ಗಳು ನದಿಯಿಂದ ನೀರೆತ್ತಲು ಪ್ರಾರಂಭಿಸಿದ್ದು ನದಿಯ ಇನ್ನೊಂದು ಭಾಗದ ಮೈಸೂರು ಜಿಲ್ಲೆಯಲ್ಲಿ ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳಿಗೆ ನೀರು ಹಾಯಿಸುತ್ತಿರುವುದು ನದಿಯ ನೀರಿನ ಹರಿವು ಕ್ಷೀಣವಾಗಲು ಕಾರಣವಾಗಿದೆ. ಇನ್ನೊಂದೆಡೆ ಬೃಹತ್‌ ಕಟ್ಟಡ ಕಾಮಗಾರಿಗಳಿಗೆ ಮತ್ತು ನದಿ ತಟದ ಪ್ರವಾಸಿ ಕೇಂದ್ರಗಳಿಗೆ ಅಕ್ರಮವಾಗಿ ನದಿಯಿಂದ ನೀರು ಹಾಯಿಸುತ್ತಿರುವುದು ನೀರಿನ ಹರಿವಿನ ಕ್ಷೀಣಕ್ಕೆ ಕಾರಣ ಎಂದು ನಾಗರಿಕರು ದೂರಿದ್ದಾರೆ.

ಅನು​ಮತಿ ರಹಿತ ನೀರೆ​ತ್ತುವ ಪ್ರವೃ​ತ್ತಿ:

ಭಾರಿ ಅಶ್ವಶಕ್ತಿಯ ಮೋಟಾರ್‌ ಪಂಪ್‌ಗಳು ಹಗ​ಲಿ​ರು​ಳೆ​ನ್ನದೆ ನದಿಯಿಂದ ನೀರೆತ್ತುತ್ತಿದ್ದು ಬಹುತೇಕ ಮಂದಿ ಇದಕ್ಕೆ ನಿಯಮಾನುಸಾರ ಅನುಮತಿ ಪಡೆದಿಲ್ಲ ಎನ್ನಲಾಗಿದೆ.

ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ತಲೆದೋರದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಸ್ಪಷ್ಟನಿರ್ದೇಶನ ನೀಡಿದ್ದಾರೆ.

ಬಾಂಗ್ಲಾ ವಲಸಿಗರೆಂದು ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ

ಕುಶಾಲನಗರ ಮುಳ್ಳುಸೋಗೆ ವ್ಯಾಪ್ತಿಗೆ ಈಗಾಗಲೆ ಎರಡು ದಿನಕ್ಕೊಂದು ಬಾರಿ ಕುಡಿವ ನೀರು ಸರಬರಾಜು ಮಾಡಲಾಗುತ್ತಿದ್ದು ಪ್ರಸಕ್ತ ಯಾವುದೇ ರೀತಿಯ ಸಮಸ್ಯೆ ತಲೆದೋರಿಲ್ಲ ಎಂದು ಕರ್ನಾಟಕ ನೀರು ಸರಬರಾಜು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಿಂದ ನೀರು ಹಾಯಿಸಬೇಕಾದಲ್ಲಿ ನೀರಾವರಿ ನಿಗಮದ ಕಚೇರಿಯಿಂದ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ. ಅಕ್ರಮ ಸಂಪರ್ಕ ಕಲ್ಪಿಸಿದಲ್ಲಿ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನೀರಾ​ವರಿ ನಿಗಮ ಕಾರ್ಯ​ಪಾ​ಲಕ ಅಭಿ​ಯಂತ​ರ ರಾಜೇ​ಗೌಡ ಹೇಳಿದ್ದಾರೆ.

ಬೈಚನಹಳ್ಳಿ ಬಳಿ ಪಟ್ಟಣಕ್ಕೆ ನೀರೊದಗಿಸಲು ಪಂಪ್‌ ಅಳವಡಿಸಲಾಗಿದ್ದು ಪ್ರತಿ ಬಾರಿ ನೀರಿನ ಕೊರತೆ ಕಂಡುಬಂದಾಗ ನದಿಗೆ ಅಡ್ಡಲಾಗಿ ಬಂಡ್‌ ನಿರ್ಮಿಸುವುದು ವಾಡಿಕೆಯಾಗಿದೆ. ಈ ಬಾರಿ ಶಾಶ್ವತವಾಗಿ ಬಂಡ್‌ ನಿರ್ಮಿಸಲು ಚಿಂತಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ​ಮು​ಖ್ಯಾ​ಧಿ​ಕಾ​ರಿ ಸುಜಯ್‌ ಕುಮಾರ್‌ ಹೇಳಿದ್ದಾರೆ.

-ಕೀರ್ತನಾ ಕುಶಾ​ಲ​ನ​ಗ​ರ