Bengaluru: ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧಕ್ಕೆ ತೀರ್ಮಾನ: ತುಷಾರ್ ಗಿರಿನಾಥ್
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ನಿಷೇಧಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಬೆಂಗಳೂರು (ನ.11): ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ನಿಷೇಧಿಸಲು ಬಿಬಿಎಂಪಿ ತೀರ್ಮಾನಿಸಿದೆ. ಗುರುವಾರ ಈ ಬಗ್ಗೆ ವಿವರಣೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯಲ್ಲಿ 1,400 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆ ಜಾಲವಿದ್ದು, ಈ ರಸ್ತೆಗಳಲ್ಲಿ ವೇಗವಾದ ವಾಹನ ಸಂಚಾರವಿರುತ್ತದೆ.
ಆದರೆ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವುದರಿಂದ ವಾಹನ ಸಂಚಾರಕ್ಕೆ ಮಾತ್ರವಲ್ಲದೇ ಪಾದಚಾರಿಗಳ ಓಡಾಟಕ್ಕೂ ತೊಂದರೆ ಉಂಟಾಗುತ್ತದೆ. ಹೀಗಾಗಿ, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ಹಾಗೂ ಹೈಡೆನ್ಸಿಟಿ ಕಾರಿಡಾರ್‌ನಲ್ಲಿ ಬೀದಿ ಬದಿ ವ್ಯಾಪಾರ ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಪರ್ಯಾಯ ವ್ಯವಸ್ಥೆ: ಬೀದಿ ಬದಿ ವ್ಯಾಪಾರಿಗಳು ವಾರ್ಡ್ ರಸ್ತೆಗಳಲ್ಲಿನ ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೆ ತಡೆಯುಂಟಾಗದಂತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು.
Bengaluru: ವಸತಿ ಜಾಗದಲ್ಲಿ ಅನಧಿಕೃತ ಅಂಗಡಿಗಳಿದ್ದರೆ ಬಂದ್: ಬಿಬಿಎಂಪಿ
ಈ ಕುರಿತು ಶೀಘ್ರದಲ್ಲಿ ಆದೇಶ ಹೊರಡಿಸಲಾಗುತ್ತದೆ. ಅಲ್ಲದೆ, ವಾರ್ಡ್‌ಮಟ್ಟದಲ್ಲಿನ ಸೂಕ್ತ ಸ್ಥಳವನ್ನು ಗುರುತಿಸಿ ಹಾಕರ್ಸ್ ಜೋನ್ (ವ್ಯಾಪಾರಿ ವಲಯ) ಆರಂಭಿಸಲೂ ನಿರ್ಧರಿಸಲಾಗಿದೆ. ಅದರಲ್ಲಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ ಅಥವಾ ಪೆಟ್ಟಿಗೆ ಅಂಗಡಿ ಸ್ಥಾಪಿಸುವುದು ಸೇರಿದಂತೆ ವ್ಯಾಪಾರಕ್ಕೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗುಂಡಿ ಮುಚ್ಚಲು ಡೆಡ್‌ಲೈನ್ 3ದಿನ ಮುಂದಕ್ಕೆ: ಶುಕ್ರವಾರದಿಂದ ಮೂರು ದಿನ ಸರ್ಕಾರಿ ರಜೆಯಿದ್ದರೂ ಬಿಬಿಎಂಪಿಯ ಅಧಿಕಾರಿ ಮತ್ತು ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯ ಮುಂದುವರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗವನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು, ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು.
ಶುಕ್ರವಾರ ಕನಕ ಜಯಂತಿ, ಶನಿವಾರ ತಿಂಗಳ ಎರಡನೇ ಶನಿವಾರ ಹಾಗೂ ಭಾನುವಾರ ವಾರಾಂತ್ಯದ ರಜೆಯಿದೆ. ರಜೆ ಇದೆ ಎಂದು ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯ ನಿಲ್ಲಿಸದೇ, ಈ ಹಿಂದೆ ನಿಗದಿ ಮಾಡಿದಂತೆ ನ. 14ರೊಳಗೆ ನಗರದ ರಸ್ತೆಗಳಲ್ಲಿ ಗುಂಡಿಗಳನ್ನೆಲ್ಲ ಮುಚ್ಚಬೇಕು. ಇಲ್ಲದಿದ್ದರೆ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!
ರಸ್ತೆ ಗುಂಡಿ ಸಂಖ್ಯೆ 31 ಸಾವಿರಕ್ಕೇರಿಕೆ: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದ ಅಂತರದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗುವ ಮೂಲಕ ಒಟ್ಟು ಗುಂಡಿ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನ.27ಕ್ಕೆ 25 ಸಾವಿರಕ್ಕೂ ಅಧಿಕ ಗುಂಡಿ ಪತ್ತೆ ಆಗಿದ್ದವು. ನ.4ರ ವೇಳೆಗೆ 31 ಸಾವಿರಕ್ಕೆ ಏರಿಕೆಯಾಗಿವೆ.