ಮತದಾನದಿಂದ ಹೊರಗೂಳಿಯಲು ಮೈಸೂರು ಕಾಲೋನಿಯ ನಿವಾಸಿಗಳ ನಿರ್ಧಾರ
ಬೆಟ್ಟದಪುರ ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಕಾಲೋನಿಯ ಗ್ರಾಮಸ್ಥರು ಬಂಡೆ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಸರ್ಕಾರ ಹಾಗೂ ತಾಲೂಕು ಆಡಳಿತ ಅವಕಾಶ ಮಾಡಿಕೊಡದ ಹಿನ್ನೆಲೆ ಮತದಾನದಿಂದ ಹೊರಗುಳಿಯಲು ನಿರ್ಧಾರ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಬೆಟ್ಟದಪುರ : ಬೆಟ್ಟದಪುರ ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಕಾಲೋನಿಯ ಗ್ರಾಮಸ್ಥರು ಬಂಡೆ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಸರ್ಕಾರ ಹಾಗೂ ತಾಲೂಕು ಆಡಳಿತ ಅವಕಾಶ ಮಾಡಿಕೊಡದ ಹಿನ್ನೆಲೆ ಮತದಾನದಿಂದ ಹೊರಗುಳಿಯಲು ನಿರ್ಧಾರ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಯಜಮಾನ್ ಮಲ್ಲಯ್ಯ ಮಾತನಾಡಿ, ಬಸವೇಶ್ವರ ಕಾಲೋನಿಯ ಸರ್ವೆ ನಂಬರ್ 7 ರಲ್ಲಿ 38 ಗುಂಟೆ ಜಾಗದಲ್ಲಿ ಸರ್ಕಾರಿ ಕಲ್ಲು ಬಂಡೆ ಎಂದು ಬಸವೇಶ್ವರ ದೇವಾಲಯ ಇದ್ದ ಜಾಗವನ್ನು ಗುರುತಿಸಲಾಗಿತ್ತು, ಅನಾದಿ ಕಾಲದಿಂದಲೂ ಬಸಪ್ಪನ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಆದರೆ ಈ ಜಾಗವು ಈಗ ಮುಸ್ಲಿಂ ಸಮುದಾಯದ ಈದ್ಗಾ ಮೈದಾನಕ್ಕೆ ಎಂದು ದಾಖಲಾತಿಯಲ್ಲಿ ಬದಲಾವಣೆಯಾಗಿದೆ.
ಇದು ಗ್ರಾಮಸ್ಥರ ಯಾರ ಗಮನಕ್ಕೂ ಬಂದಿರುವುದಿಲ್ಲ, ಈ ವಿಚಾರವಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರ ಮಟ್ಟದಲ್ಲಿ ಅರ್ಜಿ ಸಲ್ಲಿಸಿ ಈ ಜಾಗ ನಮಗೆ ಸೇರಬೇಕೆಂದು ಸಾಕಷ್ಟು ಮನವಿ ಮಾಡಿಕೊಂಡಿದ್ದೆವು. ಆದರೆ ಇದಕ್ಕೆ ಯಾವುದೇ ಆಸ್ಪದ ನೀಡದೆ ನಮಗೆ ಬಸವೇಶ್ವರ ದೇವಾಲಯದಲ್ಲಿ ಪೂಜೆ ಮಾಡಲು ಅವಕಾಶ ನೀಡದೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮದ ಯಜಮಾನ ಮಲ್ಲಯ್ಯ ಆರೋಪಿಸಿದರು.
ಅನಾದಿ ಕಾಲದಿಂದಲೂ ಪೂಜೆ ಮಾಡಿಕೊಂಡು ಬಂದ ಬಂಡೆ ಬಸಪ್ಪನ ಮೂರ್ತಿಯನ್ನು ಈ ಹಿಂದೆ ಕಿಡಿಗೇಡಿಗಳು ಕಳ್ಳತನ ಮಾಡಿ ಸ್ವಲ್ಪ ದಿನದ ನಂತರ ಮೂಲ ಸ್ಥಾನವಾದ ಪಕ್ಕದ ಹುಣ್ಣಿಮೆಳೆ ಭಾಗದಲ್ಲಿ ಎಸೆದು ಹೋಗಿದ್ದರು, ಇದರಿಂದ ಗ್ರಾಮಸ್ಥರು ಪ್ರತಿನಿತ್ಯ ಪೂಜೆ ಕಾರ್ಯಕ್ರಮಗಳು ನಡೆಸಬೇಕೆಂದು ನಿರ್ಧರಿಸಿ, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಸವೇಶ್ವರನನ್ನು ಪುನರ್ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ಪ್ರಾರಂಭಿಸಲಾಗಿತ್ತು. ಇದಾದ ಬಳಿಕ ಸರ್ಕಾರದಿಂದ ಆ ಜಾಗದಲ್ಲಿ 144 ಸೆಕ್ಷನ್ ಜಾರಿ ಮಾಡಿ ಅಲ್ಲಿಗೆ ಯಾರು ಸಾರ್ವಜನಿಕರು ಹೋಗದಂತೆ ನಾಮಫಲಕವನ್ನು ಅಳವಡಿಸಿ, ದೈನಂದಿನ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿದರು.
ಇದೇ ವಿಚಾರವಾಗಿ ತಹಸೀಲ್ದಾರ್ ಅವರ ಬಳಿ ಮೂರ್ನಾಲ್ಕು ಬಾರಿ ಅರ್ಜಿ ಸಲ್ಲಿಸಿದರು ಇದುವರೆಗೂ ನಮಗೆ ಯಾವುದೇ ಉತ್ತರ ಸಿಕ್ಕಿಲ್ಲ, ಆದ್ದರಿಂದ ನಾವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಾರದೆಂದು ಗ್ರಾಮಸ್ಥರೆಲ್ಲರೂ ಒಟ್ಟಾಗಿ ತೀರ್ಮಾನ ಮಾಡಿದ್ದೇವೆ ಎಂದು ಗ್ರಾಪಂ ಸದಸ್ಯ ಗಿರಿಗೌಡ ಹಾಗೂ ಗ್ರಾಮದ ಮುಖಂಡ ಕೃಷ್ಣ ನಾಯಕ್ ತಿಳಿಸಿದರು.
ಮುಖಂಡರಾದ ಮಹಾದೇವ್, ಶ್ರೀನಿವಾಸ್, ಬಸವರಾಜ್, ಸುಬ್ರಹ್ಮಣ್ಯ, ಚಂದ್ರು, ಮಲ್ಲಿಕಾರ್ಜುನಾ ಚಾರಿ, ಯೋಗ, ನಂಜುಂಡ , ರವಿ, ಕೃಷ್ಣ ನಾಯಕ್, ಸಂತೋಷ್, ಹರೀಶ್, ಸತೀಶ್, ರವಿ, ಯೋಗಣ್ಣ ಇದ್ದರು.