ಹಿರೇಕೆರೂರು: ಕೊರೋನಾ ಲಸಿಕೆ ಪಡೆದಿದ್ದ ಮಹಿಳೆ ಸಾವು
ಸೋಮವಾರ ಮಧ್ಯಾಹ್ನ ಕೊರೋನಾ ಲಸಿಕೆ ಪಡೆದಿದ್ದ 42 ವರ್ಷದ ಮಹಿಳೆ ಸಾವು| ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದ ಘಟನೆ| ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ| ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ: ಹಾವೇರಿ ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ|
ಹಿರೇಕೆರೂರು(ಏ.07): ಸೋಮವಾರ ಕೊರೋನಾ ಲಸಿಕೆ ಪಡೆದಿದ್ದ ತಾಲೂಕಿನ ಚಿಕ್ಕೇರೂರು ಗ್ರಾಮದ 48 ವರ್ಷದ ಮಹಿಳೆ ಮಂಗಳವಾರ ಮೃತಪಟ್ಟಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ರೇಣುಕಾ ತಳಕಲ್ಲ (48) ಸೋಮವಾರ ಮಧ್ಯಾಹ್ನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿತು. ಮಂಗಳವಾರ ಬೆಳಗ್ಗೆ ತೀವ್ರ ವಾಂತಿ ಭೇದಿ ಆರಂಭವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಚಿಕ್ಕೇರೂರು ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿಂದ ಹಿರೇಕೆರೂರು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಆ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.
ಹಿರೇಕೆರೂರು: ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದ ಸಚಿವ ಪಾಟೀಲ್
ವ್ಯಾಕ್ಸಿನ್ ಹಾಕಿಸಿಕೊಂಡಿದ್ದರಿಂದಲೇ ಮೃತಪಟ್ಟಿದ್ದಾರೆ ಎಂದು ಮೃತ ಮಹಿಳೆಯರ ಸಂಬಂಧಿಕರು ಆರೋಪಿಸಿದ್ದಾರೆ. ಸುಮಾರು 10 ವರ್ಷದಿಂದಲೂ ಸಕ್ಕರೆ ಕಾಯಿಲೆ ಇದ್ದರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಸೋಮವಾರ ಲಸಿಕೆ ಹಾಕಿಸಿಕೊಂಡ ಮೇಲೆಯೇ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು ಎಂದು ಕುಟುಂಬದವರು ಆರೋಪಿಸಿದರು.
ಚಿಕ್ಕೆರೂರು ಗ್ರಾಮದ ಮಹಿಳೆ ಸೋಮವಾರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು ಹೌದು. ಆದರೆ, ಅವರು ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೇ ವಾಂತಿ ಬೇಧಿಯಾಗಿದ್ದು, ಬಹುಶಃ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯೂ ಇದೆ. ಆದರೂ ನಾವು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮಕೈಗೊಂಡಿದ್ದೇವೆ. ವರದಿ ಬಂದ ಮೇಲೆ ಕಾರಣ ತಿಳಿಯಲಿದೆ ಎಂದು ಹಾವೇರಿ ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.