ಹಿರೇಕೆರೂರು(ಏ.03):  ಮನೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡು ವಿವಾದ ಸೃಷ್ಟಿಸಿ ತಾಲೂಕು ಆರೋಗ್ಯಾಧಿಕಾರಿ ಅಮಾನತಿಗೆ ಕಾರಣವಾಗಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕೊನೆಗೂ ಎಚ್ಚೆತ್ತುಕೊಂಡು 2ನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಆಸ್ಪತ್ರೆಗೆ ತೆರಳಿ ಹಾಕಿಸಿಕೊಂಡಿದ್ದಾರೆ.

ಶುಕ್ರವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸ್ವತಃ ಅವರೇ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮಾ. 2ರಂದು ಅವರು ಹಾಗೂ ಅವರ ಪತ್ನಿ ಮನೆಗೇ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರೆಯಿಸಿಕೊಂಡು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. 

ಸಚಿವ ಬಿ.ಸಿ. ಪಾಟೀಲ್‌ ಮನೆಗೆ ಹೋಗಿ ಲಸಿಕೆ, ತಾಲೂಕು ಅಧಿಕಾರಿ ಸಸ್ಪೆಂಡ್‌

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಲಸಿಕಾ ಕೇಂದ್ರದಲ್ಲಿಯೇ ಲಸಿಕೆ ಹಾಕುವ ಬದಲು ಮನೆಗೆ ಹೋಗಿ ಲಸಿಕೆ ಹಾಕುವ ಮೂಲಕ ಕರ್ತವ್ಯ ಲೋಪವೆಸಗಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಝಡ್‌. ಆರ್‌. ಮಕಾನದಾರ ಅವರನ್ನು ಗುರುವಾರ (ಏ.1) ಅಮಾನತು ಮಾಡಿದ್ದರು.