2024ರ ಲೋಕಸಭೆ ಚುನಾವಣೆಯೊಳಗೆ ಮಹದಾಯಿ ಜಾರಿಗೆ ರೈತರಿಂದ ಗಡುವು
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡಿ, ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿವೆ. ಯೋಜನೆ ಜಾರಿ ವಿಳಂಬವಾಗಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಮುಖ ಕಾರಣ: ವೀರೇಶ ಸೊಬರದಮಠ
ಹುಬ್ಬಳ್ಳಿ(ಜು.16): ಕಳಸಾ-ಬಂಡೂರಿ ಯೋಜನೆ ಜಾರಿಯಾಗದಿರಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ನೇರ ಕಾರಣ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯೊಳಗೆ ಯೋಜನೆ ಜಾರಿಯಾಗದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡಿ, ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿವೆ. ಯೋಜನೆ ಜಾರಿ ವಿಳಂಬವಾಗಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಮುಖ ಕಾರಣರು. ಈ ಹಿಂದೆ ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋದಾಗ, ಕಾನೂನು ಹೋರಾಟದ ಮೂಲಕ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ ಎನ್ನುವ ಮೂಲಕ ಹೋರಾಟಗಾರರ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ನಂತರ, ಡಿಪಿಆರ್‌ಗೆ ಅನುಮತಿ ಸಿಕ್ಕಿದೆ ಎಂದು ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತ ಗೋವಾ-ಮಹಾರಾಷ್ಟ್ರ
ಮುಂಬರುವ ಲೋಕಸಭಾ ಚುನಾವಣೆಯೊಳಗೆ ಯೋಜನೆ ಜಾರಿಯಾಗದಿದ್ದರೆ ಜೋಶಿಯವರು ಮಹದಾಯಿ ಯೋಜನೆ ಅನುಷ್ಠಾನದಲ್ಲಿ ಅನುಸರಿಸಿದ ಧೋರಣೆ ಕುರಿತು ಒಂದು ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಜನರಿಗೆ ಹಂಚಲಾಗುವುದು. ಯೋಜನೆ ಜಾರಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.