ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತ ಗೋವಾ-ಮಹಾರಾಷ್ಟ್ರ
ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ ಒಟ್ಟಾಗಿವೆ. ಈ ಬಗ್ಗೆ ಸಭೆಯನ್ನು ನಡೆಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದೆ. ಉಭಯ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ.
ಮುಂಬೈ (ಜೂ.18): ನೆರೆಯ ರಾಜ್ಯ ಗೋವಾದೊಂದಿಗೆ ಯಾವುದೇ ವಿವಾದಗಳಿಲ್ಲ ಎಂದು ಹೇಳಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ತಮ್ಮ ರಾಜ್ಯ ಮತ್ತು ಗೋವಾ ರಾಜ್ಯ ಒಟ್ಟಾಗಿ ಹೋರಾಡಲಿದೆ ಎಂದು ಹೇಳಿದ್ದಾರೆ ಈ ಮೂಲಕ ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಉಭಯ ರಾಜ್ಯಗಳು ಟೊಂಕ ಕಟ್ಟಿ ನಿಂತಿವೆ.
ಮುಂಬೈನಲ್ಲಿ ನಡೆದ ಮಹಾರಾಷ್ಟ್ರದ ಅಣೆಕಟ್ಟು ನೀರಾವರಿ ಯೋಜನೆಯ ಅಂತರರಾಜ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಅವರ ಉಪಸ್ಥಿತಿಯಲ್ಲಿ ಶಿಂಧೆ ಈ ಹೇಳಿಕೆ ನೀಡಿದ್ದಾರೆ. ಅಂತಾರಾಜ್ಯ ಮಹದಾಯಿ ನದಿ ವಿವಾದ ವಿಚಾರದಲ್ಲಿ ಮಹಾರಾಷ್ಟ್ರದ ನಿಲುವಿಗೆ ಪ್ರತಿಕ್ರಿಯಿಸಿದ ಶಿಂಧೆ, “ಗೋವಾ ಮತ್ತು ಮಹಾರಾಷ್ಟ್ರ ಸಹೋದರರು ಮತ್ತು ನಮ್ಮೊಳಗೆ ಯಾವುದೇ ವಿವಾದಗಳಿಲ್ಲ. ನಾವು ಕರ್ನಾಟಕದ ವಿರುದ್ಧ ಒಗ್ಗಟ್ಟಾಗಿ ಹೋರಾಡಲಿದ್ದೇವೆ ಎಂದಿದ್ದಾರೆ.
ಶಿಂಧೆ ಹೇಳಿಕೆಯನ್ನು ಸ್ವಾಗತಿಸಿದ ಗೋವಾ ಸಿಎಂ ಸಾವಂತ್, ನಾವಿಬ್ಬರೂ ಒಟ್ಟಿಗೆ ಇದ್ದರೆ ಗೋವಾಕ್ಕೆ ದೊಡ್ಡ ರೀತಿಯಲ್ಲಿ ಲಾಭವಾಗಲಿದೆ ಎಂದಿದ್ದಾರೆ. ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ಮೂರು ರಾಜ್ಯಗಳು ವಿವಾದದಲ್ಲಿ ತೊಡಗಿವೆ ಮತ್ತು ಕರ್ನಾಟಕವು ಪರಸ್ಪರ ಒಪ್ಪಂದಗಳನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಯೋಜನೆಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂದು ಗೋವಾ ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿದೆ. ಅಂತೂ ದಶಕದ ಬಳಿಕ ನಡೆದ ಅಂತಾರಾಜ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಅಣೆಕಟ್ಟು ನೀರಾವರಿ ಯೋಜನೆ ಹೊರತು ಹೆಚ್ಚು ಮಹದಾಯಿ ಬಗ್ಗೆಯೇ ಚರ್ಚೆ ನಡೆದಿದೆ.
ಮಹದಾಯಿ, ಮೇಕೆದಾಟು ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಕೆಶಿ ತಾಕೀತು
ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ಗೋವಾ ನಡುವೆ ಕಳೆದ ಎರಡು ದಶಕಗಳಿಂದ ವಿವಾದವಿದೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ಮಹಾರಾಷ್ಟ್ರ ಹಾಗೂ ಗೋವಾದಲ್ಲಿನ ಬಿಜೆಪಿ ಸರ್ಕಾರಗಳು ಒಗ್ಗಟ್ಟಾಗಿ ಕರ್ನಾಟಕದ ವಿರುದ್ಧ ಸಮರಕ್ಕೆ ಮುಂದಾಗಿವೆ. ಗೋವಾ ನೀರಿನ ವಿಷಯಲ್ಲಿ ವ್ಯಾಜ್ಯ ಹೊಂದಿದ್ದರೆ, ಮಹಾರಾಷ್ಟ್ರ ಗಡಿ ವಿಚಾರವಾಗಿ ಕರ್ನಾಟಕದೊಂದಿದೆ ವ್ಯಾಜ್ಯದಲ್ಲಿದೆ. ಈಗ ಮಹಾರಾಷ್ಟ್ರವು ಗೋವಾ ರಾಜ್ಯದ ಜೊತೆ ಸೇರಿ ಹೋರಾಟಕ್ಕೆ ಮುಂದಾಗಿದೆ.
ಗೋವಾ-ಮಹಾರಾಷ್ಟ್ರ ಗಡಿಯಲ್ಲಿ ನೆಲೆಗೊಂಡಿರುವ ವಿರ್ಡಿಯಲ್ಲಿನ ಕಟ್ಟಿಕಾ ಉಪನದಿಯ ಮೂಲಕ ವಲ್ವಂತಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಯೋಜಿಸಿದೆ. ಏಪ್ರಿಲ್‌ನಲ್ಲಿ ವಿರ್ಡಿ ಅಣೆಕಟ್ಟಿನ ಕೆಲಸವನ್ನು ಪ್ರಾರಂಭಿಸಲು ತನ್ನ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿದೆ. ಆದರೆ, ಗೋವಾ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.
ಗಡಿ ವಿವಾದ ಬಳಿಕ, ಮಹದಾಯಿ ವಿಚಾರದಲ್ಲೂ 'ಮಹಾ'ಪುಂಡಾಟ: ಗೋವಾಗೆ ಸಿಎಂ ಶಿಂದೆ ಸಾಥ್
ಇದಕ್ಕೂ ಮೊದಲು, ಜನವರಿಯಲ್ಲಿ, ಮಹದಾಯಿ ನದಿಯ ಮೇಲಿನ ಕಳಸಾ-ಭಂಡೂರಿ ಯೋಜನೆಗೆ ಕರ್ನಾಟಕದ ಡಿಪಿಆರ್ ಅನ್ನು ಕೇಂದ್ರವು ಅನುಮೋದಿಸಿತು. ಗೋವಾದಲ್ಲಿ ಮಾಂಡೋವಿ ನದಿ ಎಂದು ಕರೆಯಲಾಗುವ ನದಿ ಕರ್ನಾಟಕದಲ್ಲಿ ಮಹದಾಯಿ ನದಿಯಾಗಿದೆ. ಗೋವಾದ ಉತ್ತರ ಭಾಗಗಳಲ್ಲಿ ಜೀವನಾಡಿ ಎಂದು ಪರಿಗಣಿಸಲಾಗಿದೆ. ಇದು ಕರ್ನಾಟಕದಲ್ಲಿ ಹುಟ್ಟಿ ಗೋವಾದ ಪಂಜಿಮ್‌ನಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ, ಮಹಾರಾಷ್ಟ್ರದ ಮೂಲಕ ಇದು ಹರಿಯುತ್ತದೆ.
ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ಜಲ ವಿವಾದವನ್ನು 2018 ರಲ್ಲಿ ನ್ಯಾಯಮಂಡಳಿ ಇತ್ಯರ್ಥಪಡಿಸಿತು, ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ನಿರ್ಧಾರವನ್ನು 2020 ರಲ್ಲಿ ಕೇಂದ್ರ ಸರ್ಕಾರವು ಸೂಚಿಸಿದೆ. ಕರ್ನಾಟದಕದ ಪಾಲಿಗೆ ದೊರೆತ ನೀರು 5.5 ಟಿಎಂಸಿ ಕುಡಿಯುವ ನೀರಿನ ಪೂರೈಕೆ ಹಾಗೂ 8.02 ಟಿಎಂಸಿ ನೀರು ಜಲವಿದ್ಯುತ್ ಉತ್ಪಾದನೆಗೆ ಎಂದು ಹಂಚಿಕೆಯಾಗಿತ್ತು. ಹೀಗಿದ್ದರೂ ಈಗ ಮತ್ತೆ ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಯೋಜನೆ ಹಾಕಿಕೊಂಡಿದೆ.