ಚಿತ್ರದುರ್ಗ (ಜು.18): ಮಧ್ಯಾಹ್ನದ ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥರಾದ ಘಟನೆ ನಾಯಕನಹಟ್ಟಿ ಚನ್ನಬಸಯ್ಯನಹಟ್ಟಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶಾಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಎಂದಿನಂತೆ ಮಧ್ಯಾಹ್ನ 12.40ರ ಸುಮಾರಿಗೆ ಬಿಸಿಯೂಟ ಸೇವಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯೊಬ್ಬ ತಟ್ಟೆಯಲ್ಲಿ ಹಲ್ಲಿ ಸತ್ತುಬಿದ್ದಿರುವುದನ್ನು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಶಿಕ್ಷಕರು ಶಾಲೆಯ ಮಕ್ಕಳ ಊಟ ಮಾಡುವುದನ್ನು ತಡೆದಿದ್ದಾರೆ.

ಹಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಒಂದಿಬ್ಬರು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ನಂತರ ಇದು ಇತರೆ ಮಕ್ಕಳಿಗೂ ವ್ಯಾಪಿಸಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕರ್ತವ್ಯನಿರತ ವೈದ್ಯ ಡಾ.ವಿಕಾಸ್‌ ಶಾಲೆಗೆ ತೆರಳಿ 40 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಅವರೆಲ್ಲರನ್ನೂ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳಿಸಿದರು. 6ರಿಂದ 8ಜನ ವಿದ್ಯಾರ್ಥಿಗಳನ್ನು 108 ಆರೋಗ್ಯ ಕವಚ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

ಬಿಸಿಯೂಟ ಸೇವಿಸಿ 82 ವಿದ್ಯಾರ್ಥಿಗಳು ಅಸ್ವಸ್ಥ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಿದರು. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ ಎಂದೂ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ತಹಸೀಲ್ದಾರ್‌ ಎಂ.ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಡಿ.ಭೂತಪ್ಪ, ಉಪತಹಸೀಲ್ದಾರ್‌ ಟಿ.ಜಗದೀಶ್‌, ಮುಖಂಡರಾದ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ, ಎಂ.ವೈ.ಟಿ.ಸ್ವಾಮಿ, ಪಪಂ ಸದಸ್ಯರು ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.