Asianet Suvarna News Asianet Suvarna News

ಭಾರತ್‌ ಲಾಕ್‌ಡೌನ್‌: ತೆಪ್ಪಗೆ ಮನೇಲಿರ್ತೀರಾ..ಜೈಲಿಗೆ ಹೋಗ್ತಿರಾ?

ಜನರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ಡಿಸಿಪಿ ಸೀಮಾ ಲಾಟ್ಕರ್‌|ಕೊರೋನಾ ವೈರಸ್‌ ಭೀತಿಯಿಂದ ಇಡೀ ಜಗತ್ತೆ ಬೆಚ್ಚಿ ಬಿದ್ದಿದೆ|  ಹಳೆಯ ಚಾಳಿಯನ್ನೇ ಮುಂದುವರೆಸಿದ ಜನರು| ಜವಾಬ್ದಾರಿಯಿಂದ ವರ್ತಿಸುವುದನ್ನು ನಮ್ಮ ಜನ ಕಲಿಯಬೇಕಿದೆ|

DCP of the Law and Order Department Seema Latkar Talks Over India LockDown
Author
Bengaluru, First Published Apr 11, 2020, 11:14 AM IST

ಬೆಳಗಾವಿ(ಏ.11): ಮಹಾಮಾರಿ ಕೋರೊನಾ ವೈರಸ್‌ನಿಂದಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಆದೇಶ ಮುಕ್ತಾಯವಾಗುವವರೆಗೂ ಸಾರ್ವಜನಿಕರು ತೆಪ್ಪಗೆ ಮನೆಯಲ್ಲಿರಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ತಿರುಗಾಡಿದಲ್ಲಿ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಸುಮ್ಮನೇ ಮನೆಯಲ್ಲಿರುತ್ತಾರಾ ಅಥವಾ ಜೈಲಿನಲ್ಲಿರುತ್ತಾರಾ ಎಂಬುವುದನ್ನು ಜನರೇ ನಿರ್ಧರಿಸಲಿ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್‌ ಜನರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಚನ್ನಮ್ಮ ಪಡೆಯೊಂದಿಗೆ ಅನಾವಶ್ಯಕವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸುವ ಕಾರ್ಯಾಚರಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜನರಲ್ಲಿ ಕೊರೋನಾ ವೈರಸ್‌ನಿಂದಾಗುವ ಅನಾಹುತಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರು ಮಾತ್ರ ಮನೆಯಲ್ಲಿರದೇ ಹೊರಗೆ ತಿರುಗಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಹಲವು ಬಾರಿ ಜಾಗೃತಿ ಮೂಡಿಸಲಾಗಿತ್ತು. ಬಾಯಿ ಮಾತಿಯಿಂದ ಹೇಳಿದ್ದಲ್ಲಿ ಕೇಳುವುದಿಲ್ಲ ಎಂಬುದಾದರೇ ಪೊಲೀಸರು ತಮ್ಮ ಕಾರ್ಯವನ್ನು ಯಾವುದೇ ಮುಲಾಜಿಲ್ಲದೇ ಕೈಗೆತ್ತಿಕೊಳ್ಳುತ್ತಾರೆ. ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುವವರನ್ನು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಜನರೇ ತಾವು ಮನೆಯಲ್ಲಿರಬೇಕಾ ಅಥವಾ ಜೈಲಿನಲ್ಲಿರಬೇಕಾ ಎಂಬುವುದನ್ನು ತೀರ್ಮಾನಿಸಲಿ ಎಂದು ಕಠಿಣ ಸಂದೇಶ ನೀಡಿದರು.

ಕೊರೋನಾ ಹೊಡೆತಕ್ಕೆ ನಲುಗಿದ ಬ್ಯಾಂಕ್‌ಗಳು!

ಬೆಳಗಾವಿ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಆರು ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿರುವುದರಿಂದ ಈಗಾಗಲೇ ಬೆಳಗುಂದಿ, ಹಿರೇಬಾಗೇವಾಡಿ ಮತ್ತು ಕ್ಯಾಂಪ್‌ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶವನ್ನಾಗಿ ಘೋಷಣೆ ಮಾಡಿದ್ದೇವೆ. ಅದೇ ರೀತಿ ಹೊರಗೆ ಮತ್ತು ಒಳಗೆ ಹೋಗುವುದನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಿದ್ದೇವೆ. ಅಲ್ಲದೇ ಇದನ್ನು ಹೊರತುಪಡಿಸಿ ನಗರದಲ್ಲಿ ಜನರು ಹೊರಗಡೆ ತಿರುಗಾಡುವುದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮಗಳನ್ನು ನಮ್ಮ ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ. ಜನರು ಮಹಾಮಾರಿ ಕೊರೋನಾ ಬಗ್ಗೆ ಇನ್ನೂ ಗಂಭೀರವಾಗಿ ವರ್ತಿಸಬೇಕಿದೆ ಸುಮ್ಮನೇ ಸುಮ್ಮನೇ ಹೊರಗೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಶನಿವಾರದಿಂದ ಕೇಸ್‌ ಹಾಕಿ ಜೈಲಿಗೆ ಕಳಿಸುತ್ತೇವೆ ಎಂದರು.

ಕೊರೋನಾ ವೈರಸ್‌ ಭೀತಿಯಿಂದ ಇಡೀ ಜಗತ್ತೆ ಬೆಚ್ಚಿ ಬಿದ್ದಿದೆ. ಹೀಗಾಗಿ ಮನೆಯಲ್ಲಿಯೇ ಇರುವಂತೆ ಸರ್ಕಾರ ಅಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರೂ ಜನರು ಮಾತ್ರ ಹಳೆಯ ಚಾಳಿಯನ್ನೇ ಮುಂದುವರೆಸುತ್ತಿದ್ದಾರೆ. ಹೀಗಾಗಿ ಕಠಿಣ ನಿರ್ಧಾರಕ್ಕೆ ಬಂದಿದ್ದು. ಇನ್ಮುಂದೆ ಜನರು ಜವಾಬ್ದಾರಿಯಿಂದ ವರ್ತಿಸುವುದನ್ನು ನಮ್ಮ ಜನ ಕಲಿಯಬೇಕಿದೆ. ಇಲ್ಲವಾದಲ್ಲಿ ನಾಳೆಯಿಂದ ಹೊರಗೆ ಬರುವವರಿಗೆ ಜೈಲು ಗ್ಯಾರಂಟಿ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್‌ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios