Asianet Suvarna News Asianet Suvarna News

ಯಡಿಯೂರಪ್ಪ ಅಸಮರ್ಥ ಎಂಬ ಡಿಕೆಶಿ ಆರೋಪಕ್ಕೆ ಡಿಸಿಎಂ ಸವದಿ ಪ್ರತಿಕ್ರಿಯೆ

ವರಿಷ್ಠರ ಸಲಹೆ ಪಡೆದೇ ಖಾತೆ ಬದಲಿಸಿದ ಸಿಎಂ| ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ವರ್ಷ ಡಿ.ಕೆ.ಶಿವಕುಮಾರ ಅವರನ್ನು ಏಕೆ ಸೇರಿಸಿಕೊಂಡಿರಲಿಲ್ಲ. ಹಾಗಾದರೆ, ಡಿಕೆಶಿ ಅವರು ಅಸಮರ್ಥರು ಅನ್ನುವ ಕಾರಣಕ್ಕೆ ಬಿಟ್ಟಿದ್ದರಾ ಎಂದು ಪ್ರಶ್ನಿಸಿದ ಸವದಿ| 

DCM Laxman Savadi Reacts Over D K Shivakumar Statement grg
Author
Bengaluru, First Published Oct 15, 2020, 2:36 PM IST
  • Facebook
  • Twitter
  • Whatsapp

ಬೆಳಗಾವಿ(ಅ.15): ಪಕ್ಷದ ವರಿಷ್ಠರ ಸಲಹೆ ಪಡೆದುಕೊಂಡೇ ಸಿಎಂ ಯಡಿಯೂರಪ್ಪ ಕೆಲ ಸಂಪುಟ ಸಹೋದ್ಯೋಗಿಗಳ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆಗಳ ಬದಲಾವಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ವರಿಷ್ಠರ ಜೊತೆಗೆ ಚರ್ಚಿಸಿಯೇ ಸಿಎಂ ಯಡಿಯೂರಪ್ಪ ಈ ಕ್ರಮ ಕೈಗೊಂಡಿದ್ದಾರೆ ಎಂದರು.
ಖಾತೆ ಬದಲಾವಣೆ ಮಾಡಿರುವ ಯಡಿಯೂರಪ್ಪ ಸಿಎಂ ಆಗಲು ಸಮರ್ಥರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಲಾಖೆ ಬದಲಾವಣೆ ಮಾಡಿದರೆ ಅಸಮರ್ಥರು ಎಂದಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ವರ್ಷ ಡಿ.ಕೆ.ಶಿವಕುಮಾರ ಅವರನ್ನು ಏಕೆ ಸೇರಿಸಿಕೊಂಡಿರಲಿಲ್ಲ. ಹಾಗಾದರೆ, ಡಿಕೆಶಿ ಅವರು ಅಸಮರ್ಥರು ಅನ್ನುವ ಕಾರಣಕ್ಕೆ ಬಿಟ್ಟಿದ್ದರಾ ಎಂದು ಪ್ರಶ್ನಿಸಿದರು.

ಆರ್‌ಆರ್‌ ನಗರ ಮತ್ತು ಶಿರಾ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶಗಳಿವೆ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ಮನೋಭಾವ ರಾಜ್ಯದ ಜನರಿಗಿದೆ. ಕ್ಷೇತ್ರದ ಮತದಾರರ ಒಲವು ಬಿಜೆಪಿ ಕಡೆಗೆ ಇದೆ ಎಂದು ಹೇಳಿದರು.

ಇಲ್ಲಿ ಮಳೆ ಬಂದರೆ ಜನರ ಬದುಕು ದುಸ್ತರ; ಇವರ ಗೋಳು ಕೇಳೋರೇ ಇಲ್ಲ..!

ಕೊರೋನಾ ಸೋಂಕಿನಿಂದ ಮೃತಪಟ್ಟ ಸಾರಿಗೆ ಇಲಾಖೆಯ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ಪರಿಹಾರ ಒದಗಿಸಲಾಗುವುದು. ಈ ಸಂಬಂಧ ಆರ್ಥಿಕ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಹಣಕಾಸಿನ ತೊಂದರೆಯಿಂದಾಗಿ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಐವತ್ತು ಜನ ಸಿಬ್ಬಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಪ್ರತಿ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ತಲುಪಿಸಲಾಗುವುದು ಎಂದರು.

ಕೊರೋನಾ ಪರಿಣಾಮ ಸಾರಿಗೆ ಇಲಾಖೆ ಈಗಲೂ ನಷ್ಟದಲ್ಲಿದೆ. ಈಗ ಬರುತ್ತಿರುವ ಆದಾಯ ಡೀಸೆಲ್‌ಗೆ ಮಾತ್ರ ಸಾಲುತ್ತಿದೆ. ಆದಾಯ ಇಲ್ಲ ಅಂತ ಬಸ್‌ಗಳನ್ನು ಸ್ಥಗಿತಗೊಳಿಸಲು ಆಗುವುದಿಲ್ಲ. ಮೂರು ಸಾವಿರ ಕೋಟಿಗೂ ಅಧಿಕ ನಷ್ಟವನ್ನು ಸಾರಿಗೆ ಇಲಾಖೆ ಅನುಭವಿಸುತ್ತಿದೆ. ಹೀಗಾಗಿ ಸಿಬ್ಬಂದಿ ಸಂಬಳ ಎಂಟು, ಹತ್ತು ದಿನ ತಡ ಆಗುತ್ತಿದೆ. ಸದ್ಯ ಸಾರಿಗೆ ಇಲಾಖೆಯಲ್ಲಿ 1 ಲಕ್ಷ 30 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷ ಮತ್ತು ಪ್ರಸಕ್ತ ಸಾಲಿನ ಅತಿವೃಷ್ಟಿ ಪರಿಹಾರ ಕುರಿತು ಸಿಎಂ ಗಮನಕ್ಕೆ ತರಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡುತ್ತಿವೆ. ರೈತರ ಬಗ್ಗೆ ಸಿಎಂ ಕಾಳಜಿ ಹೊಂದಿದ್ದಾರೆ. ಆದರೆ, ಪರಿಸ್ಥಿತಿ ಯಡಿಯೂರಪ್ಪರನ್ನು ಕಟ್ಟಿ ಹಾಕಿದೆ. ಸರ್ಕಾರಕ್ಕೆ ಬರುತ್ತಿರುವ ಆದಾಯದಲ್ಲಿ ಕೊರತೆ ಆದಾಗ ತಕ್ಷಣ ಪರಿಹಾರ ಕೊಡಲು ಕಷ್ಟವಾಗಿದೆ. ಕೊರೋನಾದಿಂದ ಆರ್ಥಿಕ ವ್ಯವಸ್ಥೆ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 33 ಸಾವಿರ ಕೋಟಿ ಸಾಲ ಕೊಡಲು ಮುಂದಾಗಿದೆ. ಹಣ ಬಂದ ಕೂಡಲೇ ಎಲ್ಲ ವ್ಯವಸ್ಥೆಗಳು ಸುಗಮವಾಗಲಿವೆ ಎಂದು ತಿಳಿಸಿದರು.
 

Follow Us:
Download App:
  • android
  • ios