Asianet Suvarna News Asianet Suvarna News

ಬೆಳಗಾವಿಯಲ್ಲಿ ಭಾರೀ ಮಳೆ: 51 ಗ್ರಾಮ ಜಲಾವೃತ..!

* 47 ರಸ್ತೆ ಸಂಚಾರ ಬಂದ್‌
* 224 ಮನೆಗಳಿಗೆ ಭಾಗಶಃ, ಒಂದು ಮನೆಗೆ ಪೂರ್ಣ ಹಾನಿ
* ಜೀವಹಾನಿ ತಡೆಯಲು ಸಿಎಂ ಸೂಚನೆ

DCM Govind Karjol Talks Over Flood in Belagavi District grg
Author
Bengaluru, First Published Jul 24, 2021, 11:56 AM IST

ಬೆಳಗಾವಿ(ಜು.24): ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಜಿಲ್ಲೆಯಲ್ಲಿ 47 ರಸ್ತೆ ಸಂಚಾರ ಸ್ಥಗಿತಗೊಂಡು, 51 ಗ್ರಾಮಗಳು ಜಲಾವೃತಗೊಂಡಿವೆ ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 224 ಮನೆಗಳು ಭಾಗಶಃ ಹಾಗೂ ಒಂದು ಮನೆ ಸಂಪೂರ್ಣ ಕುಸಿದಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿರುವುದರಿಂದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿ 47 ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಅಲ್ಲದೇ 36 ಸೇತುವೆ ಮುಳುಗಡೆಯಾಗಿವೆ. ಅದೇ ರೀತಿ ಭೂಕುಸಿತದಿಂದ ನಿಪ್ಪಾಣಿಯ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿರುತ್ತದೆ. ಕಳೆದ 24 ಗಂಟೆಗಳಲ್ಲಿ 6 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 66 ಮಿ.ಮೀ. ಮಳೆಯಾಗಿರುವುದರಿಂದ ತೊಂದರೆಯಾಗಿದೆ. ಜಿಲ್ಲೆಯ ಐದು ತಾಲೂಕುಗಳ 51 ಗ್ರಾಮಗಳಲ್ಲಿ ನೀರು ನುಗ್ಗಿದೆ. 26 ಕಾಳಜಿ ಕೇಂದ್ರ 2000 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.

ಖಾನಾಪುರ ತಾಲೂಕಿನಲ್ಲಿ ವಿದ್ಯುತ್‌ ಅಪಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ಅದೇ ರೀತಿ 223 ಮನೆಗಳಿಗೆ ಭಾಗಶಃ ಹಾನಿ, ಒಂದು ಮನೆ ಸಂಪೂರ್ಣ ಕುಸಿತವಾಗಿದೆ. ಮನೆ ಹಾನಿಗೂ ಸೂಕ್ತ ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದರು.

ನೆರೆ ಪರಿಹಾರಕ್ಕೆ ಏನೆಲ್ಲ ಕ್ರಮ? ಅಶೋಕ ಮಾಹಿತಿ

ರಸ್ತೆ ದುರಸ್ತಿಗೆ 50 ಕೋಟಿ ಬಿಡುಗಡೆಗೆ ಮನವಿ:

ರಸ್ತೆ, ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳ ದುರಸ್ತಿಗೆ ಬೆಳಗಾವಿ ಉತ್ತರ ಕನ್ನಡ ಸೇರಿ ಲೋಕೋಪಯೋಗಿ ಇಲಾಖೆಗೆ ತಕ್ಷಣ 50 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದರು.

ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಬೆಳಗಾವಿ ಹಾಗೂ ಬಾಗಲಕೋಟೆಗೆ ತಲಾ ಇನ್ನೊಂದು ಎನ್‌ಡಿಆರ್‌ಎಫ್‌ ತಂಡ ನಿಯೋಜಿಸಬೇಕು. ಸದ್ಯಕ್ಕೆ 95 ಸಾವಿರ ಕ್ಯುಸೆಕ್‌ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದ್ದು, ಇದರಿಂದ ಬಾಗಲಕೋಟೆಗೂ ಪ್ರವಾಹ ಭೀತಿ ಎದುರಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಸಾವಿರ ಕೋಟಿ ರುಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಿದರು.

ಕಲ್ಲೋಳ ಬ್ಯಾರೇಜ್‌ ಕಾಮಗಾರಿಗೆ ಮಂಜೂರಾತಿ ನೀಡಿ:

ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ ನಿರ್ಮಾಣಕ್ಕೆ  35 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಈಗಾಗಲೇ ಕಲ್ಲೋಳ ಬ್ಯಾರೇಜ್‌ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ವಿವರಿಸಿದರು.
ಹಣಕಾಸು ಇಲಾಖೆಯಿಂದ ತಕ್ಷಣ ಮಂಜೂರಾತಿ ನೀಡಬೇಕು. ಅನುಮೋದನೆ ದೊರೆತರೆ ಅಕ್ಟೋಬರ್‌ನಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಕಾರಜೋಳ ತಿಳಿಸಿದರು.

ಬೆಳಗಾವಿ ಪ್ರವಾಹ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಕಡಿಮೆಯಾದರೆ ಸದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಸ್ವಲ್ಪಮಟ್ಟಿಗೆ ತೊಂದರೆಯಾಗಲಿದೆ ಎಂದು ಸಚಿವ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಆಲಮಟ್ಟಿ ಜಲಾಶಯಕ್ಕೆ ಸದ್ಯಕ್ಕೆ 1.50 ಲಕ್ಷ ಕ್ಯುಸೆಕ್‌ ಒಳಹರಿವು ಇದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ತಡೆಗಟ್ಟುವ ಉದ್ದೇಶದಿಂದ 3 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಮೂರು ದಿನಗಳವರಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಪ್ರಾದೇಶಿಕ ಆಯುಕ್ತ ಆಮ್ಲಾನ ಆದಿತ್ಯ ಬಿಸ್ವಾಸ್‌, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಬೆಳಗಾವಿ ಪೊಲೀಸ್‌ ಆಯುಕ್ತ ಡಾ.ಕೆ.ತ್ಯಾಗರಾಜನ್‌, ಜಿಪಂ ಸಿಇಒ ದರ್ಶನ ಎಚ್‌.ವಿ., ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಡಿಸಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಮತ್ತಿತರರು ವಿಡಿಯೋ ಸಂವಾದದಲ್ಲಿ ಇದ್ದರು.

ಬೆಳಗಾವಿ ಮಳೆಗೆ ಉರುಳಿ ಬಿದ್ದ ಮನೆಗಳು..ಎಲ್ಲೆಲ್ಲೂ ನೀರು

ಜೀವಹಾನಿ ತಡೆಯಲು ಸಿಎಂ ಸೂಚನೆ

ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿರುವುದರಿಂದ ಯಾವುದೇ ಸಾವು-ನೋವುಗಳಾಗದಂತೆ ಅಧಿಕಾರಿಗಳು 24 ಗಂಟೆಯೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ತುರ್ತು ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಿಲ್ಲ; ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೆ ತಕ್ಷಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ಅತಿವೃಷ್ಟಿ ಹಿನ್ನೆಲೆಯಲ್ಲಿ ಪ್ರವಾಹ ಸನ್ನದ್ಧತೆಗಳ ಕುರಿತು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶುಕ್ರವಾರ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಮಳೆಯಿಂದ ಸ್ಥಗಿತಗೊಂಡಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಜನರ ಸಂಚಾರಕ್ಕೆ ಆದ್ಯತೆ ಮೇರೆಗೆ ಮೊದಲು ರಸ್ತೆಗಳನ್ನು ಮುಕ್ತಗೊಳಿಸಬೇಕು. ಯಾವುದೇ ಸಾವು-ನೋವು ಉಂಟಾಗದಂತೆ ಕ್ರಮಕೈಗೊಳ್ಳಬೇಕು ಎಂದು ಡಿಸಿಗೆ ಸೂಚನೆ ನೀಡಿದರು.
 

Follow Us:
Download App:
  • android
  • ios