ವಿಜಯಪುರ(ಜ.13): ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತದಿಂದಾಗಿ ಪಂಚಾಯತ್‌ ರಾಜ್‌ ವ್ಯವಸ್ಥೆ ಹಾಳಾಗಿದೆ. ಹೀಗಾಗಿ ಸ್ವಾತಂತ್ರ್ಯ ಸೇನಾನಿಗಳು ಹಾಗೂ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯ ಹಾಗೂ ರಾಮ ರಾಜ್ಯದ ಕನಸು ನನಸಾಗಲಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.

ನಗರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಸಂಜೆ ಜನಸೇವಕ ಸಮಾವೇಶವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪಂಚಾಯತ್‌ ರಾಜ್‌ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿಯಿತು. ಇದರಿಂದಾಗಿ ಗ್ರಾಮ ಸ್ವರಾಜ್ಯ ಕನಸು ಇನ್ನೂ ನನಸಾಗಿಲ್ಲ ಎಂದು ವಿಷಾದಿಸಿದರು.

ಪಂಚಾಯತ್‌ ರಾಜ್‌ ಬಲಪಡಿಸುವುದು, ರಾಮರಾಜ್ಯ ನಿರ್ಮಾಣದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಸೇನಾನಿಗಳು ಕಂಡ ಕನಸು ಕಾಂಗ್ರೆಸ್‌ ದುರಾಡಳಿತದಿಂದ ಇಂದಿಗೂ ನನಸಾಗಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ ಸ್ವರಾಜ್ಯ ಹಾಗೂ ರಾಮರಾಜ್ಯದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ ಎಂದರು.

ಈ ಹಿಂದೆ ರಾಜೀವ ಗಾಂಧಿ ಅವರೇ ಹೇಳಿದಂತೆ, ನವದೆಹಲಿಯಲ್ಲಿ .1 ಅನುದಾನ ಬಿಡುಗಡೆಯಾದರೆ ಅದು ಗ್ರಾಮಕ್ಕೆ ತಲುಪುವಷ್ಟರಲ್ಲಿ 15 ಪೈಸೆಯಾಗುತ್ತದೆ ಎಂದು ಹೇಳಿದ್ದರು. ಸರ್ಕಾರದ ಪ್ರತಿಯೊಂದು ಯೋಜನೆಯನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ವಿಶೇಷ ವ್ಯವಸ್ಥೆಯನ್ನು ಪ್ರಧಾನಿ ರೂಪಿಸಿದ್ದಾರೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ತಲುಪುವಂತೆ ಮಾಡಿದ್ದಾರೆ ಎಂದರು.

ಪ್ರಮಾಣವಚನ ಸ್ವೀಕಾರಕ್ಕೆ ಸಿಎಂ ಫೋನ್ ಕಾಲ್: ನನ್ನ ಕರೆನ್ಸಿ ಖಾಲಿಯಾಗಿದೆ ಎಂದ ಯತ್ನಾಳ್

ಗ್ರಾಪಂ ಸದಸ್ಯರಿಗೆ ಅನೇಕ ರೀತಿಯ ಅಧಿಕಾರ ಹಾಗೂ ಜವಾಬ್ದಾರಿಗಳಿವೆ. ರಸ್ತೆ ನಿರ್ಮಾಣ, ಶೌಚಾಲಯ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಅದೇ ತೆರನಾಗಿ ಅಂತರ್ಜಲ ಇಂದು ಕುಸಿಯುತ್ತಿದೆ. ಈ ಅಂತರ್ಜಲ ಪ್ರಮಾಣ ಹೆಚ್ಚಿಸಲು ಗ್ರಾಮದಲ್ಲಿ ಮಳೆ ನೀರಿನ ಕೊಯ್ಲು, ಬಾಂದಾರ್‌ ನಿರ್ಮಾಣ, ಕೆರೆ-ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೋಟಿ ಕೋಟಿ ಹಣ ನರೇಗಾ ಯೋಜನೆಯಡಿ ಹರಿದು ಬರುತ್ತಿದೆ. ಹೀಗಾಗಿ ಇದು ಕಷ್ಟವೇನಲ್ಲ, ಮಂತ್ರಿಗಳಿಗೆ ಚೆಕ್‌ ಸಹಿ ಮಾಡುವ ಅಧಿಕಾರವಿಲ್ಲ, ಚೆಕ್‌ ಸಹಿ ಮಾಡುವ ಅಧಿಕಾರ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನೀಡಲಾಗಿದೆ. ಒಂದು ರೀತಿ ಖಜಾನೆಗಳ ಕೈ ಗ್ರಾಮ ಪಂಚಾಯತಿ ಅಧ್ಯಕ್ಷರ ಕೈಯಲ್ಲಿದೆ. ಈ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಬೇಕು ಎಂದು ಡಿಸಿಎಂ ಕಾರಜೋಳ ಕರೆ ನೀಡಿದರು.

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಗ್ರಾಮ ಪಂಚಾಯತಿಗೆ ಕೋಟಿ ಕೋಟಿ ಅನುದಾನ ಹರಿದು ಬರುತ್ತದೆ. ಈ ಅನುದಾನ ಗ್ರಾಮದ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು. ಪ್ರಸಕ್ತ ಆಯವ್ಯಯದಲ್ಲಿ ಪ್ರಾಯೋಗಿಕವಾಗಿ 20 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಮನೆಗಳನ್ನು ನೈಜ ಫಲಾನುಭವಿಗಳಿಗೆ ಕೊಡಿ. ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡಿ ಹಿಂಬಾಲಕರಿಗೆ, ಅರ್ಹರಿಲ್ಲದವರಿಗೆ ಹಂಚಿಕೆ ಮಾಡಿದರೆ ನಿಮ್ಮ ಸದಸ್ಯತ್ವ ಐದೇ ನಿಮಿಷಕ್ಕೆ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಹಿರಿಯ ಮುಖಂಡ ತುಳಸಿ ಮುನಿರಾಜುಗೌಡ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ. ಬೆಳ್ಳುಬ್ಬಿ, ಕರ್ನಾಟಕ ಸಾವಯವ ಬೀಜ ಪ್ರಮಾಣೀಕೃತ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಪಕ್ಷದ ಮುಖಂಡರಾದ ಚಂದ್ರಶೇಖರ ಕವಟಗಿ, ಮಾಜಿ ಶಾಸಕ ರಮೇಶ ಭೂಸನೂರ, ಪ್ರಕಾಶ ಅಕ್ಕಲಕೋಟ, ದಯಾಸಾಗರ ಪಾಟೀಲ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ಗೂಳಪ್ಪ ಶೆಟಗಾರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮತ್ತಿತರರು ವೇದಿಕೆ ಮೇಲಿದ್ದರು.

ಪರಾಜಿತ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಡಿಸಿಎಂ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳಿಗೆ ಅಭಯ ತುಂಬಿದ ಡಿಸಿಎಂ ಗೋವಿಂದ ಕಾರಜೋಳರು, ‘ಸೋತವರು ನಿರಾಸೆಯಾಗಬಾರದು, ಇಂದಿನ ಸೋಲು ನಾಳಿನ ಗೆಲುವಿನ ಸೋಪಾನ’ ನಿಮ್ಮ ಜೊತೆ ಪಕ್ಷದ ಎಲ್ಲ ಮುಖಂಡರು, ಚುನಾಯಿತ ಪ್ರತಿನಿಧಿಗಳು ಇದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು. ಸೋಲಿನಲ್ಲಿಯೇ ಸುಮ್ಮನೆ ಕೂರದೆ ಉತ್ತಮ ಕೆಲಸಗಳನ್ನು ಮಾಡಿ ಸರ್ಕಾರ ಸವಲತ್ತುಗಳನ್ನು ಜನತೆಗೆ ತಲುಪಿಸುವ ಒಳ್ಳೆಯ ಕೆಲಸ ಮಾಡಬೇಕು ಎಂದೂ ಕಿವಿಮಾತು ಹೇಳಿದರು.