ರಾಮದುರ್ಗ(ಜು. 01):  ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶೀಘ್ರದಲ್ಲಿ ಸಾವಿರ ಶಿಕ್ಷಕರ ಕಾಯಂ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ಮಂಗಳವಾರ ತಾಲೂಕಿನ ಬಟಕುರ್ಕಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆ ನಿರ್ಮಿಸಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಸತಿ ಶಾಲೆಗಳಿಗೆ ಈಗಾಗಲೇ 600 ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು 900 ಶಿಕ್ಷಕರ ನೇಮಕಾತಿ ಆದೇಶ ನೀಡಲು ಕೊರೋನಾ ಅಡ್ಡಿಯಾಗಿದ್ದು ಬರುವ ದಿನಗಳಲ್ಲಿ ಆದೇಶ ನೀಡಲಾಗುವುದು ಎಂದರು.

ಬೆಳಗಾವಿ: ಬರೀ ಹೆಣ್ಮಕ್ಕಳೇ ಜನಿಸಿದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ರಾಜ್ಯದಲ್ಲಿ 824 ವಸತಿ ಶಾಲೆಗಳಿದ್ದು 464 ಸ್ವಂತ ಕಟ್ಟಡ ಹೊಂದಿವೆ. ಈ ವರ್ಷ 181 ಕಟ್ಟಡ ಕಟ್ಟಲು ನಿರ್ಧರಿಸಿದ್ದು ಕಟ್ಟಡಗಳ ಚಾವಣಿಯಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್‌ ಅನ್ನು ಮಾರಾಟ ಮಾಡಲು ಯೋಚಿಸಲಾಗಿದೆ ಎಂದ ಸಚಿವರು, ರಾಜ್ಯದಲ್ಲಿ 160 ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಈ ಶಾಲೆಗಳಲ್ಲಿ ವಿಜ್ಞಾನ ವಿಭಾಗ ಆರಂಭಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತರಬೇತಿ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 2769 ಕೋಟಿ ಅನುದಾನ ನೀಡಿದ್ದು 36 ವಿವಿಧ ಇಲಾಖೆಗಳ ಮೂಲಕ ಪರಿಶಿಷ್ಟಜಾತಿ ಮತ್ತು ಪ.ಪಂಗಡಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಾರಿಗೆ ಸಚಿವ, ಉಪಮುಖ್ಯಮುಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಉತ್ತರ ಕರ್ನಾಟಕದ ಇಬ್ಬರು ಉಪಮುಖ್ಯಮಂತ್ರಿಗಳಾಗಿದ್ದೇವೆ. ಅಲ್ಲದೆ ಪ್ರಭಾವಿ ಖಾತೆಗಳನ್ನು ಹೊಂದಿದ್ದು, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಅವಕಾಶ ಬಳಸಿಕೊಂಡು ದಕ್ಷಿಣ ಮತ್ತು ಉತ್ತರ ಕರ್ನಾಟಕಗಳ ಮಧ್ಯ ಇರುವ ಅಂತರವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು, ರಾಮದುರ್ಗ ತಾಲೂಕಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಮಕ್ಕಳಿಗೆ ಸರ್ಟಿಫಿಕೇಟ್‌ ಶಿಕ್ಷಣ ನೀಡದೇ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳಾಗಿ ವಸತಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಹಿಂದುಳಿದ ಜನಾಂಗಕ್ಕೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ ತಾಲೂಕಿನ ಅಭಿವೃದ್ಧಿಗೆ ವಿವಿಧ ಯೋಜನೆಗಳಲ್ಲಿ ಅನುದಾನ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಮನವಿ ಮಾಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ಜಿಪಂ, ತಾಪಂ ಸದಸ್ಯರು ಸೇರಿದಂತೆ ಹಲವರಿದ್ದರು. ತಾಪಂ ಇಓ ಮುರಳಿಧರ ದೇಶಪಾಂಡೆ ಸ್ವಾಗತಿಸಿದರು. ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.